ಕರ್ನಾಟಕ

karnataka

ETV Bharat / state

ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಅಕ್ರಮ : ಸಿಐಡಿ ತನಿಖೆಗೆ ಶಿಫಾರಸು ಮಾಡಿದ ಜಂಟಿ ಸದನ ಸಮಿತಿ - ಈಟಿವಿ ಭಾರತ ಕನ್ನಡ

ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಹಾಗೂ ನಿರ್ವಹಣೆಯಲ್ಲಿ ಅವ್ಯವಹಾರ- ಜಂಟಿ ಸದನ ಸಮಿತಿಯಿಂದ ಸಿಐಡಿ ತನಿಖೆಗೆ ಶಿಫಾರಸು- ವರದಿಯಲ್ಲಿನ ಪ್ರಮುಖ ಅಂಶಗಳ ಮಾಹಿತಿ ಈಟಿವಿ ಭಾರತಕ್ಕೆ ಲಭ್ಯ

drinking water plant
ಜಂಟಿ ಸದನ ಸಮಿತಿ ಸಿಐಡಿ ತನಿಖೆಗೆ ಶಿಫಾರಸು

By

Published : Feb 21, 2023, 7:03 AM IST

ಬೆಂಗಳೂರು:ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಹಾಗೂ ನಿರ್ವಹಣೆಯಲ್ಲಿ ಭಾರಿ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಅಕ್ರಮ ಕುರಿತ ಸಮಗ್ರ ತನಿಖೆ ನಡೆಸಲು ಸಿಐಡಿಗೆ ವಹಿಸಬೇಕು ಎಂದು ಜಂಟಿ ಸದನ ಸಮಿತಿ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಇದೀಗ ವರದಿಯಲ್ಲಿನ ಪ್ರಮುಖ ಅಂಶಗಳ ಕುರಿತ ವಿವರ ಈಟಿವಿ ಭಾರತಕ್ಕೆ ಲಭ್ಯವಾಗಿದೆ.

ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಹಾಗೂ ನಿರ್ವಹಣೆಯಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ಸ್ವತಃ ಶಾಸಕರೇ ಆರೋಪ ಮಾಡಿದ್ದ ಹಿನ್ನೆಲೆಯಲ್ಲಿ ರಚಿಸಲಾಗಿದ್ದ ಜಂಟಿ ಸದನ ಸಮಿತಿ ಸದನಕ್ಕೆ ತನ್ನ ವರದಿಯನ್ನು ಸಲ್ಲಿಕೆ ಮಾಡಿದೆ. ಶಾಸಕ ಅಭಯ್ ಪಾಟೀಲ್ ಅಧ್ಯಕ್ಷತೆಯ ಜಂಟಿ ಸದನ ಸಮಿತಿ ವರದಿಯನ್ನು ವಿಧಾನ ಪರಿಷತ್​ನಲ್ಲಿ ಬಿಜೆಪಿ ಸದಸ್ಯ ಅ.ದೇವೇಗೌಡ ಮಂಡಿಸಿದರು. ವರದಿಯಲ್ಲಿ ಅಕ್ರಮ ನಡೆದಿರುವುದನ್ನು ಪ್ರಸ್ತಾಪಿಸಿರುವ ಜಂಟಿ ಸದನ ಸಮಿತಿ ರಾಜ್ಯದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆಯಲ್ಲಿ ದೊಡ್ಡ ಪ್ರಮಾಣದ ಅಕ್ರಮಗಳಾಗಿದ್ದು, ಸಮಗ್ರ ತನಿಖೆಯನ್ನು ಸಿಐಡಿಗೆ ಒಪ್ಪಿಸಬೇಕು ಎನ್ನುವ ಮಹತ್ವದ ಶಿಫಾರಸ್ಸನ್ನು ರಾಜ್ಯ ಸರ್ಕಾರಕ್ಕೆ ಮಾಡಿದೆ.

ಶಾಸಕರಿಂದ ಬಂದ ಆರೋಪಗಳ ಆಧಾರದಲ್ಲಿ ರಾಜ್ಯದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕಗಳ ಅಳವಡಿಕೆ ಮತ್ತು ನಿರ್ವಹಣೆ ವಿಚಾರದಲ್ಲಿ ನಡೆದಿರುವ ಅವ್ಯವಹಾರಗಳ ಆರೋಪದ ಕುರಿತು ಶೇಕಡ 10ರಷ್ಟು ಪರಿಶೀಲನೆ ನಡೆಸಲಾಗಿದೆ. ಅದರಲ್ಲಿ ದೊಡ್ಡಪ್ರಮಾಣದ ಲೋಪದೋಷಗಳು ಕಂಡುಬಂದಿವೆ. ಹಾಗಾಗಿ ಅಕ್ರಮದ ಕುರಿತು ವಿಸ್ತೃತ ತನಿಖೆಯ ಅಗತ್ಯವಿದೆ. ಅಕ್ರಮ, ಅವ್ಯವಹಾರ ಆರೋಪಗಳ ಕುರಿತು ಪೂರ್ಣ ಪ್ರಮಾಣದಲ್ಲಿ ಪರಿಶೀಲಿಸಿದರೆ ಇನ್ನೂ ಹೆಚ್ಚಿನ ಲೋಪದೋಷಗಳು ಕಂಡುಬರಬಹುದು. ಹಾಗಾಗಿ ಸಿಐಡಿಗೆ ವಹಿಸಬೇಕು ಎಂದು ಉಲ್ಲೇಖಿಸಿ ತನಿಖೆಯ ಅಗತ್ಯತೆಯನ್ನು ಸಮಿತಿ ಪ್ರತಿಪಾದಿಸಿದೆ.

ಸಿಐಡಿ ತನಿಖೆಯ ಜೊತೆ ಮತ್ತಷ್ಟು ಶಿಫಾರಸುಗಳನ್ನು ಜಂಟಿ ಸದನ ಸಮಿತಿ ಮಾಡಿದ್ದು ಅದರಲ್ಲಿ ಪ್ರಮುಖವಾಗಿ ಶುದ್ಧ ಕುಡಿಯುವ ನೀರಿನ ಘಟಕಗಳ ಅಳವಡಿಕೆ ಹಾಗೂ ನಿರ್ವಹಣೆಗೆ ಸಂಬಂಧಿಸಿದಂತೆ ಹಾಲಿ ನಿರ್ವಹಿಸಿರುವ ಕಾಮಗಾರಿಗಳಲ್ಲಿ ಲೋಪವೆಸಗಿರುವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎನ್ನುವುದು ಮಹತ್ವದ್ದಾಗಿದೆ‌. ಶುದ್ಧ ಕುಡಿಯುವ ನೀರಿನ ಘಟಕಗಳ ಲೋಪದೋಷಗಳಿಗೆ ಕಾರಣರಾದವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು. ಸರ್ಕಾರಕ್ಕೆ ಅಗಿರುವ ನಷ್ಟದ ಮೊತ್ತವನ್ನು ಆಯಾ ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದಲೇ ವಸೂಲಿ ಮಾಡಬೇಕು ಎನ್ನುವ ಶಿಫಾರಸ್ಸು ಕೂಡ ಈ ವರದಿಯಲ್ಲಿದೆ.

ಇದನ್ನೂ ಓದಿ:ಸೈಬರ್ ವಂಚನೆ ತಡೆಗೆ ಕಟ್ಟುನಿಟ್ಟಿನ ಕ್ರಮ: ಗೃಹ ಸಚಿವ ಆರಗ ಜ್ಞಾನೇಂದ್ರ

2021ರಲ್ಲಿ ಜಂಟಿ ಸದನ ಸಮಿತಿ ರಚನೆ:ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಹಾಗೂ ನಿರ್ವಹಣೆಯಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ಸ್ವತಃ ಶಾಸಕರೇ ಆರೋಪ ಮಾಡಿದ್ದ ಹಿನ್ನೆಲೆಯಲ್ಲಿ ವಿಧಾನಸಭೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರಿಂದ ಸದನ ಸಮಿತಿ ರಚನೆಯ ಆಗ್ರಹ ಕೇಳಿಬಂದಿತ್ತು. ಇದಕ್ಕೆ ಮಣಿದಿದ್ದ ಅಂದಿನ ಮುಖ್ಯಮಂತ್ರಿ ಬಿ‌.ಎಸ್ ಯಡಿಯೂರಪ್ಪ ಜಂಟಿ ಸದನ ಸಮಿತಿ ರಚನೆಗೆ ಸಮ್ಮತಿಸಿದ್ದರು. ಅಂದು ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವರಾಗಿದ್ದ ಕೆ.ಎಸ್‌ ಈಶ್ವರಪ್ಪ ಕೂಡ ಸಮಿತಿ ರಚನೆ ಭರವಸೆ ನೀಡಿ ಸದನದಲ್ಲಿನ ಗದ್ದಲಕ್ಕೆ ತೆರೆ ಎಳೆದಿದ್ದರು.

ಅದರಂತೆ ಅಕ್ರಮದ ತನಿಖೆಗೆ ಅಂದಿನ ಶಾಸಕ ಆರಗ ಜ್ಞಾನೇಂದ್ರ ಅಧ್ಯಕ್ಷತೆಯಲ್ಲಿ ಶಾಸಕರು ಹಾಗೂ ವಿಧಾನಪರಿಷತ್‌ ಸದಸ್ಯರನ್ನು ಒಳಗೊಂಡ 20 ಮಂದಿಯ ಜಂಟಿ ಸದನ ಸಮಿತಿ ರಚಿಸಲಾಗಿತ್ತು. ಸಮಿತಿಯಲ್ಲಿ ಶಾಸಕರಾದ ಅಪ್ಪಚ್ಚು ರಂಜನ್, ರಾಜೇಶ್ ನಾಯ್ಕ್, ಕೆ.ಜೆ. ಜಾರ್ಜ್, ಕೃಷ್ಣ ಬೈರೇಗೌಡ, ಯು.ಟಿ ಖಾದರ್, ಈಶ್ವರ್ ಖಂಡ್ರೆ, ಎ.ಟಿ. ರಾಮಸ್ವಾಮಿ, ವೆಂಕಟ್‌ರಾವ್ ನಾಡಗೌಡ, ಎ.ಎಸ್ ಪಾಟೀಲ ನಡಹಳ್ಳಿ, ವೀರಣ್ಣ ಚರಂತಿಮಠ, ಕೆ. ಶಿವನಗೌಡ ನಾಯಕ್, ಬಿ.ಸಿ ನಾಗೇಶ್, ಪಿ. ರಾಜೀವ್, ಹಾಲಪ್ಪ ಆಚಾರ್, ವಿಧಾನ ಪರಿಷತ್‌ ಸದಸ್ಯರಾದ ಎಸ್‌. ರವಿ, ವಿಜಯ್ ಸಿಂಗ್, ಎಚ್‌.ಎಂ ರಮೇಶ್ ಗೌಡ, ಅ.ದೇವೇಗೌಡ, ಎಸ್‌.ವಿ ಸಂಕನೂರ ಸದಸ್ಯರಾಗಿದ್ದರು.

ನಂತರ ಆರಗ ಜ್ಞಾನೇಂದ್ರ ಗೃಹ ಸಚಿವರಾದ ಹಿನ್ನಲೆಯಲ್ಲಿ ಶಾಸಕ ಅಭಯ್ ಪಾಟೀಲ್ ಅವರಿಗೆ ಜಂಟಿ ಸದನ ಸಮಿತಿ ಅಧ್ಯಕ್ಷತೆ ವಹಿಸಲಾಗಿತ್ತು. ಈ ಸಮಿತಿ ಅಕ್ರಮ ಆರೋಪಗಳ ಕುರಿತು ತನಿಖೆ ನಡೆಸಿ ವರದಿಯನ್ನು ಸಲ್ಲಿಕೆ ಮಾಡಿದ್ದು ಸಿಐಡಿ ತನಿಖೆಗೆ ಶಿಫಾರಸ್ಸು ಮಾಡುವ ಮೂಲಕ ಅಕ್ರಮ ನಡೆದಿರುವುದು ಸತ್ಯ ಎನ್ನುವ ಮಾಹಿತಿಯನ್ನು ತಿಳಿಸಿದೆ.

ಸಮ್ಮಿಶ್ರ ಸರ್ಕಾರದ ವೇಳೆ ಬಿಜೆಪಿಯಿಂದ ಧರಣಿ:ವಾಸ್ತವವಾಗಿ ಬಿಜೆಪಿ ಸರ್ಕಾರ ರಚನೆಗೂ ಮೊದಲೇ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಕಾಮಗಾರಿಯಲ್ಲಿ ಭಾರಿ ಅವ್ಯವಹಾರವಾಗಿದೆ. ಈ ಬಗ್ಗೆ ತನಿಖೆ ನಡೆಸಲು ಸದನ ಸಮಿತಿ ರಚಿಸುವಂತೆ ಬಿಜೆಪಿ ಆಗ್ರಹಿಸಿತ್ತು. 2019ರ ಫೆಬ್ರವರಿಯಲ್ಲಿ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರ ಇದ್ದ ವೇಳೆ ಅಂದು ಪ್ರತಿಪಕ್ಷದಲ್ಲಿದ್ದ ಬಿಜೆಪಿ ಸದಸ್ಯರು ವಿಧಾನ ಪರಿಷತ್‌ನಲ್ಲಿ ಧರಣಿ ನಡೆಸಿದ್ದರು. ಸದನ ಸಮಿತಿ ರಚಿಸಿ ತನಿಖೆ ಮಾಡಿಸುವಂತೆ ಆಗ್ರಹಿಸಿದ್ದರು. ಆದರೆ ಇದಕ್ಕೆ ನಿರಾಕರಿಸಿದ್ದ ಮೈತ್ರಿ ಸರ್ಕಾರ ಸದನ ಸಮಿತಿ ಬದಲು ತಜ್ಞರ ಸಮಿತಿ ರಚಿಸಲಾಗಿದೆ ವರದಿ ಬಂದ ನಂತರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು.

ಆದರೆ ಬದಲಾದ ರಾಜಕೀಯ ವಿದ್ಯಮಾನಗಳಲ್ಲಿ ಸಮ್ಮಿಶ್ರ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ರಚನೆಯಾಯಿತು. ಕೋವಿಡ್ ನಿಯಂತ್ರಣಕ್ಕೆ ಬಂದ ನಂತರ ಮತ್ತೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಹಾಗೂ ನಿರ್ವಹಣೆಯಲ್ಲಿ ಭಾರಿ ಅವ್ಯವಹಾರ ನಡೆದಿದೆ ಈ ಬಗ್ಗೆ ತನಿಖೆಯಾಗಬೇಕು ಎನ್ನುವ ಆಗ್ರಹ ಕೇಳಿಬಂದಿದ್ದರಿಂದ ಯಡಿಯೂರಪ್ಪ ಸರ್ಕಾರದ ವೇಳೆ ಜಂಟಿ ಸದನ ಸಮಿತಿ ರಚಿಸಲಾಯಿತು. ಬೊಮ್ಮಾಯಿ‌ ಸರ್ಕಾರದ ವೇಳೆ ವರದಿ ಮಂಡನೆಯಾಗಿದ್ದು, ಚುನಾವಣೆ ಸನಿಹದಲ್ಲಿ ಬೊಮ್ಮಾಯಿ‌ ಸರ್ಕಾರ ಈ ವರದಿಯ ಶಿಫಾರಸ್ಸಿನಂತೆ ಅಕ್ರಮ ಆರೋಪ ಕುರಿತು ವಿಸ್ತೃತ ತನಿಖೆ ನಡೆಸಲು ಸಿಐಡಿಗೆ ವಹಿಸಲಿದೆಯಾ? ಅಥವಾ ವರದಿಯನ್ನು ಕಡೆಗಣಿಸಲಿದೆಯಾ? ಎನ್ನುವುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ:ಬಿಜೆಪಿ ಸರ್ಕಾರದ ನಿರ್ಗಮನದ ಬಜೆಟ್: ಸಿದ್ದರಾಮಯ್ಯ

ABOUT THE AUTHOR

...view details