ಕರ್ನಾಟಕ

karnataka

ETV Bharat / state

ಪದವಿ ಪೂರ್ವ ತರಗತಿ ಪ್ರವೇಶಕ್ಕೆ ಖಾಸಗಿ ಕಾಲೇಜುಗಳ ಪ್ರತ್ಯೇಕ ಪರೀಕ್ಷೆ ಕಾನೂನು ಬದ್ಧವೇ? - 95ಕ್ಕಿಂತ ಹೆಚ್ಚು ಅಂಕ ಪಡೆದವರಿಗೆ ನೇರ ಪ್ರವೇಶ

ವಿಜ್ಞಾನ ವಿಷಯಗಳಿಗೆ ಬಹುತೇಕ ಖಾಸಗಿ ಪಿಯು ಕಾಲೇಜುಗಳು ಪರೀಕ್ಷೆ ನಡೆಸುತ್ತಿವೆ. ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಈ ಬಗ್ಗೆ ಮಾಹಿತಿ ಇದ್ದರೂ ಸುಮ್ಮನಿದೆ ಎಂದು ಕೆಲವರು ಆರೋಪಿಸುತ್ತಿದ್ದಾರೆ. ಆದರೆ, ತಮಗೆ ಈ ಸಂಬಂಧ ಯಾವುದೇ ದೂರು ಬಂದಿಲ್ಲ. ಬಂದರೆ ಕ್ರಮ ಕೈಗೊಳ್ಳುವ ಭರವಸೆಯನ್ನು ಇಲಾಖೆ ನೀಡಿದೆ.

ಪದವಿಪೂರ್ವ ತರಗತಿ ಪ್ರವೇಶಕ್ಕೆ ಖಾಸಗಿ ಕಾಲೇಜಲ್ಲಿ ಪ್ರತ್ಯೇಕ ಪರೀಕ್ಷೆ ಕಾನೂನುಬದ್ಧವೇ? ಸರ್ಕಾರ ಕಂಡೂ ಕಾಣದಂತಿರುವುದೇಕೆ?
Is separate test legal in private college for undergraduate admission

By

Published : Dec 13, 2022, 12:53 PM IST

ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗದ ಪದವಿಪೂರ್ವ ಕಾಲೇಜುಗಳಲ್ಲಿ ಪ್ರವೇಶ ಪರೀಕ್ಷೆಗಳನ್ನು ಪ್ರತ್ಯೇಕವಾಗಿ ಮಾಡಲಾಗುತ್ತಿದೆ. ನಿಯಮ ಉಲ್ಲಂಘಿಸಿ ನಡೆಸುತ್ತಿರುವ ಈ ಕಾರ್ಯದಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವಕಾಶ ತಪ್ಪುತ್ತಿದೆ ಎಂಬ ಆರೋಪ ರಾಜ್ಯದಲ್ಲಿ ಕೇಳಿಬರುತ್ತಿದೆ.

ನಿಯಮ ಉಲ್ಲಂಘಿಸಿ ಪ್ರತ್ಯೇಕವಾಗಿ ಪ್ರವೇಶ ಪರೀಕ್ಷೆ ನಡೆಸುತ್ತಿರುವ ಪದವಿಪೂರ್ವ ಕಾಲೇಜುಗಳ ಕ್ರಮದಿಂದಾಗಿ ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೂ ಸೀಟು ದೊರೆಯುತ್ತಿಲ್ಲ. ಈ ರೀತಿ ಪ್ರತ್ಯೇಕ ಪರೀಕ್ಷಾ ಪದ್ಧತಿ ಅನುಸರಿಸುತ್ತಿರುವುದರಿಂದ ಅದೂ ರಾಜ್ಯಾದ್ಯಂತ ಈ ಕಾರ್ಯ ನಡೆಯುತ್ತಿರುವುದರಿಂದ ದೊಡ್ಡ ಸಂಖ್ಯೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಹಲವು ಜಿಲ್ಲೆಯಲ್ಲಿ ಈ ಕಾರ್ಯ ನಡೆಯುತ್ತಿದ್ದರೂ ತಡೆಯುವ ಕಾರ್ಯ ಸಂಬಂಧಿಸಿದವರಿಂದ ಆಗುತ್ತಿಲ್ಲ.

ವಿಜ್ಞಾನ ವಿಷಯಗಳಿಗೆ ಬಹುತೇಕ ಖಾಸಗಿ ಪಿಯು ಕಾಲೇಜುಗಳು ಪರೀಕ್ಷೆ ನಡೆಸುತ್ತಿವೆ. ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಈ ಬಗ್ಗೆ ಮಾಹಿತಿ ಇದ್ದರೂ ಸುಮ್ಮನಿದೆ ಎಂದು ಕೆಲವರು ಆರೋಪಿಸುತ್ತಿದ್ದಾರೆ. ಆದರೆ, ತಮಗೆ ಈ ಸಂಬಂಧ ಯಾವುದೇ ದೂರು ಬಂದಿಲ್ಲ. ಬಂದರೆ ಕ್ರಮ ಕೈಗೊಳ್ಳುವ ಭರವಸೆಯನ್ನು ಇಲಾಖೆ ನೀಡಿದೆ.

95ಕ್ಕಿಂತ ಹೆಚ್ಚು ಅಂಕ ಪಡೆದವರಿಗೆ ನೇರ ಪ್ರವೇಶ:ಕೆಲ ಕಾಲೇಜುಗಳು ಎಸ್ಸೆಸ್ಸೆಲ್ಸಿಯಲ್ಲಿ ಶೇ 95ಕ್ಕಿಂತ ಹೆಚ್ಚು ಅಂಕ ಪಡೆದವರಿಗೆ ನೇರ ಪ್ರವೇಶ ನೀಡಿ, ಅದಕ್ಕಿಂತ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳಿಗೆ ಗಣಿತ ಮತ್ತು ವಿಜ್ಞಾನ ವಿಷಯಗಳ ಬಹು ಆಯ್ಕೆಯ ಪ್ರಶ್ನೆಗಳ ಮೂಲಕ ಪ್ರವೇಶ ಪರೀಕ್ಷೆ ನಡೆಸುತ್ತವೆ. ವಿದ್ಯಾರ್ಥಿಗಳು ಗಳಿಸಿದ ಅಂಕಗಳ ಆಧಾರದ ಮೇಲೆ ನಿಗದಿತ ಸೀಟುಗಳನ್ನು ಭರ್ತಿಮಾಡಿಕೊಳ್ಳಲಾಗುತ್ತಿದೆ. ತಾವು ಅನುಸರಿಸುತ್ತಿರುವ ಇಂತಹ ಪ್ರತ್ಯೇಕ ಪರೀಕ್ಷಾ ಪದ್ಧತಿಯನ್ನು ಹಲವು ಶಿಕ್ಷಣ ಮಂಡಳಿಗಳು ಸಮರ್ಥಿಸಿಕೊಳ್ಳುತ್ತವೆ.

ಅಂದಹಾಗೆ ಪದವಿಪೂರ್ವ ಕಾಲೇಜುಗಳು ಅದರಲ್ಲಿಯೂ ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥಗಳು ಪರೀಕ್ಷೆ ನಡೆಸುವುದನ್ನು ಸಮರ್ಥಿಸಿಕೊಳ್ಳುತ್ತಿವೆ. ಇಂದು ದೇಶ ಶೈಕ್ಷಣಿಕ ಕ್ರಾಂತಿಯ ಹಾದಿಯಲ್ಲಿದೆ. ಎಸ್ಎಸ್ಎಲ್ಸಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗೆ ಇನ್ನೊಂದು ಪರೀಕ್ಷೆ ಎದುರಿಸುವುದು ಕಷ್ಟವಲ್ಲ.

ಸಾಮಾನ್ಯವಾಗಿ ಉತ್ತಮ ಅಂಕ ಗಳಿಕೆ ಎಸ್ಎಸ್ಎಲ್​ಸಿ ಹಂತದಲ್ಲಿ ಆಗುತ್ತದೆ. ಮುಂದಿನ ಹಂತದ ಕಲಿಕೆಗೆ ವಿದ್ಯಾರ್ಥಿ ಯಾವ ರೀತಿ ಸಜ್ಜಾಗಿದ್ದಾನೆ ಎನ್ನುವುದನ್ನು ಅರಿಯಲು ಪರೀಕ್ಷೆ ನಡೆಸಿದರೆ ತಪ್ಪೇನು ಎಂದು ಕೆಲ ಕಾಲೇಜಿನ ಪ್ರಾಂಶುಪಾಲರು ಪ್ರಶ್ನಿಸುತ್ತಿದ್ದಾರೆ. ವಿದ್ಯಾರ್ಥಿಗಳು ಬುದ್ಧಿವಂತರು ನಿಜ. ಗಣಿತ, ವಿಜ್ಞಾನದಲ್ಲಿ ವಿದ್ಯಾರ್ಥಿಗಳ ತಿಳಿವಳಿಕೆಯ ಮಟ್ಟ ಇನ್ನಷ್ಟು ಮನದಟ್ಟುಮಾಡಿಕೊಳ್ಳಲು ಪ್ರವೇಶ ಪರೀಕ್ಷೆ ನಡೆಸುತ್ತೇವೆ.

ಪ್ರವೇಶ ಪರೀಕ್ಷೆ ನಡೆಸಿದರೆ ಅರ್ಹ ವಿದ್ಯಾರ್ಥಿಗಳ ಆಯ್ಕೆ ಸುಲಭ:ರಾಜ್ಯದ ಕೆಲವಡೆ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಲ್ಲಿ ನಕಲು ನಡೆಯುತ್ತವೆ. ಪ್ರವೇಶ ಪರೀಕ್ಷೆ ನಡೆಸಿದರೆ ಅರ್ಹ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಖಾಸಗಿ ಕಾಲೇಜಿನ ಪ್ರಾಂಶುಪಾಲರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.

ಇನ್ನೊಂದು ಕಾಲೇಜಿನ ಪ್ರಾಚಾರ್ಯರ ಪ್ರಕಾರ, ನಮಗೆ ಸೀಟುಗಳು ಸೀಮಿತವಾಗಿರುತ್ತದೆ. ಅರ್ಜಿಗಳು ಹೆಚ್ಚಾಗಿ ಬಂದಿರುತ್ತವೆ. ಪ್ರವೇಶ ನೀಡುವಾಗ ಉತ್ತಮರಲ್ಲೇ ಅತ್ಯುತ್ತಮರನ್ನು ಆಯ್ಕೆ ಮಾಡಿಕೊಳ್ಳಲು ಇನ್ನೊಂದು ಪರೀಕ್ಷೆ ನಡೆಸುವುದರಿಂದ ತಪ್ಪೇನು ಎನ್ನುತ್ತಾರೆ. ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೀಶ್ಕುಮಾರ್ ಸಿಂಗ್ ಪ್ರಕಾರ, ಪದವಿಪೂರ್ವ ಕಾಲೇಜುಗಳು ಪ್ರತ್ಯೇಕ ಪರೀಕ್ಷೆ ನಡೆಸುವ ಕುರಿತು ಮಾಹಿತಿ ಇಲ್ಲ. ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರಿಂದ ಮಾಹಿತಿ ಪಡೆಯಲಾಗುವುದು. ಅದಾದ ಬಳಿಕವೇ ಅಗತ್ಯ ನಿರ್ಧಾರ ಕೈಗೊಳ್ಳುತ್ತೇವೆ ಎಂದಿದ್ದಾರೆ.

ಒಟ್ಟಾರೆ ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ಭವಿಷ್ಯ ಈ ಪರೀಕ್ಷೆಗಳಿಂದ ಮಂಕಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರೆ, ಒಂದು ಪರೀಕ್ಷೆ ಬರೆದವರಿಗೆ ಇನ್ನೊಂದು ಬರೆಯುವುದು ಅಷ್ಟೇನು ಕಷ್ಟವಲ್ಲ. ಶಿಕ್ಷಣ ಸಂಸ್ಥೆ ಗುಣಮಟ್ಟದ ವಿದ್ಯಾರ್ಥಿಗಳನ್ನು ನಿರೀಕ್ಷಿಸುವುದರಲ್ಲಿ ತಪ್ಪೇನು ಇಲ್ಲ ಎಂದು ಶಿಕ್ಷಣ ಸಂಸ್ಥೆಯವರು ಅಭಿಪ್ರಾಯ ಪಡುತ್ತಾರೆ. ಇದೀಗ ಈ ಬಗ್ಗೆ ಮಾಹಿತಿ ಪಡೆದಿರುವ ಶಿಕ್ಷಣ ಇಲಾಖೆ ಯಾವ ಮಾದರಿಯಲ್ಲಿ ಕ್ರಮ ಕೈಗೊಳ್ಳಲಿದೆ ಎನ್ನುವುದನ್ನು ಕಾದುನೋಡಬೇಕಿದೆ.

ಇದನ್ನೂ ಓದಿ: ನೀಟ್​, ಜೆಇಇ ಮತ್ತು ಸಿಯುಇಟಿ ಪರೀಕ್ಷೆ ವಿಲೀನದ ಪ್ರಸ್ತಾವನೆ ಇಲ್ಲ: ಧರ್ಮೇಂದ್ರ ಪ್ರಧಾನ್ ಸ್ಪಷ್ಟನೆ

ABOUT THE AUTHOR

...view details