ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ನೂರಕ್ಕಿಂತ ಕಡಿಮೆ ಜನರಲ್ಲಿ 2ನೇ ಬಾರಿ ಕೊರೊನಾ ದೃಢ?

2ನೇ ಬಾರಿ ಪಾಸಿಟಿವ್ ಬಂದಿದ್ದನ್ನು ಪರೀಕ್ಷಿಸಲು ಯಾವುದೇ ಭಿನ್ನವಾದ ಪರೀಕ್ಷಾ ವಿಧಾನಗಳೂ ಇಲ್ಲ. ಹೀಗಾಗಿ, ಸೋಂಕಿನ ಲಕ್ಷಣಗಳ ಪತ್ತೆ ಅಥವಾ ಕೋವಿಡ್ ವೈರಸ್ ನ ತಳಿ ಬದಲಾಗಿದೆಯೇ? ವೈರಸ್ ಪ್ರಭಾವ ಹೆಚ್ಚಿರುತ್ತೆಯೋ? ಇಲ್ಲವೋ ಎಂಬ ಮಾಹಿತಿಯೂ ಇಲ್ಲ ಎಂದು ತಜ್ಞ ವೈದ್ಯರಾದ ಡಾ. ಆಂಜನಪ್ಪ ತಿಳಿಸಿದ್ದಾರೆ.

corona
ಕೊರೊನಾ

By

Published : Dec 3, 2020, 10:18 PM IST

Updated : Dec 3, 2020, 10:34 PM IST

ಬೆಂಗಳೂರು: ರಾಜ್ಯದಲ್ಲಿ ನೂರಕ್ಕಿಂತ ಕಡಿಮೆ ಹಾಗೂ ಸಿಲಿಕಾನ್​ಸಿಟಿಯಲ್ಲಿ 35ಕ್ಕೂ ಕಡಿಮೆ ಜನರಲ್ಲಿ ಎರಡನೇ ಬಾರಿ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆಯಿಂದ ಅಂದಾಜಿಸಲಾಗಿದೆ.

ಆದರೆ, ಮೊದಲನೇ ಬಾರಿ ಕೋವಿಡ್ ಬಂದ ಬಳಿಕ ಆರ್​ಟಿ - ಪಿಸಿಆರ್ ಟೆಸ್ಟ್ ನಡೆಸಲಾಗಿದೆಯೇ? ನಂತರದ ದಿನಗಳಲ್ಲಿ ಆಂಟಿ ಬಾಡಿ ಟೆಸ್ಟ್ ಮಾಡಲಾಗಿದೆಯೇ? ನಂತರ ಪುನಃ ಆರ್​ಟಿ - ಪಿಸಿಆರ್ ಮಾಡಿಸಿದಾಗಲೇ ಪಾಸಿಟಿವ್ ಬಂದಿದೆಯೇ ಎಂಬ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಅಲ್ಲದೇ 2ನೇ ಬಾರಿ ಪಾಸಿಟಿವ್ ಬಂದಿದ್ದನ್ನು ಪರೀಕ್ಷಿಸಲು ಯಾವುದೇ ಭಿನ್ನವಾದ ಪರೀಕ್ಷಾ ವಿಧಾನಗಳೂ ಇಲ್ಲ. ಹೀಗಾಗಿ, ಸೋಂಕಿನ ಲಕ್ಷಣಗಳ ಪತ್ತೆ ಅಥವಾ ಕೋವಿಡ್ ವೈರಸ್​​​ನ ತಳಿ ಬದಲಾಗಿದೆಯೇ? ವೈರಸ್ ಪ್ರಭಾವ ಹೆಚ್ಚಿರುತ್ತೆಯೋ? ಇಲ್ಲವೋ ಎಂಬ ಮಾಹಿತಿಯೂ ಇಲ್ಲ ಎಂದು ತಜ್ಞ ವೈದ್ಯರಾದ ಡಾ.ಆಂಜನಪ್ಪ ಈಟಿವಿ ಭಾರತ್ ಗೆ ತಿಳಿಸಿದ್ದಾರೆ.

ತಜ್ಞ ವೈದ್ಯ ಡಾ.ಆಂಜನಪ್ಪ ಮಾತನಾಡಿದರು

ನಗರದಲ್ಲಿ ಸೆಪ್ಟೆಂಬರ್ 6 ರಂದು ಮೊದಲ ಬಾರಿಗೆ 27 ವರ್ಷದ ಮಹಿಳೆಗೆ ಸೋಂಕು ಕಾಣಿಸಿಕೊಂಡಿತ್ತು. ನಂತರ ಕೇವಲ ಒಂದು ತಿಂಗಳಲ್ಲೇ 2ನೇ ಬಾರಿಗೂ ಕೋವಿಡ್​ಗೆ ಒಳಗಾಗಿದ್ದರು. ಸೋಂಕಿನ ನಂತರ ರೋಗನಿರೋಧಕ ಶಕ್ತಿ ಬೆಳೆಯದ ಕಾರಣ ಮತ್ತೆ ವೈರಸ್​ಗೆ ಒಳಪಡಬೇಕಾಯ್ತು ಎಂದು ಚಿಕಿತ್ಸೆ ನೀಡಿದ ವೈದ್ಯರು ಅಂದಾಜಿಸಿದ್ದಾರೆ.

ಇದನ್ನೂ ಓದಿ:ಮಂಗಳೂರು ಉಗ್ರ ಗೋಡೆಬರಹ ಪ್ರಕರಣ: ನಗರದ ಭದ್ರತೆ ಹೆಚ್ಚಿಸಲು ಸೂಚಿಸಿದ ಬೊಮ್ಮಾಯಿ

ಸೋಂಕಿನ ಲಕ್ಷಣ ಕಡಿಮೆ

ಒಂದು ಬಾರಿ ಕೋವಿಡ್ ಬಂದು ಗುಣಮುಖರಾಗಿದ್ದರೆ, ಅವರಲ್ಲಿ ಪ್ರತಿಕಾಯಗಳು ಅಭಿವೃದ್ಧಿಯಾಗಿದ್ದರೆ, 2ನೇ ಬಾರಿ ಸೋಂಕಿಗೆ ತುತ್ತಾದರೂ ಕಡಿಮೆ ಲಕ್ಷಣಗಳು ಕಂಡು ಬರಬಹುದು ಎಂದು ವೈದ್ಯರು ಅಂದಾಜಿಸಿದ್ದಾರೆ. ಆದ್ರೆ, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಈವರೆಗೆ ಇಂತಹ ಪ್ರಕರಣ ಮರುಕಳಿಸಿಲ್ಲ ಎಂದು ಕೋವಿಡ್ ವಾರ್ಡ್ ನೋಡಲ್ ಅಧಿಕಾರಿ ಹಾಗೂ ಮೈಕ್ರೋಬಯೋಲಾಜಿಸ್ಟ್ ಆಗಿರುವ ಡಾ.ಅಸೀಮಾ ಬಾನು ತಿಳಿಸಿದ್ದಾರೆ.

ಮೊದಲನೇ ಬಾರಿ ಕೋವಿಡ್​ ಬಂದ ಬಳಿಕ ಎಲ್ಲರೂ ಆರ್​ಟಿ - ಪಿಸಿಆರ್ ಟೆಸ್ಟ್ ನಡೆಸಿ ನೆಗೆಟಿವ್ ಬಂದ ನಂತರವೂ 2ನೇ ಬಾರಿಗೆ ಕೋವಿಡ್ ಬಂದಿದೆಯಾ? ಎಂಬ ಮಾಹಿತಿ ಲಭ್ಯವಿಲ್ಲ. ಕೆಲವೊಂದು ಸೋಂಕಿತರಲ್ಲಿ 32 ದಿನವಾದ್ರೂ ಕೋವಿಡ್ ಪಾಸಿಟಿವ್ ಬರುತ್ತಿತ್ತು. ಕೆಲವರಲ್ಲಿ ಹತ್ತು ಹದಿನೈದು ದಿನಗಳ ಬಳಿಕ ಕೋವಿಡ್ ಗುಣಲಕ್ಷಣದಿಂದ ಗುಣವಾದರೂ ದೇಹದಲ್ಲಿ ಉಳಿದಿರುವ ಡೆಡ್ ವೈರಸ್ ಕೂಡಾ ಆರ್​ಟಿ- ಪಿಸಿಆರ್ ಟೆಸ್ಟ್ ನಲ್ಲಿ ಪಾಸಿಟಿವ್ ಬಂದಿರುವ ಉದಾಹರಣೆಗಳಿವೆ.

ಕೆಲವರಲ್ಲಿ ಗುಣಮುಖರಾಗಿ ಹೋದ ಬಳಿಕ ಪರೀಕ್ಷೆ ನಡೆಸಿದಾಗ ಅವರಲ್ಲಿ ಪ್ರತಿರೋಧ ಇರುವುದೂ ಕಂಡು ಬಂದಿತ್ತು. ಕೊರೊನಾ ವೈರಸ್​​ ಒಂದು ತಳಿಯಿಂದ ಕೋವಿಡ್ ಬಂದು ಹೋಗಿದ್ದವರಿಗೆ ಅದೇ ವೈರಸ್ ನ ಇನ್ನೊಂದು ತಳಿಯಿಂದ ಮತ್ತೆ ಸೋಂಕು ಬರುವ ಸಂಭವ ಇರಬಹುದು ಎಂದು ಅವರು ತಿಳಿಸಿದರು. ಇನ್ನು ಡೆಂಘಿ ಅಂತಹ ಜ್ವರ ಒಂದು ಬಾರಿ ಬಂದು ಹೋದರೆ 2ನೇ ಬಾರಿಗೆ ಮತ್ತೆ ಡೆಂಘಿ ಬಂದಾಗ ಲಕ್ಷಣಗಳ ತೀವ್ರತೆ ಹೆಚ್ಚಿರುತ್ತದೆ. ಆದರೆ, ಕೋವಿಡ್ ನಲ್ಲಿ ಹೇಗಿರುತ್ತದೆ ಎಂಬ ಅಧ್ಯಯನ ಇನ್ನೂ ಆಗಿಲ್ಲ ಎಂದರು.

ಇನ್ನು ಆರೋಗ್ಯ ಇಲಾಖೆಯ ಅಂದಾಜಿನ ಪ್ರಕಾರ, ಒಮ್ಮೆ ಕೋವಿಡ್ ಬಂದು ಹೋದವರಲ್ಲಿ ಮೂರು ತಿಂಗಳ ಕಾಲ ಜೀವ ನಿರೋಧಕ ಶಕ್ತಿ ಇರುತ್ತದೆ. ಆಮೇಲೆ ಜೀವ ನಿರೋಧಕತೆ ಕ್ಷೀಣಿಸಬಹುದು. ಈ ಸಂಧರ್ಭದಲ್ಲಿ ಕೋವಿಡ್ ಮತ್ತೆ ಬರಬಹುದು ಎನ್ನಲಾಗಿದೆ. ಜೊತೆಗೆ ಸೋಂಕಿನಿಂದ ಗುಣಮುಖರಾದವರನ್ನು ಬಿಡುಗಡೆ ಮಾಡುವ ಮೊದಲು ಮತ್ತೆ ಆರ್​ಟಿ - ಪಿಸಿಆರ್ ಪರೀಕ್ಷೆಗೆ ಒಳಪಡಿಸುವ ಕ್ರಮವಿಲ್ಲ. ಹಾಗಾಗಿ ಅನೇಕ ಪ್ರಕರಣಗಳು ಸೋಂಕಿನ ಮರುಕಳಿಕೆಯೇ ಅಥವಾ ಇದ್ದ ಸೋಂಕೆ ಮುಂದುವರಿದಿದೆಯೇ ಎಂದು ಹೇಳುವುದು ಕಷ್ಟ ಎಂದು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಅಭಿಪ್ರಾಯಪಡುತ್ತಾರೆ.

Last Updated : Dec 3, 2020, 10:34 PM IST

ABOUT THE AUTHOR

...view details