ಬೆಂಗಳೂರು :ಚಂದ್ರು ಕೊಲೆ ಪ್ರಕರಣದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ಇದೀಗ ವ್ಯಾಪಕ ಟೀಕೆಗೆ ಗುರಿಯಾಗಿದೆ. ಮೊದಲು ಕೊಲೆಗೆ ಕಾರಣ ಉರ್ದು ಮಾತನಾಡದಿರುವುದು ಎಂದು ಹೇಳಿದ್ದರು. ಆದ್ರೆ, ಇದೀಗ ವೈಯಕ್ತಿಕ ಕಾರಣದಿಂದ ಕೊಲೆ ನಡೆದಿದೆ ಎಂದು ಮರು ಹೇಳಿಕೆ ನೀಡಿ ವಿವಾದ ಸೃಷ್ಟಿಸಿಕೊಂಡಿದ್ದಾರೆ.
ಬೆಳಗ್ಗೆಯಷ್ಟೇ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಂದ್ರು ಹತ್ಯೆಯಾಗಿದೆ. ನಾನು ಮಾಹಿತಿ ತಗೊಂಡಿದ್ದೇನೆ. ಉರ್ದು ಮಾತಾಡೋಕೆ ಹೇಳಿದ್ದಾರೆ. ಅವನಿಗೆ ಬರಲಿಲ್ಲ. ಕೊನೆಗೆ ಕನ್ನಡದಲ್ಲಿ ಮಾತನಾಡಿದ್ದಾನೆ ಎಂದು ಅವನನ್ನು ಕೊಂದಿದ್ದಾರೆ. ಚೂರಿಯಿಂದ ಚುಚ್ಚಿ ಚುಚ್ಚಿ ಅಮಾನುಷವಾಗಿ ಕೊಂದಿದ್ದಾರೆ. ಅವನೊಬ್ಬ ದಲಿತ ಯುವಕ. ಬಹಳ ಅಮಾನುಷವಾಗಿ ಕೊಂದಿದ್ದಾರೆ. ಈಗಾಗಲೇ ಕೆಲವರನ್ನು ಬಂಧಿಸಿ ತನಿಖೆ ಮಾಡಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದರು.
ಅಪಘಾತದ ವಿಷಯದಲ್ಲಿ ಗಲಾಟೆಯಾಗಿ ಕೊಲೆ : ಇದಾದ ಕೆಲವೇ ಸಮಯದಲ್ಲಿ ಕನ್ನಡ ಭವನದಲ್ಲಿ ಮಾತನಾಡಿರುವ ಆರಗ ಜ್ಞಾನೇಂದ್ರ, ಚಂದ್ರು ಹತ್ಯೆ ಬಗ್ಗೆ ಸ್ಪಷ್ಟನೆ ನೀಡಿದ್ರು. ಪ್ರಾಥಮಿಕ ಹಂತದ ತನಿಖೆಯಲ್ಲಿ ಆ ರೀತಿ ಇತ್ತು. ಅದಕ್ಕಾಗಿ ನಾನು ಆವಾಗ ಆ ರೀತಿ ಹೇಳಿದ್ದೆ. ಇವಾಗ ತನಿಖೆಯ ಸಂಪೂರ್ಣ ವರದಿ ಬಂದಿದೆ. ಈ ವರದಿಯಲ್ಲಿ ಅಪಘಾತದ ವಿಷಯದಲ್ಲಿ ಗಲಾಟೆಯಾಗಿ ಕೊಲೆಯಾಗಿದೆ ಎಂಬುದು ಗೊತ್ತಾಗಿದೆ. ಹೀಗಾಗಿ, ಇದನ್ನು ಬಿಟ್ಟು ಬೇರೆ ಯಾವ ವಿಷಯಕ್ಕೂ ಆತನ ಕೊಲೆಯಾಗಿಲ್ಲ ಎಂದು ಸ್ಪಷ್ಟನೆ ನೀಡಿದರು.
ಗೃಹ ಸಚಿವನಾಗಿ ನಾನು ಸರಿಯಾಗಿ ಹೇಳಬೇಕಾಗುತ್ತದೆ. ಈಗ ಲೇಟೆಸ್ಟ್ ರಿಪೋರ್ಟ್ ಬಂದಿರುವ ಕಾರಣ ಹಳೆ ಹೇಳಿಕೆಗೆ ವಿಷಾಧಿಸುತ್ತೇನೆ. ಹೊಸ ವರದಿಯಲ್ಲಿ ಅಪಘಾತದ ವಿಷಯವಾಗಿ ಗಲಾಟೆಯಾಗಿ ಕೊಲೆಯಾಗಿದೆ ಎಂಬುದು ಗೊತ್ತಾಗಿದೆ. ಆದರೆ, ನಮಗೆ ಆಶ್ಚರ್ಯ ಆಗುವಂತದ್ದು ರಾಷ್ಟ್ರೀಯ ಮಟ್ಟದಲ್ಲಿ ಇದು ಹರಿದಾಡುತ್ತಿರೋದು. ಅದಕ್ಕಾಗಿ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ತಿಳಿಸಿದ್ದಾರೆ.