ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರ ಉಚ್ಚಾಟನೆಗೆ ವೇದಿಕೆ ಸಿದ್ದವಾಗುತ್ತಿದ್ದು, ಇಂದು ನಡೆಯಲಿರುವ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಧಾರ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಪಕ್ಷದ ರಾಜ್ಯ ಕಚೇರಿಯಲ್ಲಿ ಬೆಳಿಗ್ಗೆ ಮಾಜಿ ಸಿಎಂ, ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಡೆಯಲಿದ್ದು, ಇದರ ನಡುವೆಯೇ ಕೋರ್ ಕಮಿಟಿ ಸಭೆ ಸಹ ನಡೆಯಲಿದೆ ಎಂದು ತಿಳಿದುಬಂದಿದೆ. ಸದ್ಯದ ಬೆಳವಣಿಗೆಗಳ ಕುರಿತು ನಾಯಕರು ಈ ಸಭೆಯಲ್ಲಿ ಚರ್ಚೆ ನಡೆಸಲಿದ್ದಾರೆ.
ಸದ್ಯ ಪಕ್ಷದಲ್ಲಿ 19 ಶಾಸಕರು, 8 ಮಂದಿ ವಿಧಾನಪರಿಷತ್ ಸದಸ್ಯರಿದ್ದು, ಇದರಲ್ಲಿ ಮರಿತಿಬ್ಬೇಗೌಡ ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿದ್ದಾರೆ. ಅವರು ಹೊರತುಪಡಿಸಿದರೆ ಉಭಯ ಸದನಗಳಲ್ಲಿ 26 ಜೆಡಿಎಸ್ ಸಂಖ್ಯಾ ಬಲ ಇದೆ. ಜೆಡಿಎಸ್ನಲ್ಲಿರುವ ಶಾಸಕರ ಪೈಕಿ ಮೂರನೇ ಎರಡು ಭಾಗದಷ್ಟು ಶಾಸಕ ಬಲವನ್ನು ತೋರಿಸಿ ಸಿಎಂ ಇಬ್ರಾಹಿಂ ಅವರನ್ನು ಪಕ್ಷದಿಂದ ಉಚ್ಚಾಟಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ನನ್ನದೇ ಒರಿಜಿನಲ್ ಜೆಡಿಎಸ್ ಎಂದಿರುವ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ವಿರುದ್ಧ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಹಾಗೂ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಕಿಡಿಕಿಡಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆ ನಡೆಯಲಿರುವ ಜೆಡಿಎಸ್ ಶಾಸಕಾಂಗ ಸಭೆಯಲ್ಲಿ ಸಿ ಎಂ ಇಬ್ರಾಹಿಂ ಆಟಕ್ಕೆ ಪೂರ್ಣ ವಿರಾಮ ಹಾಕಲು ನಾಯಕರು ಮುಂದಾಗಿದ್ದಾರೆ ಎನ್ನಲಾಗಿದೆ.
ಕುಮಾರಸ್ವಾಮಿಗೆ ಇಬ್ರಾಹಿಂ ಸವಾಲ್: ನಮ್ಮದೇ ಒರಿಜಿನಲ್ ಜಾತ್ಯತೀತ ಜನತಾದಳ. ನಾನೇ ಅದರ ಅಧ್ಯಕ್ಷ. ಇದು ನನ್ನ ಮನೆ. ಮುಂದೇನಾಗುತ್ತದೆ ಎಂಬುದನ್ನು ಪರದೆ ಮೇಲೆ ನೋಡಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ. ಎಂ ಇಬ್ರಾಹಿಂ 'ದಳ'ಪತಿಗಳಿಗೆ ಖಡಕ್ (ಅಕ್ಟೋಬರ್ 16-2023) ಸಂದೇಶ ರವಾನಿಸಿದ್ದರು.