ಬೆಂಗಳೂರು:ನಮ್ಮ ದೇಶದಲ್ಲಿ ಹಾವುಗಳಿಗೆ ಉನ್ನತವಾದ ಸ್ಥಾನವಿದ್ದು, ದೇವರ ಸ್ಥಾನದಲ್ಲಿ ನಾವು ನಾಗರಹಾವುಗಳನ್ನು ನೋಡುತ್ತೇವೆ. ಹಾವಿಗೆ ಹಾಲೆರೆದು ಭಕ್ತಿಯಿಂದ ನಮಿಸುವ ಸಂಪ್ರದಾಯ ನಮ್ಮದಾಗಿದ್ದು, ಅದೇ ಕಾರಣಕ್ಕೆ ನಮ್ಮಲ್ಲಿ ನಾಗರಪಂಚಮಿ ಹಬ್ಬಕ್ಕೆ ಬಹಳ ಮಹತ್ವವಿದೆ. ಹಾವು ಎಂದರೆ ಎಲ್ಲರಿಗೂ ಭಯ ಇರುತ್ತೆ. ದೂರದಲ್ಲಿ ಹಾವು ಹೆಡೆ ಎತ್ತಿದರೂ, ನಮ್ಮ ಜಂಘಾಬಲವೇ ಕುಸಿದಂತಾಗುತ್ತದೆ.
ಕೆಲವರಿಗೆ ಹಾವಿನ ಕುರಿತು ಪೂಜನೀಯ ಭಾವನೆಯಿದ್ದರೆ, ಇನ್ನೂ ಕೆಲವರ ಮನಸಿನಲ್ಲಿ ಅದು ವಿಷಪೂರಿತ ಜೀವಿಯೆಂಬ ಭಾವನೆಯಿದೆ. ರಾಜ್ಯದಲ್ಲಿ ಅನೇಕ ಕಡೆಗಳಲ್ಲಿ ವಿಷಪೂರಿತ ಹಾವುಗಳ ಕಾಟವಿದ್ದು, ಜಮೀನು ಹಾಗೂ ಜನಬಿಡ ಪ್ರದೇಶದಲ್ಲಿ ಹಾವು ಕಡಿತದಿಂದ ಅನೇಕ ಜನರು ಸಾವನ್ನಪ್ಪುತ್ತಿರುವುದು ಇದಕ್ಕೆ ಸಾಕ್ಷಿ. ಆದರೆ ಇತ್ತೀಚಿನ ದಿನಗಳಲ್ಲಿ ಹಾವು ಕಂಡರೆ ಜನರು, ಉರಗ ಪ್ರೇಮಿಗಳನ್ನು ಕರೆಸುತ್ತಿದ್ದಾರೆ. ಹಾವುಗಳನ್ನ ಸೆರೆ ಹಿಡಿದು ರಕ್ಷಣೆ ಮಾಡಿ ಕಾಡಿಗೆ ಬಿಡಲಾಗುತ್ತಿದೆ.
ರಾಯಚೂರು ಜಿಲ್ಲೆಯ ಬಲ ಭಾಗದಲ್ಲಿ ಕೃಷ್ಣ ಹಾಗೂ ಎಡಭಾಗದಲ್ಲಿ ತುಂಗಭದ್ರಾ ನದಿಗಳು ಹರಿಯುತ್ತವೆ. ಆದ್ದರಿಂದ ಈ ನೀರಾವರಿ ಪ್ರದೇಶದಲ್ಲಿ ಅಧಿಕವಾಗಿ ಹಾವುಗಳು ಕಂಡು ಬರುತ್ತವೆ. ಹೊಲ-ಗದ್ದೆಗಳಿಗೆ ತೆರಳಿದ ಕೆಲ ರೈತರು ವಿಷಪೂರಿತ ಹಾವುಗಳ ಕಡಿತದಿಂದ ಮೃತಪಟ್ಟಿದ್ದು, ಜನವರಿಯಿಂದ ಇಲ್ಲಿಯವರೆಗೆ 20ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.