ಬೆಂಗಳೂರು :ಹಾಸನದಲ್ಲಿ ಕಲ್ಲು ಗಣಿಗಾರಿಕೆ ಪ್ರದೇಶದಲ್ಲಿ ಸ್ಫೋಟ ಸಂಭವಿಸಿರುವ ಘಟನೆ ಖಂಡಿಸಿರುವ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್, ಇಂತಹ ಘಟನೆಗಳಿಗೆ ಅಂತ್ಯವೇ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಟ್ವೀಟ್ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಶಿವಮೊಗ್ಗ ಮತ್ತು ಚಿಕ್ಕಬಳ್ಳಾಪುರದಲ್ಲಿ ನಡೆದ ಸ್ಫೋಟದ ನಂತರ ಈಗ ಹಾಸನದಲ್ಲೂ ಅಂತದ್ದೇ ಘಟನೆ ನಡೆದಿದೆ. ಹಾಸನದ ಚಾಕೇನಹಳ್ಳಿಯಲ್ಲಿ ಕಲ್ಲು ಗಣಿಗಾರಿಕೆಗೆ ಸ್ಫೋಟಕ ಸಂಗ್ರಹಿಸಿದ್ದ ಗೋದಾಮಿನಲ್ಲಿ ಸ್ಫೋಟ ಸಂಭವಿಸಿ ವ್ಯಕ್ತಿಯೊಬ್ಬ ಮೃತನಾಗಿದ್ದಾನೆ, ಇಬ್ಬರು ಗಾಯಗೊಂಡಿದ್ದಾರೆ. ರಾಜ್ಯದಲ್ಲಿ ಈ ರೀತಿಯ ಘಟನೆಗಳಿಗೆ ಅಂತ್ಯವೇ ಇಲ್ಲವೇ?
ಒಂದರ ನಂತರ ಒಂದರಂತೆ ಸ್ಫೋಟಗಳು ನಡೆಯುತ್ತಿದ್ದರೂ ಬಿಜೆಪಿ ಸರ್ಕಾರ ಮೌನವಹಿಸಿರೋದು ಯಾಕೆ? ರಾಜ್ಯದಲ್ಲಿ ಸ್ಫೋಟಕಗಳ ಅಕ್ರಮ ಸಾಗಾಟ ಮತ್ತು ಸಂಗ್ರಹ ಅವ್ಯಾಹತವಾಗಿ ನಡೆಯುತ್ತಿದೆ ಅನ್ನೋದಕ್ಕೆ ಶಿವಮೊಗ್ಗ, ಚಿಕ್ಕಬಳ್ಳಾಪುರ ಮತ್ತು ಈಗ ಹಾಸನದಲ್ಲಿ ನಡೆದಿರೋ ಘಟನೆಗಳೇ ಸಾಕ್ಷಿ ಎಂದಿದ್ದಾರೆ.
ನಿಯಮ ಉಲ್ಲಂಘನೆಯೇ ದುರಂತಗಳಿಗೆ ಕಾರಣ :ರಾಜ್ಯದಲ್ಲಿ ಸ್ಫೋಟಕಗಳನ್ನು ಸಾಗಿಸುವಾಗ ಸೂಕ್ತ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇದ್ಯಾವುದೂ ಇಲ್ಲದೇ ಎಚ್ಚರಿಕೆ ತಪ್ಪಿದ್ದೇ ದುರಂತಗಳಿಗೆ ಕಾರಣ. ನಿಯಮ ಉಲ್ಲಂಘಿಸಿ ಸಾಗಾಣಿಕೆ ಮಾಡಿದಾಗ ಇಂತಹ ಘಟನೆಗಳು ಆಗುತ್ತವೆ.