ಬೆಂಗಳೂರು: ಕರವೇ ಕಾರ್ಯಕರ್ತರು ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾರೆ, ತಮಗೆ ರಕ್ಷಣೆ ಇಲ್ಲ ಎಂದು ಆರೋಪಿಸಿ ವೈದ್ಯರ ನಡೆಸುತ್ತಿರುವ ಪ್ರತಿಭಟನೆ ಇಂದಿಗೆ 8ನೇ ದಿನಕ್ಕೆ ಕಾಲಿಟ್ಟಿದೆ. ಡಿಸಿಎಂ ಅಶ್ವತ್ಥ್ ನಾರಾಯಣ್, ಬೆಂಗಳೂರು ಪೊಲೀಸ್ ಕಮೀಷನರ್ ಮಾತಿಗೂ ಬಗ್ಗದ ವೈದ್ಯರು, ಪ್ರತಿಭಟನೆ ಮುಂದುವರೆಸಿದ್ದಾರೆ.
ಖಾಸಗಿ ಆಸ್ಪತ್ರೆಗಳು ಸಹ ಈ ಪ್ರತಿಭಟನೆಗೆ ಸಾಥ್ ನೀಡಿದ್ದು, ರಾಜ್ಯಾದ್ಯಂತ ಒಪಿಡಿ ಸೇವೆ ಬಂದ್ ಮಾಡಲು ಕರೆ ಕೊಟ್ಟಿವೆ. ಬೆಳಗ್ಗೆ 6 ರಿಂದ ಸಂಜೆ 6 ರ ವರಗೆ ಒಪಿಡಿ ಬಂದ್ ಮಾಡಿ ಪ್ರತಿಭಟಿಸಲು ಎಲ್ಲಾ ವೈದ್ಯರು ಮುಂದಾಗಿದ್ದಾರೆ.
ಇತ್ತ ವೈದ್ಯರ ಪಟ್ಟು ಬಿಡದ ಹೋರಾಟದಿಂದ ರೋಗಿಗಳು ನಿತ್ಯ ತೊಂದರೆ ಅನುಭವಿಸುವಂತಾಗಿದೆ. ರೋಗಿಗಳ ಹಿತದೃಷ್ಟಿಯಿಂದ ಪೊಲೀಸರಿಗೆ ಶರಣಾಗಲು ಕರವೇ ಕಾರ್ಯಕರ್ತರು ಮುಂದಾಗಿದ್ದಾರೆ. ನಿನ್ನೆ ಕರವೇ ಅಧ್ಯಕ್ಷ ನಾರಾಯಣ್ ಗೌಡ ಸಭೆ ನಡೆಸಿದ್ದು, ಇಂದು 35 ಜನರು ಪೊಲೀಸರಿಗೆ ಶರಣಾಗಲಿದ್ದಾರೆ ಎನ್ನಲಾಗಿದೆ.