ಬೆಂಗಳೂರು/ಬೆಳಗಾವಿ/ಕೊಪ್ಪಳ:ಸರ್ಕಾರ ಮತ್ತು ಜನರ ನಿರ್ಲಕ್ಷ್ಯದ ಫಲವಾಗಿ ದೇಶದೆಲ್ಲೆಡೆ ಕೊರೊನಾ ಹೊಸ ಸ್ವರೂಪದಲ್ಲಿ ಅತ್ಯಂತ ವೇಗವಾಗಿ ಹಬ್ಬಿ ಜನರನ್ನು ಕಂಗಾಲು ಮಾಡಿಬಿಟ್ಟಿದೆ. ಈ ಮಧ್ಯೆ, ಮನುಷ್ಯನ ದೇಹಕ್ಕೆ ಮಹಾಮಾರಿಯ ಸೋಂಕು ಹೊಕ್ಕಿದೆಯೋ, ಇಲ್ಲವೋ ಎಂಬುದನ್ನು ಖಾತ್ರಿ ಮಾಡಿಸಿಕೊಳ್ಳೋದು ಹೇಗೆ? ಹೌದು. ಇದನ್ನು ತಿಳಿಯಲು ಆರ್ಟಿ-ಪಿಸಿಆರ್ ಎಂಬ ವೈದ್ಯಕೀಯ ಪರೀಕ್ಷೆ ನಡೆಸೋದು ಸರ್ವೇ ಸಾಮಾನ್ಯವಾಗಿದೆ.
ಈ ಟೆಸ್ಟ್ ಬಗ್ಗೆ ಇತ್ತೀಚಿಗಿನ ದಿನಗಳಲ್ಲಿ ಗೊತ್ತಿರದವರಿಲ್ಲ. ಆದ್ರೆ, ಸೋಂಕು ಸ್ವರೂಪ ಜಟಿಲವಾಗುತ್ತಾ ಹೋಗುತ್ತಿದ್ದಂತೆ ಪರೀಕ್ಷಾ ವರದಿ ಮೇಲೂ ಸಂಶಯ ಹುಟ್ಟುತ್ತಿದೆ. ಆರ್-ಟಿಪಿಸಿಆರ್ ಪರೀಕ್ಷೆಯಲ್ಲಿ ಸೋಂಕು ಲಕ್ಷಣಗಳಿದ್ದರೂ ನೆಗೆಟಿವ್ ವರದಿ ಬರುತ್ತಿರುವುದು ಇದಕ್ಕೆ ಕಾರಣ. ಹಾಗಾಗಿ, ಆರ್ಟಿ-ಪಿಸಿಆರ್ ಪರೀಕ್ಷಾ ಕಿಟ್ ಸರಿ ಇದೆಯೇ ಎನ್ನುವುದು ಜನರ ಪ್ರಶ್ನೆ.
ಭಾರತೀಯ ವೈದ್ಯಕೀಯ ಪರಿಷತ್ ಅಥವಾ ICMR ಮಾರ್ಗಸೂಚಿಯಂತೆ ಗುಣಮಟ್ಟದ ಆರ್‌ಟಿಪಿಸಿಆರ್ ಕಿಟ್ಗಳನ್ನು ಬಳಕೆ ಮಾಡಬೇಕಿದೆ. ಅದರಂತೆ ಆರ್‌ಟಿಪಿಸಿಆರ್ ಕಿಟ್ ಹಾಗೂ ಆ್ಯಂಟಿಜೆನ್ ಕಿಟ್ಗಳನ್ನು ಆರೋಗ್ಯ ಇಲಾಖೆ ಖರೀದಿಸುತ್ತಾ ಬಂದಿದ್ದು, ಆ್ಯಂಟಿಜೆನ್ ಕಿಟ್ಗಳಲ್ಲಿ ಲೋಪದೋಷಗಳಿವೆ ಎಂಬ ಆರೋಪಗಳು ಆಗಾಗ ಕೇಳಿ ಬರುತ್ತವೆ. ಅನಿವಾರ್ಯತೆ ಹಾಗೂ ತ್ವರಿತ ಫಲಿತಾಂಶದ ಸಲುವಾಗಿ ಸುಧಾರಿತ ಆಂಟಿಜೆನ್ ಕಿಟ್ಗಳನ್ನು ತರಿಸಿ ಕೊರೊನಾ ಪರೀಕ್ಷೆ ನಡೆಸಲಾಗುತ್ತಿದೆ. ಬೆಂಗಳೂರಿನಲ್ಲಿ ಸರ್ಕಾರಿ ಸೇರಿದಂತೆ ಖಾಸಗಿ ಆಸ್ಪತ್ರೆ, ಲ್ಯಾಬ್ಗಳು ಉತ್ತಮ ಗುಣಮಟ್ಟದ ಕಿಟ್ಗಳನ್ನೇ ಬಳಸುತ್ತವೆ ಎನ್ನುವುದು ಸದ್ಯದ ಮಟ್ಟಿಗೆ ನಿರಾಂತಕದ ವಿಚಾರ.