ಬೆಂಗಳೂರು :ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಡುವೆ ಹೊರಗೆ ಉತ್ತಮ ಬಾಂಧವ್ಯ ಇರುವಂತೆ ಕಂಡು ಬಂದರೂ, ಆಂತರಿಕ ಶೀತಲ ಸಮರ ಮಾತ್ರ ನಿಲ್ಲುತ್ತಿಲ್ಲ. ದಿನಕ್ಕೊಂದು ಹೊಸ ವಿಚಾರಗಳ ಪ್ರಸ್ತಾಪ ಉಭಯ ನಾಯಕರ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವುದನ್ನು ಪದೇಪದೆ ಮನದಟ್ಟು ಮಾಡುತ್ತಿದೆ.
ಕಾಂಗ್ರೆಸ್ ಪಕ್ಷದಲ್ಲಿ ಸದಾಕಾಲ ವಲಸೆ ಹಾಗೂ ಮೂಲ ಕಾಂಗ್ರೆಸ್ಸಿಗರ ನಡುವೆ ತಿಕ್ಕಾಟ ನಡೆದೇ ಇದೆ. ಆದರೆ, ಅದೀಗ ಡಿಕೆಶಿ ಹಾಗೂ ಸಿದ್ದರಾಮಯ್ಯ ನಡುವಿನ ಶೀತಲ ಸಮರವಾಗಿ ಮಾರ್ಪಟ್ಟಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕೆಲ ತಿಂಗಳ ಹಿಂದೆ ಮುಂದಿನ ಮುಖ್ಯಮಂತ್ರಿ ವಿಚಾರವಾಗಿ ಎದ್ದ ದೊಡ್ಡಮಟ್ಟದ ಚರ್ಚೆ ಇಬ್ಬರು ನಾಯಕರ ನಡುವಿನ ಬಾಂಧವ್ಯ ಸರಿ ಇಲ್ಲ ಎನ್ನುವುದನ್ನು ತೋರಿಸಿ ಕೊಟ್ಟಿತ್ತು.
ಇದಾದ ಬಳಿಕ ಒಂದೆರಡು ಸಾರಿ ಕಾಂಗ್ರೆಸ್ ನಾಯಕರು ಪರಸ್ಪರ ಗುಸು ಗುಸು ಮಾತನಾಡಿದ ಸಂದರ್ಭ ಉಭಯ ನಾಯಕರ ನಡುವೆ ಎಲ್ಲವೂ ಸರಿ ಇಲ್ಲ ಎನ್ನುವುದನ್ನು ತೋರಿಸಿ ಕೊಟ್ಟಿತ್ತು. ಇತ್ತೀಚೆಗೆ ವಿಧಾನ ಪರಿಷತ್ ಮಾಜಿ ಸದಸ್ಯ ಅಶೋಕ್ ಪಟ್ಟಣ್ ಹಾಗೂ ಸಿದ್ದರಾಮಯ್ಯ ನಡುವಿನ ಸಂಭಾಷಣೆ ಇದಕ್ಕೆ ಸಾಕ್ಷಿಯಾಗಿದೆ.
ಇದನ್ನೂ ಓದಿ:ಹಿಜಾಬ್ ಧರಿಸಿಯೇ ವಿಧಾನಸೌಧದಲ್ಲಿ ಕೂರುತ್ತೇನೆ, ಯಾರಿಗೆ ತಾಕತ್ತಿದೆ ತಡೆಯಲಿ : ಕಾಂಗ್ರೆಸ್ ಶಾಸಕಿ
ನಾಯಕತ್ವದ ವಿಚಾರವಾಗಿ ಇಬ್ಬರು ನಾಯಕರ ನಡುವೆ ಹಿಂದಿನಿಂದಲೂ 'ಸಮರ' ನಡೆದುಕೊಂಡೇ ಬಂದಿದೆ. ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ ಹಲವರನ್ನು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಮ್ಮ ಬಳಿ ಕರೆಸಿಕೊಂಡು ಸಮಾಲೋಚಿಸಿ ವಿಶ್ವಾಸಕ್ಕೆ ಪಡೆಯುವ ಕಾರ್ಯವನ್ನು ಮಾಡುತ್ತಿದ್ದಾರೆ ಎನ್ನಲಾಗಿದೆ. ಒಬ್ಬರೇ ರಾಜ್ಯ ಕಾಂಗ್ರೆಸ್ ನಾಯಕತ್ವ ವಹಿಸಿಕೊಳ್ಳುವ ಸೂಚನೆಯನ್ನು ಈ ಮೂಲಕ ಅವರು ನೀಡುತ್ತಿದ್ದಾರೆ.
ಕೆಪಿಸಿಸಿಯಲ್ಲಿ ಸಿದ್ದು ಕಾರ್ಯತಂತ್ರ :ಇನ್ನೊಂದೆಡೆ ಪ್ರದೇಶ ಕಾಂಗ್ರೆಸ್ ಸಮಿತಿ ಚಟುವಟಿಕೆಯಲ್ಲಿ ಸಿದ್ದರಾಮಯ್ಯ ತಲೆ ತೂರಿಸುತ್ತಿದ್ದು, ಈವರೆಗೂ ಕೆಪಿಸಿಸಿಯ ವಿವಿಧ ಸಮಿತಿಗಳ ರಚನೆ ಆಗದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ತಮ್ಮ ಆಪ್ತರನ್ನು ಕೆಪಿಸಿಸಿ ಸಮಿತಿಗಳಲ್ಲಿ ನೇಮಿಸಲು ಪಟ್ಟು ಹಿಡಿದು ಕುಳಿತಿದ್ದಾರೆ ಎನ್ನಲಾಗಿದೆ.
ಪಕ್ಷದ ಹೈಕಮಾಂಡ್ ನಾಯಕರು ಇವರ ನಡುವಿನ ಶೀತಲ ಸಮರ ನಿವಾರಣೆಗೆ ದಿಲ್ಲಿಗೆ ಕರೆಸಿಕೊಂಡು ಮಾತುಕತೆ ನಡೆಸಿದ್ದಾರೆ. ಆದರೆ, ಅದ್ಯಾವುದೂ ಪ್ರಯೋಜನಕ್ಕೆ ಬಂದಿಲ್ಲ ಎಂದು ಹೇಳಲಾಗಿದೆ. ಇಬ್ಬರ ನಡುವಿನ ಶೀತಲ ಸಮರ ಪಕ್ಷ ಸಂಘಟನೆಗೆ ತೊಡಕುಂಟು ಮಾಡುತ್ತಿದ್ದು, ಹೈಕಮಾಂಡ್ ನಾಯಕರು ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸಹ ಇದಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದೆ ಒದ್ದಾಡುತ್ತಿದ್ದಾರೆ ಎಂಬುದು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿರುವ ಮಾತು.
ಸತೀಶ್ ಜಾರಕಿಹೊಳಿ ಮಾತು ಪುಷ್ಟಿ:ಈ ನಡುವೆ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಹಾಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ನಾಯಕರ ನಡುವಿನ ಆಂತರಿಕ ತಿಕ್ಕಾಟವನ್ನು ಬಹಿರಂಗಪಡಿಸಿದ್ದಾರೆ. ಪಕ್ಷದ ಪ್ರಮುಖ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಯಾವುದೇ ಜಗಳ ಇರಬಹುದು. ಅದರ ಬಗ್ಗೆ ನಾನೇನೂ ಹೇಳಲು ಇಷ್ಟಪಡುವುದಿಲ್ಲ. ಆದರೆ, ಮತ ಹಾಕುವ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಅನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಮ್ಮ ಪಕ್ಷದಲ್ಲಿ ಮಾತ್ರ ಇಂತಹ ಸಮಸ್ಯೆ ಇದೆಯಾ ಅಂತಾ ಪ್ರಶ್ನಿಸಿದ್ದಾರೆ.
ಸಿದ್ದು ಆಪ್ತರಿಗೆ ಅವಕಾಶ :ಇತ್ತೀಚಿನ ದಿನಗಳಲ್ಲಿ ಸಿದ್ದರಾಮಯ್ಯ ಆಪ್ತರಿಗೆ ಹೆಚ್ಚಿನ ಅವಕಾಶಗಳು ಲಭಿಸುತ್ತಿವೆ. ವಿಧಾನಪರಿಷತ್ ಪ್ರತಿಪಕ್ಷ ನಾಯಕರಾಗಿ ಆಯ್ಕೆಯಾಗಿರುವ ಬಿ ಕೆ ಹರಿಪ್ರಸಾದ್ ಸಹ ಸಿದ್ದರಾಮಯ್ಯ ಆಪ್ತರಲ್ಲಿ ಒಬ್ಬರು. ಇನ್ನು ಉಪನಾಯಕ ಗೋವಿಂದರಾಜು ಹಾಗೂ ಸಚೇತಕ ಪ್ರಕಾಶ್ ರಾಥೋಡ್ ಸಿದ್ದರಾಮಯ್ಯರ ಪಕ್ಕಾ ಆಪ್ತ ವಲಯದಲ್ಲಿ ಗುರುತಿಸಿಕೊಂಡವರಾಗಿದ್ದಾರೆ.
ವಿಧಾನಸಭೆ ಉಪನಾಯಕರಾಗಿ ಯು.ಟಿ. ಖಾದರ್ ಹಾಗೂ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಎಂಬಿ ಪಾಟೀಲ್ ಆಯ್ಕೆಯಾಗಿರುವುದು ಸಹ ಡಿಕೆ ಶಿವಕುಮಾರ್ಗೆ ದೊಡ್ಡ ಹಿನ್ನಡೆಯಾಗಿದೆ. ಒಬ್ಬರ ನಂತರ ಒಬ್ಬರು ಸಿದ್ದರಾಮಯ್ಯ ಆಪ್ತರೇ ಪಕ್ಷದ ಪ್ರಮುಖ ಸ್ಥಾನಗಳಿಗೆ ನೇಮಕಗೊಳ್ಳುವುದು ಸಹಜವಾಗಿ ಡಿಕೆಶಿ ಒಳಗೊಳಗೆ ಕುದಿಯುವಂತೆ ಮಾಡಿದೆ ಎನ್ನಲಾಗುತ್ತಿದೆ.
ಅಶೋಕ್ ಪಟ್ಟಣ್‌ಗೆ ಏಟು :ಇನ್ನೊಂದೆಡೆ ಸಿದ್ದರಾಮಯ್ಯ ಜೊತೆ ಗುಸುಗುಸು ಮಾತುಕತೆ ನಡೆಸಿದರು ಎನ್ನುವ ಕಾರಣಕ್ಕೆ ರಾಮದುರ್ಗದ ಮಾಜಿ ಶಾಸಕ ಅಶೋಕ್ ಪಟ್ಟಣ್‌ಗೆ ಡಿಕೆಶಿ ನೋಟಿಸ್ ನೀಡಿದ್ದಾರೆ. ಇದರ ಜೊತೆಗೆ ಮಂಡ್ಯದಲ್ಲಿ ಜೆಡಿಎಸ್ನಿಂದ ಉಚ್ಛಾಟಿತರಾಗಿರುವ ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡರನ್ನ ಕಾಂಗ್ರೆಸ್ಗೆ ಕರೆತರುವ ಮೂಲಕ ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿರುವ ಚೆಲುವರಾಯಸ್ವಾಮಿಗೆ ಏಟು ಕೊಡಲು ಡಿ ಕೆ ಶಿವಕುಮಾರ್ ತೀರ್ಮಾನಿಸಿದ್ದಾರೆ.
ಮಂಡ್ಯ ಜಿಲ್ಲೆ ನಾಗಮಂಗಲ ವಿಧಾನಸಭೆ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿರುವ ಶಿವರಾಮೇಗೌಡರನ್ನ ಪಕ್ಷಕ್ಕೆ ಕರೆತರುವ ಮೂಲಕ ಸಿದ್ದರಾಮಯ್ಯಗೆ ಸೆಡ್ಡು ಹೊಡೆಯಲು ಡಿಕೆಶಿ ತಂತ್ರಗಾರಿಕೆ ರೂಪಿಸಿದ್ದಾರೆ ಎನ್ನಲಾಗಿದೆ.
ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿರುವ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿಗೆ ಟಿಕೆಟ್ ಕೈತಪ್ಪಿಸಿ ತಮ್ಮ ಆಪ್ತ ಮಾಜಿ ಮೇಯರ್ ಸಂಪತ್ ರಾಜ್ಗೆ ಟಿಕೆಟ್ ಕೊಡಿಸಲು ಡಿಕೆಶಿ ಮುಂದಾಗಿದ್ದಾರೆ ಎನ್ನಲಾಗ್ತಿದೆ. ಇತ್ತೀಚಿನ ಘಟನೆಗಳು ಅದಕ್ಕೆ ಪುಷ್ಠಿ ನೀಡ್ತಿವೆ.
ಪಾದಯಾತ್ರೆ ಬೇಕಿರಲಿಲ್ಲ:ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರೋಧದ ನಡುವೆಯೇ ಪಾದಯಾತ್ರೆಯನ್ನು ಡಿಕೆಶಿ ಆಯೋಜಿಸಿದ್ದರು. ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಡಿಕೆ ಶಿವಕುಮಾರ್ ನೇತೃತ್ವದ ನಾಯಕರ ತಂಡ ಪಾದಯಾತ್ರೆ ಸಂಬಂಧ ಚರ್ಚೆ ನಡೆಸುತ್ತಿದ್ದರೆ, ಪಕ್ಕದಲ್ಲಿಯೇ ಕುಳಿತಿದ್ದ ಸಿದ್ದರಾಮಯ್ಯ ಇದರ ಬಗ್ಗೆ ಯಾವುದೇ ಮಾಹಿತಿ ಇಲ್ಲದವರಂತೆ ಕುಳಿತಿದ್ದರಂತೆ.
ಪಾದಯಾತ್ರೆ ನಡೆಸುವುದನ್ನು ಆಸಕ್ತಿದಾಯಕ ವಿಚಾರವಾಗಿ ಪರಿಗಣಿಸದ ಸಿದ್ದರಾಮಯ್ಯ, ಪಾದಯಾತ್ರೆಯಲ್ಲಿ ಕೇವಲ ಎರಡು ದಿನ ಮಾತ್ರ ಪಾಲ್ಗೊಂಡಿದ್ದರು. ಅನಾರೋಗ್ಯದ ನೆಪವೊಡ್ಡಿ ಬೆಂಗಳೂರಿಗೆ ಎರಡು ಬಾರಿ ವಾಪಸ್ಸಾಗಿದ್ದರು. ಇದೀಗ ಎರಡನೇ ಹಂತದ ಪಾದಯಾತ್ರೆ ಸಂಬಂಧ ಮಾತುಕತೆ ನಡೆಸಲು ಡಿಕೆಶಿ ಸಿದ್ಧತೆ ನಡೆಸಿದ್ದರೂ ಸಿದ್ದರಾಮಯ್ಯ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ ಎಂಬ ಮಾತಿದೆ.
ಕಾಂಗ್ರೆಸ್ನ ಇಬ್ಬರು ರಾಜ್ಯ ನಾಯಕರ ನಡುವಿನ ಶೀತಲ ಸಮರ ದಿನದಿಂದ ದಿನಕ್ಕೆ ಪಕ್ಷದ ಸಂಘಟನೆ ಹಾಗೂ ಬಲವರ್ಧನೆಗೆ ಹೊಡೆತ ನೀಡುತ್ತಿದೆ ಎಂದು ಹೇಳಲಾಗಿದೆ. ಹೈಕಮಾಂಡ್ ಮಧ್ಯಪ್ರವೇಶಿಸಿ ಇದಕ್ಕೊಂದು ಅಂತ್ಯ ಹಾಡುವ ಕಾರ್ಯ ಮಾಡದಿದ್ದರೆ, 2023ರ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವುದು ಇರಲಿ, 50ಕ್ಕೂ ಹೆಚ್ಚು ಸ್ಥಾನ ಗೆಲ್ಲಲು ಸಹ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂಬ ಮಾತು ಕೇಳಿ ಬರುತ್ತಿದೆ.
ಇದನ್ನೂ ಓದಿ:ಹಿಜಾಬ್-ಕೇಸರಿ ಶಾಲು ವಿವಾದ : ಭಾರತದ ಭವಿಷ್ಯಕ್ಕೆ ರಾಹುಲ್ ಗಾಂಧಿ ಅಪಾಯಕಾರಿ ಎಂದ ಕರ್ನಾಟಕ ಬಿಜೆಪಿ