ಬೆಂಗಳೂರು: ಸರ್ಕಾರದಲ್ಲಿ ಮುಖ್ಯಮಂತ್ರಿ ಬದಲಾವಣೆ ಹಾಗೂ ಕೊರೊನಾ ಮೂರನೇ ಅಲೆ ಆತಂಕದ ಹಿನ್ನೆಲೆಯಲ್ಲಿ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆ ಮುಂದೂಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗ್ತಿದೆ.
ಈ ಚುನಾವಣೆಯನ್ನು ಡಿಸೆಂಬರ್ ವರೆಗೂ ಮುಂದೂಡಬೇಕೆಂದು ರಾಜ್ಯ ಚುನಾವಣಾ ಆಯೋಗಕ್ಕೆ ಸರ್ಕಾರ ಶಿಫಾರಸು ಸಲ್ಲಿಸಿದೆ. ಕೊರೊನಾ ಮೂರನೇ ಅಲೆ ಜೊತೆಗೆ ಡೆಲ್ಟಾ ಪ್ಲಸ್ ತೀವ್ರತೆ ಕಂಡು ಬರುತ್ತಿವೆ. ಗಡಿ ಜಿಲ್ಲೆಗಳಲ್ಲಿ ಸರ್ಕಾರ ವಾರಾಂತ್ಯದ ಕರ್ಫ್ಯೂ ಘೋಷಣೆ ಮಾಡಲಾಗಿದೆ. ಬೆಳಗಾವಿ ಲೋಕಸಭೆ, ಬಸವಕಲ್ಯಾಣ ಹಾಗೂ ಮಸ್ಕಿ ವಿಧಾನಸಭೆ ಉಪ ಚುನಾವಣೆಯಲ್ಲಿ ಕಾರ್ಯ ನಿರ್ವಹಿಸಿದ್ದ ಹಲವು ಶಿಕ್ಷಕರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದರು. ಇದು ಸರ್ಕಾರದ ಇಮೇಜಿಗೆ ಧಕ್ಕೆ ತಂದಿತ್ತು. ಹಾಗಾಗಿ, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಚುನಾವಣೆ ನಡೆಸಿದರೆ ಮತ್ತಷ್ಟು ಸಮಸ್ಯೆ ಎದುರಾಗುವ ಸಾಧ್ಯತೆ ಇರುವುದರಿಂದ ಚುನಾವಣೆ ಮುಂದೂಡುವುದು ಸೂಕ್ತ ಎಂಬ ನಿಲುವಿಗೆ ಸರ್ಕಾರ ಬಂದಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಸರ್ಕಾರಕ್ಕೆ ವ್ಯತಿರಿಕ್ತ ಪರಿಣಾಮ :
ಇದಲ್ಲದೆ ಕೊರೊನಾ ಎರಡನೇ ಅಲೆ ನಿರ್ವಹಣೆಯಲ್ಲಿ ಸರ್ಕಾರ ಎಡವಟ್ಟು ಮಾಡಿಕೊಂಡಿತ್ತು. ಆಕ್ಸಿಜನ್ ಹಾಗೂ ಔಷಧ ಕೊರತೆಯಿಂದಾಗಿ ಬಹಳಷ್ಟು ಜನ ಸಾವನ್ನಪ್ಪಿದರು. ಹಾಗಾಗಿ, ಕೊರೊನಾ ಎರಡನೇ ಅಲೆ ನಿರ್ವಹಣೆ ಬಗ್ಗೆ ಜನರಲ್ಲಿ ಸಮಾಧಾನವಿಲ್ಲ. ಇಂತಹ ಸಂದರ್ಭದಲ್ಲಿ ಚುನಾವಣೆ ನಡೆಸಿದರೆ ಸರ್ಕಾರದ ವಿರುದ್ಧ ಜನಾಭಿಪ್ರಾಯ ವ್ಯಕ್ತವಾಗಬಹುದೆಂಬ ಭಯವೂ ಒಳಗೊಳಗೇ ಬಿಜೆಪಿ ಸರ್ಕಾರಕ್ಕೆ ಇದೆ. ಇದು ಒಂದು ಕಾರಣ ಚುನಾವಣೆ ಮುಂದೂಡಲು ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ರಾಜ್ಯದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ ನಡೆದು ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಹೊಸ ಸರ್ಕಾರ ರಚನೆಯಾಗಿದೆ. ಸಂಪುಟ ರಚನೆ ವಿಚಾರದಲ್ಲಿ ಸಣ್ಣ ಪುಟ್ಟ ಅಸಮಾಧಾನ, ಗೊಂದಲಗಳು ಇನ್ನೂ ಜೀವಂತವಾಗಿವೆ. ಇದು ಸಹ ಕೆಲವೆಡೆ ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದೆಂಬ ಆತಂಕವೂ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ.