ದೊಡ್ಡಬಳ್ಳಾಪುರ :ಲಾಕ್ಡೌನ್ ಸಮಯದಲ್ಲಿ ಹಸಿದವರ ಹೊಟ್ಟೆ ತುಂಬಿಸಲು ಶಾಸಕ ಟಿ. ವೆಂಕಟರಮಣಯ್ಯ ನಗರದಲ್ಲಿ ಅನ್ನದಾಸೋಹ ಮಾಡುತ್ತಿದ್ದಾರೆ. ಆದರೆ, ಇದರ ಪ್ರಚಾರ ಪಡೆಯಲು ಶಾಸಕರು ರಾಜ್ಯಮಟ್ಟದ ನಾಯಕರನ್ನು ಕರೆಸುತ್ತಿದ್ದಾರೆನ್ನುವ ಆರೋಪವಿದೆ. ಕೊರೊನಾ 3ನೇ ಅಲೆಯ ಭೀತಿಗೆ ಕಾರಣಕರ್ತರಾಗುತ್ತಿದ್ದಾರೆನ್ನುವ ಅಸಮಾಧಾನ ಸೃಷ್ಟಿಯಾಗಿದೆ.
ದೊಡ್ಡಬಳ್ಳಾಪುರ ಶಾಸಕ ಟಿ. ವೆಂಕಟರಮಣಯ್ಯ ಕೊರೊನಾ ಸಮಯದಲ್ಲಿ ಬಡವರ ಹಸಿವು ನೀಗಿಸುವ ಕಾರ್ಯ ಮಾಡುತ್ತಿದ್ದಾರೆ. ಲಾಕ್ಡೌನ್ ಸಮಯದಲ್ಲಿ ಕೆಲಸವಿಲ್ಲದೇ ಸಾವಿರಾರು ಬಡವರು ಕಷ್ಟಕ್ಕೆ ಸಿಲುಕಿದರು. ಅವರ ಹಸಿವು ನೀಗಿಸಲು ಉದ್ಯಮಿಗಳ ನೆರವಿನಿಂದ ಅನ್ನದಾಸೋಹ ಮಾಡುತ್ತಿದ್ದಾರೆ. ಕಳೆದ ಒಂದು ತಿಂಗಳಿಂದ ನಗರದ 40 ಕೇಂದ್ರಗಳಲ್ಲಿ ಅನ್ನದಾಸೋಹ ಮಾಡುತ್ತಿದ್ದಾರೆ. ಶಾಸಕರ ಈ ಕಾರ್ಯಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ, ಶಾಸಕರು ಇದರ ಪ್ರಚಾರ ಪಡೆಯಲು ಮುಂದಾಗಿರುವುದು ಜನರಲ್ಲಿ ಆತಂಕವನ್ನುಂಟು ಮಾಡಿದೆ.
ಅನ್ನದಾಸೋಹ ಕಾರ್ಯಕ್ರಮಕ್ಕೆ ಶಾಸಕ ಟಿ ವೆಂಕಟರಮಣಯ್ಯ ರಾಜ್ಯ ಮಟ್ಟದ ನಾಯಕರನ್ನು ಆಹ್ವಾನಿಸಿದ್ದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಮಾಜಿ ಸಚಿವ ರಾಮಲಿಂಗರೆಡ್ಡಿ, ಮಾಜಿ ಸಚಿವ ಕೃಷ್ಣಬೈರೇಗೌಡ, ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್, ಮಾಜಿ ಸಚಿವ ಜಮೀರ್ ಅಹಮದ್ ಅನ್ನದಾಸೋಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.