ಬೆಂಗಳೂರು: ರಾಜ್ಯ ರಾಜಕಾರಣದಲ್ಲೀಗ ಮಹತ್ವದ ಬೆಳವಣಿಗೆಗಳು ನಡೆಯುತ್ತಿದ್ದು, ಹಲವು ಚರ್ಚೆಗೆ ಆಹ್ವಾನ ಕೊಟ್ಟಂತಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರ ಬಿಜೆಪಿ ಬಗೆಗಿನ ಮಾತುಗಳು ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧದ ಹೇಳಿಕೆಗಳ ಬಗ್ಗೆ ರಾಜಕೀಯ ವಲಯದಲ್ಲಿ ಹಲವು ರೀತಿಯ ವ್ಯಾಖ್ಯಾನಗಳು ಕೇಳಿಬರುತ್ತಿವೆ.
ಶಿರಾ, ಆರ್ಆರ್ ನಗರ ಉಪಚುನಾವಣೆಯ ಸೋಲು, ವಿಧಾನಪರಿಷತ್ನ ನಾಲ್ಕು ಕ್ಷೇತ್ರಗಳಲ್ಲಿನ ಸೋಲು, ಜೊತೆಗೆ ಹಲವು ಮುಖಂಡರು ಪಕ್ಷ ತೊರೆದಿರುವುದು ಜೆಡಿಎಸ್ ನಾಯಕರಿಗೆ ಆಘಾತವನ್ನುಂಟುಮಾಡಿದೆ. ಇದೀಗ ಹೆಚ್ ಡಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದಿದ್ದಾರೆ. ರಾಜ್ಯದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹರಸಾಹಸಪಡುತ್ತಿರುವ ಜೆಡಿಎಸ್, ಬಿಜೆಪಿ ಜೊತೆ ಸಖ್ಯ ಬೆಳೆಸುತ್ತಿದೆಯೇ? ಎಂಬ ಗುಸು ಗುಸು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಅಲ್ಲದೇ ಸಿಎಂ ಅವರನ್ನು ಭೇಟಿಯಾಗಿರುವುದು ಮತ್ತಷ್ಟು ಚರ್ಚೆಗೆ ಆಹ್ವಾನ ಕೊಟ್ಟಂತಾಗಿದೆ.
ಈ ಸುದ್ದಿಯನ್ನೂ ಓದಿ:ಹಲವು ಭಾಗ್ಯಗಳಿಗೆ ‘ಸಿದ್ದರಾಮನ ಹುಂಡಿ’ಯಿಂದ ಹಣ ತಂದಿದ್ರಾ?: ಹೆಚ್ಡಿಕೆ
ಶಿರಾ ಮತ್ತು ಆರ್ ಆರ್ ನಗರ ಉಪಚುನಾವಣೆಯಲ್ಲಿ ಜೆಡಿಎಸ್ ಸೋಲನ್ನನುಭವಿಸಿತ್ತು. ಈ ಎರಡು ಕ್ಷೇತ್ರಗಳಲ್ಲಿ ಒಕ್ಕಲಿಗರ ಪ್ರಾಬಲ್ಯವಿದ್ದರೂ ಎರಡನೇ ಸಾಲಿನ ನಾಯಕರ ಕೊರತೆ ಜೊತೆಗೆ ಸಂಪನ್ಮೂಲ ಕೊರತೆ ಜೆಡಿಎಸ್ ಸೋಲಿಗೆ ಪ್ರಮುಖ ಕಾರಣವಾಗಿತ್ತು. ಬಿಜೆಪಿ ಜೊತೆಗೆ ಧ್ವೇಷ-ಪ್ರೇಮ ಹಂತದ ಮತ್ತೊಂದು ಸುತ್ತಿನ ಸಂಬಂಧವಾಗಿದ್ದು, ಬಿಜೆಪಿಗೆ ಜೆಡಿಎಸ್ ನೀಡಿದ ಬೆಂಬಲವಾಗಿತ್ತು. ಆ ಎರಡು ಪಕ್ಷಗಳ ಸಾಮಾನ್ಯ ವೈರಿ ಕಾಂಗ್ರೆಸ್ ಅನ್ನು ಅಧಿಕಾರದಿಂದ ಹೊರಗಿಡುವ ಉದ್ದೇಶದಿಂದ ಮಂಡ್ಯ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ಗೆ ಬೆಂಬಲ ನೀಡಿತು. ಜೆಡಿಎಸ್ನಲ್ಲಿದ್ದ ಹೆಚ್. ವಿಶ್ವನಾಥ್, ಕೆ. ಗೋಪಾಲಯ್ಯ, ನಾರಾಯಣಗೌಡ ಪಕ್ಷ ತೊರೆದು ಮೈತ್ರಿ ಸರ್ಕಾರ ಪತನವಾಗಲು ಕಾರಣರಾದರು. ಮತ್ತೊಬ್ಬ ಶಾಸಕ ದೇವೇಗೌಡ ಜೆಡಿಎಸ್ ಮುಖಂಡರಿಂದ ಅಂತರ ಕಾಯ್ದುಕೊಂಡಿದ್ದಾರೆ. ತಮ್ಮ ಪಕ್ಷದ ಬಲಹೀನತೆ ಮತ್ತು ಸಾಮರ್ಥ್ಯದ ಬಗ್ಗೆ ಅರಿವಿರುವ ಜೆಡಿಎಸ್ ಮುಖಂಡರು ಗಾಳಿ ಬಂದ ಕಡೆ ತೂರಿಕೊಂಡು ಹೋಗುವ ಚಾಣಾಕ್ಷತನ ತೋರುತ್ತಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.
ಈ ಸುದ್ದಿಯನ್ನೂ ಓದಿ:ಇಮೇಜ್ ಇದ್ರೆ ಅಲ್ವಾ ಡೌನ್ ಆಗೋದು: ಕುಮಾರಸ್ವಾಮಿಗೆ ಗುಟುರು ಹಾಕಿದ 'ಟಗರು'!
ಹಳೇಯ ಮೈಸೂರು ಭಾಗದಲ್ಲಿ ಬಿಜೆಪಿಗೆ ಭದ್ರ ನೆಲೆಯಿಲ್ಲದ ಕಾರಣ ತಾವು ಕೇಸರಿ ಪಕ್ಷದ ಜೊತೆ ಆರಾಮವಾಗಿದ್ದೇವೆ ಎಂಬ ಮಾತುಗಳು ಜೆಡಿಎಸ್ ನಾಯಕರಿಂದ ವ್ಯಕ್ತವಾಗಿದ್ದರೆ, ಮತ್ತೊಂದೆಡೆ ಜೆಡಿಎಸ್ ತೊರೆದು ಬಿಜೆಪಿ ಸೇರಿರುವ ಶಾಸಕರಿಗೆ ಈ ಬೆಳವಣಿಗೆ ಅಸಮಾಧಾನ ಮೂಡಿಸಿದೆ. ಹೆಚ್. ಡಿ. ಕುಮಾರಸ್ವಾಮಿ ಸೀಸನಲ್ ಫ್ರೆಂಡ್ ಶಿಫ್ ಮಾಡುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಲೇವಡಿ ಮಾಡಿದ್ದಾರೆ. ಜೆಡಿಎಸ್ ಮೂಲಭೂತ ಬಿಕ್ಕಟ್ಟನ್ನು ಎದುರಿಸುತ್ತಿದೆ ಮತ್ತು ಜೆಡಿಎಸ್ ಪ್ರಾಬಲ್ಯ ಕ್ಷೇತ್ರಗಳನ್ನು ಬಿಜೆಪಿ ಅತಿಕ್ರಮಿಸಿದೆ. ಜೆಡಿಎಸ್ ಶಾಸಕರು ಅಭಿವೃದ್ಧಿಯ ಹಿತದೃಷ್ಟಿಯಿಂದ ಮತ್ತು ನಾಯಕತ್ವದ ಅಸಮಧಾನದಿಂದ ಯಾವುದೇ ಕ್ಷಣದಲ್ಲಿ ಪಕ್ಷ ತೊರೆಯಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.
ಈ ಸುದ್ದಿಯನ್ನೂ ಓದಿ:ಸಮಯಕ್ಕೆ ತಕ್ಕಂತೆ ಸುಳ್ಳು ಹೇಳುವುದರಲ್ಲಿ ಕುಮಾರಸ್ವಾಮಿ ನಿಸ್ಸೀಮರು: ಸಿದ್ದರಾಮಯ್ಯ
ಟೀಕಾಸ್ತ್ರ :
ಈಗಾಗಲೇ ಟೀಕಾಸ್ತ್ರ ಶುರು ಮಾಡಿರುವ ಕುಮಾರಸ್ವಾಮಿ ಅವರು, ಇತ್ತೀಚೆಗೆ ಮೈಸೂರಿನಲ್ಲಿ ಮಾಧ್ಯಮಗೋಷ್ಟಿ ನಡೆಸಿದ್ದು, ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡರ ಮಾತನ್ನು ಕೇಳಿ ನಾನು ಕಾಂಗ್ರೆಸ್ ಜೊತೆ ಸೇರಿದೆ. ನಂತರ ಕಾಂಗ್ರೆಸ್ವರು ನನ್ನನ್ನು ಸರ್ವನಾಶ ಮಾಡಿದರು. ರಾಜಕೀಯ ಹಸ್ತಾಂತರದ ಮಧ್ಯೆಯೂ ನಾನು ಒಂದು ಒಳ್ಳೆಯ ಅಭಿಪ್ರಾಯವನ್ನು ಇಟ್ಟುಕೊಂಡಿದ್ದೆ. ದೇವೇಗೌಡರ ಭಾವನೆಯನ್ನು ಧಿಕ್ಕರಿಸಬಾರದು ಅಂತ ನಾನು ಕಾಂಗ್ರೆಸ್ ಜೊತೆ ಸರ್ಕಾರ ಮಾಡಿದ್ದೆ. ನನ್ನ ಗುಡ್ವಿಲ್ ಅನ್ನು ಸಿದ್ದರಾಮಯ್ಯನವರ ಗುಂಪು ಸರ್ವನಾಶ ಮಾಡಿದೆಯೆಂದು ಕಿಡಿಕಾರಿದ್ದರು.
ಬಿಜೆಪಿ ರಾಷ್ಟ್ರೀಯ ನಾಯಕರೇ ಮೈತ್ರಿಗೆ ಆಹ್ವಾನ ನೀಡಿದ್ದರು. ಬಿಜೆಪಿ ಜೊತೆ ಹೋಗಿದ್ದರೆ ರೈತರ ಪರವಾದ ನನ್ನ ಸರ್ಕಾರ ಇನ್ನೂ ಇರುತ್ತಿತ್ತು. ದೇವೇಗೌಡರಂತಹ ನಾಯಕರು ಸೋಲುವ ಸ್ಥಿತಿಯೂ ಬರುತ್ತಿರಲಿಲ್ಲ. ಬಿಜೆಪಿ ಮಿತ್ರ ಪಕ್ಷಗಳನ್ನು ಸೌಜನ್ಯಯುತವಾಗಿ ನಡೆಸಿಕೊಂಡ ನಿದರ್ಶನವಿದೆ. ಕಾಂಗ್ರೆಸ್ಸಿಗೆ ಅದು ಗೊತ್ತಿಲ್ಲ. ಜಾತ್ಯತೀತ ನಿಲುವಿನ ಬಗ್ಗೆ ದೇವೇಗೌಡರ ಬದ್ಧತೆ ಬಗ್ಗೆ ನಾವು ನಿಮ್ಮಿಂದ ಉಪದೇಶ ಕೇಳಬೇಕಿಲ್ಲ. ದೇವೇಗೌಡರ ಬದ್ಧತೆಯನ್ನು ಬಳಸಿಕೊಂಡು ಬ್ಲ್ಯಾಕ್ ಮೇಲ್ ಮಾಡಿದ ಕಾಂಗ್ರೆಸ್ ಇವತ್ತು ಜೆಡಿಎಸ್ ನ ನಿಲುವನ್ನು ಪ್ರಶ್ನಿಸುವ ಯಾವ ನೈತಿಕತೆ ಉಳಿಸಿಕೊಂಡಿದೆ ಎಂದು ಪ್ರಶ್ನಿಸಿರುವ ಹೆಚ್ಡಿಕೆ, ನಾನು ಸಂಪಾದನೆ ಮಾಡಿದ ಹೆಸರನ್ನು ಕೆಡಿಸುವ ಪ್ಲಾನ್ ನಲ್ಲಿ ಸಿದ್ದರಾಮಯ್ಯ ಯಶಸ್ವಿಯಾದರು. ನಾನು ಅವರ ಬಲೆಯಲ್ಲಿ ಟ್ರ್ಯಾಪ್ ಆಗಿ ಸಿಲುಕಿದೆ. ದೇವೇಗೌಡರ ಒಳ್ಳೆಯತನವನ್ನು ಕಾಂಗ್ರೆಸ್ ದುರುಪಯೋಗ ಪಡಿಸಿಕೊಂಡಿತು. ನನ್ನ 12 ವರ್ಷದ ಒಳ್ಳೆಯ ಹೆಸರು ಕಾಂಗ್ರೆಸ್ ಸಹವಾಸದಿಂದ ಸರ್ವನಾಶವಾಯ್ತು ಎಂದು ಮೈತ್ರಿ ಸರ್ಕಾರದ ಬಗ್ಗೆ ಅಸಮಾಧಾನ ಹೊರ ಹಾಕಿದರು.
ಈ ಸುದ್ದಿಯನ್ನೂ ಓದಿ:'ಕೈ' ನಂಬಿ ಕೆಟ್ಟೆ, ದೇವೇಗೌಡರ ಮಾತು ಕೇಳಿ ಸಂಕಷ್ಟಕ್ಕೆ ಸಿಲುಕಿದೆ: ಹೆಚ್ಡಿಕೆ ಹೀಗೆ ಹೇಳಿದ್ಯಾಕೆ?
ಬಿಜೆಪಿ ಅಷ್ಟು ಸುಲಭವಾಗಿ ಅಧಿಕಾರ ಬಿಟ್ಟುಕೊಡುವ ಪಕ್ಷವಲ್ಲ. ಬಿಜೆಪಿ ಸರ್ಕಾರ ಮುಂದಿನ ಎರಡೂವರೆ ವರ್ಷವೂ ಸಂಪೂರ್ಣ ಅಧಿಕಾರ ನಡೆಸಲಿದೆ. ಆದರೆ ಉತ್ತಮ ಅಧಿಕಾರ ನಡೆಸಲಿ ಎನ್ನುವುದೇ ನಮ್ಮ ಉದ್ದೇಶ, ನಮ್ಮ ಸಹಕಾರವಿರಲಿದೆ ಎಂಬ ಅಚ್ಚರಿಯ ಹೇಳಿಕೆಯನ್ನು ಕೂಡಾ ಕುಮಾರಸ್ವಾಮಿ ನೀಡಿದ್ದಾರೆ.
ಕಾಂಗ್ರೆಸ್ ಮತ್ತು ಸಿದ್ದರಾಮಯ್ಯಗೆ ಹೆಚ್ಡಿಕೆ ತಿರುಗೇಟು :
ನಿಮ್ಮ ತಾಳಕ್ಕೆ ಕುಣಿಯಲು ಜೆಡಿಎಸ್ ಗುಲಾಮಿ ಸಂಸ್ಕೃತಿಯ ಪಕ್ಷವಲ್ಲ. ರಾಜ್ಯದ ಇಂದಿನ ರಾಜಕಾರಣದ ಅಯೋಮಯ ಸ್ಥಿತಿಗೆ ನಿಮ್ಮ ದ್ವಂದ್ವ ಹಾಗೂ ಇಬ್ಬಂದಿತನದ ನಿಲುವೇ ಕಾರಣ. ಫೈವ್ ಸ್ಟಾರ್ ಸಂಸ್ಕೃತಿ ಬಗ್ಗೆ ರಾಗ ಎಳೆದಿದ್ದೀರಿ? ಫೈವ್ ಸ್ಟಾರ್ ಹಾಗೂ ಗುಡಿಸಲಿನಿಂದಲೂ ಅಧಿಕಾರ ನಡೆಸಿದ್ದೇನೆ. ಜನತೆಗೆ ನನ್ನಷ್ಟು ಸುಲಭವಾಗಿ ದಕ್ಕುವ ರಾಜಕಾರಣಿ ಮತ್ತೊಬ್ಬರಿಲ್ಲ ಎಂಬುದನ್ನು ನೆನಪಿಸಲು ಬಯಸುತ್ತೇನೆಂದು ಹೇಳಿದ್ದಾರೆ.
ವಿಧಾನ ಪರಿಷತ್ ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯದ ವೇಳೆ ಜೆಡಿಎಸ್‌ನ ಜಾತ್ಯಾತೀತತೆ ಬಹಿರಂಗವಾಗಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಕಾಂಗ್ರೆಸ್-ಸಿದ್ದರಾಮಯ್ಯರ ದೃಷ್ಟಿಯಲ್ಲಿ ಜಾತ್ಯತೀತತೆ ಅಂದರೆ ಏನು? ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ನ ಅಪವ್ಯಾಖ್ಯಾನದಿಂದಲೇ ಇಂದು ಜಾತ್ಯತೀತೆಯನ್ನು ಅನುಮಾನಿಸಲಾಗುತ್ತಿದೆ. ಜೆಡಿಎಸ್ನೊಂದಿಗೆ ಮೈತ್ರಿ ಮಾಡಿಕೊಂಡಿದ್ದು ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿದ್ದು ಹೈಕಮಾಂಡ್ ಎಂದು ಹೇಳಿದ್ದಾರೆ ಸಿದ್ದರಾಮಯ್ಯವ್ರು. ಅಂದರೆ ಹೈಕಮಾಂಡ್‌ನ ನಿರ್ಣಯ ತಮಗೆ ಇಷ್ಟವಿರಲಿಲ್ಲ ಎಂಬುದು ಸಿದ್ದರಾಮಯ್ಯ ಅವರ ಮಾತಿನಲ್ಲಿ ಧ್ವನಿಸುತ್ತಿರುವ ಅರ್ಥ. ಹೀಗಾಗಿಯೇ ಸಿದ್ದರಾಮಯ್ಯ ಮೈತ್ರಿ ಸರ್ಕಾರ ಕೆಡವಿದರು. ಅದರ ಅಪವಾದ ಬೇರೆಯವರಿಗೆ ಬಳಿದರು ಎಂದು ನೇರವಾಗಿಯೇ ಆರೋಪಿಸಿದ್ದಾರೆ. ಈ ಆರೋಪದ ಹಿಂದೆ ಬೇರೆ ಏನಾದರು ರಾಜಕೀಯ ತಂತ್ರವಿದೆಯೇ ಎನ್ನುವ ಪ್ರಶ್ನೆ ಕೂಡ ಉದ್ಭವವಾಗಿದೆ.
ಅಂದು ಸಿದ್ದರಾಮಯ್ಯನವರ ಜೊತೆ ಜೆಡಿಎಸ್ ಪಕ್ಷ ತೊರೆದಿದ್ದ ನಾಯಕರನ್ನು ತಮ್ಮತ್ತ ಸೆಳೆಯಲು ಮುಂದಾಗಿರುವ ಕುಮಾರಸ್ವಾಮಿ ಅವರು, ಸಿ.ಎಂ. ಇಬ್ರಾಹಿಂ ಅವರನ್ನು ಪಕ್ಷಕ್ಕೆ ಆಹ್ವಾನಿಸಿರುವುದು ಹೊಸ ಬೆಳವಣಿಗೆಯಾಗಿದೆ. ಒಟ್ಟಾರೆ, ಕಾಂಗ್ರೆಸ್ಗೆ ಬಿಸಿ ಮುಟ್ಟಿಸಲು ಸಜ್ಜಾಗಿರುವ ಕುಮಾರಸ್ವಾಮಿ ಅವರು ಏಟಿಗೆ ತಿರುಗೇಟು ನೀಡುವವರೇ ಎಂಬುದು ಕಾದು ನೋಡಬೇಕಿದೆ.