ಬೆಂಗಳೂರು: ಲೋಕಸಭೆ ಚುನಾವಣಾ ಫಲಿತಾಂಶದ ನಂತರ ಕೆಲ ಖಾತೆಗಳನ್ನು ಬದಲಾವಣೆ ಮಾಡಲು ಜೆಡಿಎಸ್ ಚಿಂತನೆ ನಡೆಸಿದೆಯಂತೆ. ಜೆಡಿಎಸ್ ಪಾಲಿನ 10 ಖಾತೆಗಳಲ್ಲಿ ಕೆಲ ಸಚಿವರ ಖಾತೆ ಬದಲಾವಣೆ ಮಾಡಲು ಸಿಎಂ ಹೆಚ್.ಡಿ ಕುಮಾರಸ್ವಾಮಿ ಆಲೋಚಿಸಿದ್ದಾರೆ ಎನ್ನಲಾಗಿದೆ.
ಬಿಎಸ್ಪಿ ಶಾಸಕ ಮಹೇಶ್‌ರಿಂದ ತೆರವಾಗಿರೋದು ಸೇರಿ ಜೆಡಿಎಸ್ ಬಳಿ ಈಗ ಎರಡು ಸ್ಥಾನಗಳು ಖಾಲಿಯಿವೆ.ಲೋಕಸಭಾ ಫಲಿತಾಂಶದ ಬಳಿಕ ಆ 2 ಸ್ಥಾನ ಭರ್ತಿ ಮಾಡುವ ಸಾಧ್ಯತೆ ಇದ್ದು, ವಿಧಾನ ಪರಿಷತ್ನ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಹಾಗೂ ಬಿ ಎಂ ಫಾರೂಕ್ ಅವರಿಗೆ ಸಚಿವ ಸ್ಥಾನ ಸಿಗಲಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹಾಗೂ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಅವರ ಸಚಿವ ಸ್ಥಾನ ಮಂಡ್ಯ ಲೋಕಸಭೆ ಚುನಾವಣಾ ಫಲಿತಾಂಶದ ಮೇಲೆ ನಿಂತಿದೆ ಎಂದು ಹೇಳಲಾಗುತ್ತಿದೆ. ಕಾರಣ, ಇಬ್ಬರು ಸಚಿವರ ಕ್ಷೇತ್ರಗಳಲ್ಲೂ ಜೆಡಿಎಸ್ ಪರ ಮತಗಳು ಬಿದ್ದಿಲ್ಲವೆಂಬ ಗುಪ್ತಚರ ಇಲಾಖೆ ಮಾಹಿತಿ ಸಿಎಂಗೆ ತಲುಪಿದೆ ಎನ್ನಲಾಗಿದೆ.
ಹಾಗಾಗಿ, ಮಂಡ್ಯ ಫಲಿತಾಂಶ ವ್ಯತಿರಿಕ್ತವಾಗಿ ಬಂದರೆ ಸಚಿವ ಸ್ಥಾನಕ್ಕೆ ಕೋಕ್ ಬೀಳಲಿದೆ ಎಂದು ಹೇಳಲಾಗ್ತಿದೆ. ಒಂದು ವೇಳೆ ಸಚಿವ ಸ್ಥಾನಕ್ಕೆ ಕೋಕ್ ನೀಡಿದ್ರೆ, ಮಳವಳ್ಳಿ ಶಾಸಕ ಡಾ.ಅನ್ನದಾನಿ ಹಾಗೂ ಸಕಲೇಶಪುರ ಕ್ಷೇತ್ರದ ಶಾಸಕ ಹೆಚ್ ಕೆ ಕುಮಾರಸ್ವಾಮಿ ಅವರಿಗೆ ಬಂಪರ್ ಗಿಫ್ಟ್ ಸಿಗುತ್ತಾ ಎಂಬ ಲೆಕ್ಕಾಚಾರಗಳ ಕುರಿತು ಜೆಡಿಎಸ್ ವಲಯದಲ್ಲಿ ಚರ್ಚೆಯಾಗುತ್ತಿವೆ. ಮೇ 23ರ ಫಲಿತಾಂಶದ ನಂತರ 3 ಖಾತೆ ಬದಲಾವಣೆ ಸಾಧ್ಯತೆ ಇದ್ದು, ಖಾಲಿ ಉಳಿದ ನಿಗಮ ಮಂಡಳಿಯನ್ನೂ ಭರ್ತಿ ಮಾಡಲು ಜೆಡಿಎಸ್ ವರಿಷ್ಠರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.