ಕರ್ನಾಟಕ

karnataka

ETV Bharat / state

ಜೆಡಿಎಸ್​​​ನ ಪ್ರಭಾವಿ ನಾಯಕರನ್ನು ಸೆಳೆಯಲು ಬಿಜೆಪಿ ಹೆಣೆದಿದೆಯೇ ರಣತಂತ್ರ? - ಉಪಮುಖ್ಯಮಂತ್ರಿ ಡಾ. ಅಶ್ವಥ್​​​ ನಾರಾಯಣ

ಜೆಡಿಎಸ್​​​ ಪಕ್ಷವನ್ನು ಮುಗಿಸುವ ಉದ್ದೇಶದಿಂದ ಪಕ್ಷದ ಪ್ರಭಾವಿ ನಾಯಕರನ್ನು ಸೆಳೆಯಲು ಬಿಜೆಪಿ ನಾಯಕರು ರಣತಂತ್ರ ರೂಪಿಸುತ್ತಿದ್ದಾರೆ ಎನ್ನಲಾಗ್ತಿದೆ. ಜೆಡಿಎಸ್ ಶಾಸಕರನ್ನು ಸೆಳೆಯಲು ಕಾಂಗ್ರೆಸ್​​ನ ಪ್ರಭಾವಿ ನಾಯಕರೊಬ್ಬರು ಸಹ ಯಡಿಯೂರಪ್ಪ ಬೆಂಬಲಕ್ಕೆ ನಿಂತಿರುವುದಲ್ಲದೇ, ಆ ಪಕ್ಷದ ಪ್ರಮುಖ ಶಾಸಕರನ್ನು ಸೆಳೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ ಎಂಬ ಮಾಹಿತಿ ದೊರೆತಿದೆ.

ಬಿಜೆಪಿ ಮತ್ತು ಜೆಡಿಎಸ್​​​

By

Published : Sep 10, 2019, 5:45 PM IST

ಬೆಂಗಳೂರು:ಜೆಡಿಎಸ್ ಪಕ್ಷವನ್ನು ಮುಗಿಸಲು ಆ ಪಕ್ಷದ ಪ್ರಭಾವಿ ಹಾಗೂ ವರ್ಚಸ್ವಿ ನಾಯಕರನ್ನು ಸೆಳೆಯಲು ಬಿಜೆಪಿ ನಾಯಕರು ತಂತ್ರ ಹೆಣೆದಿದ್ದಾರೆ ಎನ್ನಲಾಗುತ್ತಿದೆ.

ಸರ್ಕಾರವನ್ನು ಭದ್ರಪಡಿಸಿಕೊಳ್ಳಲು ಸಿಎಂ ಬಿ.ಎಸ್. ಯಡಿಯೂರಪ್ಪ ಎರಡನೇ ಹಂತದ 'ಆಪರೇಷನ್ ಕಮಲ' ಆರಂಭಿಸಿದ್ದು, ಅದೇ ಕಾಲಕ್ಕೆ ತಮ್ಮ ಪುತ್ರನ ಹಿತ ಕಾಯಲು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಮೇಲಿನ ಹಿಡಿತ ಸಾಧಿಸಲು ಮುಂದಾಗಿದ್ದಾರೆ. ಈಗಾಗಲೇ ಜೆಡಿಎಸ್ ಹಾಗೂ ಕಾಂಗ್ರೆಸ್‍ನ ಕೆಲ ಪ್ರಭಾವಿ ಮತ್ತು ವರ್ಚಸ್ಸುಳ್ಳ ನಾಯಕರನ್ನು ಸಂಪರ್ಕಿಸಿದ್ದು, ಇದಕ್ಕೆ ಉಪಮುಖ್ಯಮಂತ್ರಿ ಡಾ. ಅಶ್ವಥ್​​​ ನಾರಾಯಣ ಮತ್ತು ಬಿಎಸ್​​​ವೈ ಪುತ್ರ ವಿಜಯೇಂದ್ರ ಈ ಶಾಸಕರ ಜತೆ ಸಮಾಲೋಚನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಜೆಡಿಎಸ್ ಶಾಸಕರನ್ನು ಸೆಳೆಯಲು ಕಾಂಗ್ರೆಸ್​​ನ ಪ್ರಭಾವಿ ನಾಯಕರೊಬ್ಬರು ಬಿಎಸ್‌ವೈ ಬೆಂಬಲಕ್ಕೆ ನಿಂತಿರುವುದಲ್ಲದೆ, ಆ ಪಕ್ಷದ ನಿರ್ದಿಷ್ಟ ಶಾಸಕರನ್ನು ಸೆಳೆದುಕೊಳ್ಳುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಮೊದಲ ಹಂತವಾಗಿ ಮೈಸೂರು ಮತ್ತು ತುಮಕೂರು ಜಿಲ್ಲೆಯ ಶಾಸಕರು ಮತ್ತು ಪ್ರಭಾವಿ ಮುಖಂಡರನ್ನು ಸೆಳೆಯಲು ವೇದಿಕೆ ಸಿದ್ಧವಾಗಿದೆ. ಮಾಜಿ ಸಚಿವ ಜಿ.ಟಿ. ದೇವೇಗೌಡ, ವಾಸು ಸೇರಿದಂತೆ ಏಳು ಶಾಸಕರ ಜತೆ ಸಂಪರ್ಕ ಸಾಧಿಸಿದ್ದಾರೆ. ಈಗಾಗಲೇ ಇವರು ಪ್ರತ್ಯೇಕವಾಗಿ ಸಭೆ ನಡೆಸಿ ತಮ್ಮ ಮುಂದಿನ ನಿರ್ಣಯ ತೆಗೆದುಕೊಳ್ಳಲು ಸಮಯ ಕಾಯುತ್ತಿದ್ದಾರೆ.

ಬಿಎಸ್​​ವೈ ಜೊತೆ ಜಿಟಿಡಿ ಮಾತುಕತೆ:

ಈ ಬೆನ್ನಲ್ಲೇ ಜಿ.ಟಿ. ದೇವೇಗೌಡರನ್ನು ಯಡಿಯೂರಪ್ಪನವರೇ ಖುದ್ದಾಗಿ ಕರೆಸಿಕೊಂಡು ಮಾತನಾಡಿದ್ದು, ಮತ್ತೊಂದೆಡೆ ಸಿದ್ದರಾಮಯ್ಯ ಕೂಡ ಶಾಸಕ ಜಿ.ಟಿ. ದೇವೇಗೌಡರ ಜತೆ ಗೌಪ್ಯವಾಗಿ ಮಾತುಕತೆ ನಡೆಸಿದ್ದಾರಂತೆ. ಈ ಬೆಳವಣಿಗೆಯ ನಂತರವೇ ಜಿ.ಟಿ. ದೇವೇಗೌಡರು ಪಕ್ಷದ ಚಟುವಟಿಕೆಯಿಂದ ದೂರ ಉಳಿದು ಮೌನಕ್ಕೆ ಶರಣಾಗಿದ್ದಾರೆ. ಅಷ್ಟೇ ಅಲ್ಲ, ಪಕ್ಷದ ಹಿರಿಯ ನಾಯಕರ ವಿರುದ್ಧವೇ ಹೇಳಿಕೆಗಳನ್ನು ನೀಡಿ ಬಿಜೆಪಿ ಮುಖಂಡರ ಜತೆ ಕಾಣಿಸಿಕೊಳ್ಳುತ್ತಿದ್ದಾರೆ.

ದೇವೇಗೌಡ ಮತ್ತು ವಾಸು ಅವರನ್ನು ಸೆಳೆದುಕೊಂಡರೆ ಎರಡು ಜಿಲ್ಲೆಗಳಲ್ಲಿ ಜೆಡಿಎಸ್ ಪ್ರಭಾವ ಕುಗ್ಗಿಸಬಹುದು ಮತ್ತು ಆ ಪಕ್ಷದ ಸಂಖ್ಯಾಬಲವನ್ನೂ ಕುಂದಿಸಬಹುದು ಎಂಬ ಭಾವನೆ ಇವರಲ್ಲಿದೆ. ವಾಸು ತಮ್ಮ ಬೆಂಬಲಿಗರೊಂದಿಗೆ ಸಿಂಗಾಪುರಕ್ಕೆ ತೆರಳಿ ಅಲ್ಲಿಯೇ ಬಿಜೆಪಿ ಮುಖಂಡರನ್ನು ಕರೆಸಿಕೊಂಡು ಚರ್ಚೆ ಮಾಡಿದ್ದಾರೆ. ಎರಡನೇ ಹಂತದ ಆಪರೇಷನ್ ಕಮಲದಲ್ಲಿ ಬಿಜೆಪಿ ಸೇರುವವರಿಗೆ ಸಚಿವ ಸ್ಥಾನವಿಲ್ಲ. ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ಮತ್ತು ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡುವುದು, ಕ್ಷೇತ್ರಗಳ ಅಭಿವೃದ್ಧಿಗೆ ಹೆಚ್ಚಿನ ಹಣ ನೀಡುವುದು ಸೇರಿದಂತೆ ಯಡಿಯೂರಪ್ಪ ಅವರು ಹಲವು ಭರವಸೆಗಳನ್ನು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಜಿಟಿಡಿ ಬೇಡಿಕೆ ಈಡೇರಿಕೆಗೆ ಬಿಎಸ್​​ವೈ ಸಿದ್ಧ:

ಜಿ.ಟಿ.ದೇವೇಗೌಡರ ವಿಷಯದಲ್ಲಂತೂ ಯಡಿಯೂರಪ್ಪ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಸಿದ್ಧರಿದ್ದಾರೆ. ಮುಖ್ಯವಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರದಲ್ಲಿ ತಮ್ಮ ಪುತ್ರ ವಿಜಯೇಂದ್ರ ಅವರನ್ನು ಕಣಕ್ಕಿಳಿಸಲು ಅವರಿಗೆ ಜಿ.ಟಿ. ದೇವೇಗೌಡರ ಸಹಕಾರ ಬೇಕಾಗಿದೆ. ಇದೇ ಕಾಲಕ್ಕೆ ಪಕ್ಕದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಜೆಪಿಯಿಂದಲೇ ಜಿ.ಟಿ. ದೇವೇಗೌಡರ ಪುತ್ರನಿಗೆ ಟಿಕೆಟ್ ನೀಡಿ ಎರಡು ಕ್ಷೇತ್ರಗಳಲ್ಲಿ ಒಕ್ಕಲಿಗ-ಲಿಂಗಾಯತ ಕಾಂಬಿನೇಷನ್‍ನಲ್ಲಿ ಚುನಾವಣೆಗೆ ಹೋಗಲು ಬಯಸಿದ್ದಾರೆ. ಇದರಿಂದ ಪುತ್ರ ವಿಧಾನಸಭೆ ಪ್ರವೇಶಿಸಲು ಸಹಕಾರಿಯಾಗುತ್ತದೆ ಎಂಬ ಲೆಕ್ಕಾಚಾರ ಯಡಿಯೂರಪ್ಪ ಅವರದ್ದು. ನಿನ್ನೆ ಸಹ ತಮ್ಮ ನಿವಾಸಕ್ಕೆ ಜಿಟಿಡಿ ಅವರನ್ನು ಕರೆಸಿಕೊಂಡು ಸುದೀರ್ಘ ಚರ್ಚೆ ಮಾಡಿದ್ದಾರೆ.

ಬೇರೆ ಪಕ್ಷಕ್ಕೆ ಹೋಗುತ್ತೇನೆ ಎನ್ನುವುದು ಸುಳ್ಳು:

ಮುಖ್ಯಮಂತ್ರಿಗಳ ಭೇಟಿಯ ನಂತರ ಜಿ.ಟಿ. ದೇವೇಗೌಡರು ಸುದ್ದಿಗಾರರ ಜತೆ ಮಾತನಾಡಿ, ಪಕ್ಷದಲ್ಲಿ ತಮಗೆ ಬಹಳ ನೋವಾಗಿದೆ. ಹೀಗಾಗಿ ಸದ್ಯಕ್ಕೆ ತಟಸ್ಥವಾಗಿದ್ದೇನೆ. ಆದರೆ ಯಾವುದೇ ಪಕ್ಷಕ್ಕೆ ಹೋಗುತ್ತೇನೆ ಅನ್ನುವುದು ಸುಳ್ಳು ಎಂದಿದ್ದಾರೆ. ತಮ್ಮ ಪುತ್ರನನ್ನು ಹುಣಸೂರು ಕ್ಷೇತ್ರದಲ್ಲಿ ನಿಲ್ಲಿಸುವುದು ವದಂತಿ ಎಂದಿರುವ ಅವರು, ಸದ್ಯಕ್ಕೆ ನಾನು ಯಾವುದೇ ಯೋಚನೆ ಮಾಡಿಲ್ಲ. ಆದರೆ ಮುಂದಿನ ಮೂರೂವರೆ ವರ್ಷಗಳಲ್ಲಿ ಏನೇನಾಗುತ್ತದೋ? ನನಗೆ ಗೊತ್ತಿಲ್ಲ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. ಒಟ್ಟಾರೆ, ತೆರೆಮರೆಯಲ್ಲಿ ರಾಜಕೀಯ ರಣತಂತ್ರಗಳು ಮಾತ್ರ ನಡೆಯುತ್ತಿವೆ.

ABOUT THE AUTHOR

...view details