ಕರ್ನಾಟಕ

karnataka

ETV Bharat / state

ಗುರುವಾರದವರೆಗೂ ರೆಸಾರ್ಟ್‌ನಲ್ಲೇ ಜೆಡಿಎಸ್​ ಶಾಸಕರ ವಾಸ್ತವ್ಯ - CM Kumaraswami

ಆಡಳಿತ ಪಕ್ಷದ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ರೆಸಾರ್ಟ್‌ಗೆ ತೆರಳಿರುವ ಜೆಡಿಎಸ್ ಶಾಸಕರು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ವಿಶ್ವಾಸಮತ ಸಾಬೀತುಪಡಿಸುವವರೆಗೂ ರೆಸಾರ್ಟ್‍ನಲ್ಲೇ ವಾಸ್ತವ್ಯ ಹೂಡಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಜೆಡಿಎಸ್ ಶಾಸಕರು ಗುರುವಾರದವರೆಗೂ ರೆಸಾರ್ಟ್‌ನಲ್ಲೇ ವಾಸ್ತವ್ಯ?

By

Published : Jul 16, 2019, 4:17 PM IST

ಬೆಂಗಳೂರು: ಆಪರೇಷನ್ ಕಮಲದ ಭೀತಿ ಹಿನ್ನೆಲೆಯಲ್ಲಿ ದೇವನಹಳ್ಳಿ ಬಳಿಯ ರೆಸಾರ್ಟ್‌ನಲ್ಲಿ ಇರುವ ಜೆಡಿಎಸ್ ಶಾಸಕರು ತಮ್ಮ ವಾಸ್ತವ್ಯವನ್ನು ಗುರುವಾರದವರೆಗೂ ಅಲ್ಲೇ ಮುಂದುವರೆಸಲಿದ್ದಾರೆ ಎಂದು ತಿಳಿದು ಬಂದಿದೆ.

ಆಡಳಿತ ಪಕ್ಷದ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ರೆಸಾರ್ಟ್‌ಗೆ ತೆರಳಿರುವ ಜೆಡಿಎಸ್ ಶಾಸಕರು, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ವಿಶ್ವಾಸಮತ ಸಾಬೀತುಪಡಿಸುವವರೆಗೂ ರೆಸಾರ್ಟ್‍ನಲ್ಲೇ ವಾಸ್ತವ್ಯ ಹೂಡಲು ನಿರ್ಧರಿಸಿದ್ದಾರೆ. ಕಳೆದ ಒಂದು ವಾರದಿಂದ ರೆಸಾರ್ಟ್‌ನಲ್ಲೇ ಉಳಿದಿರುವ ಶಾಸಕರು, ಅಲ್ಲಿಂದಲೇ ವಿಧಾನಸಭೆ ಅಧಿವೇಶನಕ್ಕೆ ಎರಡು ದಿನ ಆಗಮಿಸಿದ್ದರು. ಶಾಸಕರೆಲ್ಲರೂ ಒಟ್ಟಾಗಿರಬೇಕು. ಯಾವುದೇ ಕಾರಣಕ್ಕೂ ಬಿಜೆಪಿಯವರ ಸಂಪರ್ಕಕ್ಕೆ ಸಿಗಬಾರದೆಂಬ ಉದ್ದೇಶದಿಂದ ರೆಸಾರ್ಟ್‌ನಲ್ಲಿ ಶಾಸಕರನ್ನು ಇರಿಸಲಾಗಿದೆ.

ನಿನ್ನೆ ರಾತ್ರಿ ರೆಸಾರ್ಟ್‌ಗೆ ಭೇಟಿ ನೀಡಿದ ಕುಮಾರಸ್ವಾಮಿಯವರು ಯಾವುದೇ ಕಾರಣಕ್ಕೂ ಶಾಸಕರು ಧೈರ್ಯ ಕಳೆದುಕೊಳ್ಳಬಾರದು. ರಾಜಕೀಯ ಬೆಳವಣಿಗೆಗಳು ಏನೇ ನಡೆಯಲಿ ಮೈತ್ರಿ ಸರ್ಕಾರಕ್ಕೆ ವಿಶ್ವಾಸಮತ ಸಾಬೀತುಪಡಿಸುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರೆಸಲಾಗಿದೆ. ವಿಶ್ವಾಸಮತವನ್ನು ವಿಧಾನಸಭೆಯಲ್ಲಿ ಸಾಬೀತುಪಡಿಸುವ ವಿಶ್ವಾಸವಿದೆ ಎಂದು ಶಾಸಕರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.

ಯಾವುದೇ ಕಾರಣಕ್ಕೂ ಶಾಸಕರು ದುಡುಕಿನ ನಿರ್ಧಾರ ಕೈಗೊಳ್ಳಬಾರದು. ಮೈತ್ರಿ ಸರ್ಕಾರ ಉಳಿಸಿಕೊಳ್ಳುವ ಜವಾಬ್ದಾರಿಯನ್ನು ಹೊತ್ತಿದ್ದೇನೆ. ಅದಕ್ಕೆ ಬೇಕಾದ ಕಾರ್ಯತಂತ್ರ ರೂಪಿಸಲಾಗಿದೆ. ಶಾಸಕರು ಇದೇ ರೀತಿ ಒಗ್ಗಟ್ಟನ್ನು ಕಾಪಾಡಿಕೊಂಡು ಬರಬೇಕು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಶಾಸಕರ ಮನವೊಲಿಕೆ ಪ್ರಯತ್ನಗಳು ಕಾಂಗ್ರೆಸ್ ನಾಯಕರಿಂದಲೂ ನಡೆಯುತ್ತಿವೆ. ತಮ್ಮೊಂದಿಗೂ ಕೆಲವರು ಸಂಪರ್ಕದಲ್ಲಿದ್ದಾರೆ. ಕೊನೆ ಘಳಿಗೆಯವರೆಗೂ ಕಾದು ನೋಡೋಣ ಎಂದು ಶಾಸಕರಿಗೆ ಸಿಎಂ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ABOUT THE AUTHOR

...view details