ಬೆಂಗಳೂರು:ನಾಲ್ಕನೇ ಅಲೆ ಕಾಣಿಸಿಕೊಳ್ಳುವ ಸಾಧ್ಯತೆ ಇರುವ ಬೆನ್ನಲ್ಲೇ ಸಿಲಿಕಾನ್ ಸಿಟಿಯ ಹೊರವಲಯ ಕೋವಿಡ್ ಹಾಟ್‌ಸ್ಪಾಟ್ ಆಗಿ ಪರಿವರ್ತನೆಗೊಳ್ಳುತ್ತಿದೆ. ಮೊದಲು, ಎರಡನೇ ಹಾಗೂ ಮೂರನೇ ಅಲೆಯ ಸಂದರ್ಭದಲ್ಲಿ ನಗರದ ಹೊರ ವಲಯಗಳೇ ಹಾಟ್ ಸ್ಪಾಟ್ ಆಗಿದ್ದವು. ಇದೀಗ ನಾಲ್ಕನೇ ಅಲೆ ಆರಂಭದ ಸಂದರ್ಭದಲ್ಲೂ ಇದೇ ವಲಯಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ ಎಂದು ಪಾಲಿಕೆ ಅಧಿಕಾರಿಗಳು ಹೇಳಿದ್ದಾರೆ.
ನಗರದಲ್ಲಿ 1,681 ಸಕ್ರಿಯ ಕೋವಿಡ್ ಪ್ರಕರಣಗಳು ದಾಖಲಾಗಿದೆ. ಇವುಗಳ ಪೈಕಿ ಬಹುತೇಕ ಪ್ರಕರಣಗಳು ಹೊರವಲಯಗಳಲ್ಲಿರುವ ವಾರ್ಡ್‌ಗಳಲ್ಲೇ ಹೆಚ್ಚು ಎನ್ನುವುದು ಅಂಕಿ ಅಂಶಗಳಿಂದ ಗೊತ್ತಾಗಿದೆ. ಬೆಳ್ಳಂದೂರು, ಹಗದೂರು, ವರ್ತೂರು, ಹೆಚ್‌ಎಸ್‌ಆರ್ ಬಡಾವಣೆ, ದೊಡ್ಡನೆಕ್ಕುಂದಿ, ಕೋರಮಂಗಲ, ರಾಜಾಜಿನಗರ, ಹೂಡಿ, ಕಾಡುಗೋಡಿ, ಹೊರಮಾವು ವಾರ್ಡ್‌ಗಳಲ್ಲಿ ಅತಿ ಹೆಚ್ಚು ದೈನಂದಿನ ಕೊರೊನಾ ಪ್ರಕರಣಗಳು ದಾಖಲಾಗುತ್ತಿವೆ.
ಹೊರ ರಾಜ್ಯದಿಂದ ವಲಸೆ ಕಾರಣ:ಕೋವಿಡ್ ಸೋಂಕು ಹೆಚ್ಚಿರುವ ಪ್ರದೇಶಗಳಲ್ಲಿ ರಾಜಾಜಿನಗರ, ಕೋರಮಂಗಲ ಹೊರತುಪಡಿಸಿದರೆ ಉಳಿದ ಎಂಟು ವಾರ್ಡ್‌ಗಳು ಹೊರ ವಲಯ ಪ್ರದೇಶಗಳಾಗಿದೆ. ಹೊರ ವಲಯಗಳಲ್ಲಿರುವ ವಾರ್ಡ್‌ಗಳಲ್ಲಿ ಹೊರ ರಾಜ್ಯದಿಂದ ವಲಸೆ ಬಂದು ನೆಲೆಸಿರುವವರೇ ಹೆಚ್ಚಿರುವ ಕಾರಣ ಈ ಪ್ರದೇಶಗಳಲ್ಲಿ ಕೋವಿಡ್ ಸೋಂಕು ಹೆಚ್ಚಳಕ್ಕೆ ಕಾರಣವಿರಬಹುದು ಎಂದು ಅಂದಾಜಿಸಲಾಗಿದೆ.