ಕರ್ನಾಟಕ

karnataka

ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಕಬ್ಬಿಣದ ತುಂಡು: ಮೆಟ್ರೋ ನಿಲ್ದಾಣದ ಬಳಿ ಅವಘಡ

By

Published : Feb 25, 2023, 2:24 PM IST

ಚಲಿಸುತ್ತಿದ್ದ ಕಾರಿನ ಮೇಲೆ ಕಬ್ಬಿಣದ ತುಂಡು ಬಿದ್ದು ಕಾರಿನ ಗಾಜು ಜಖಂಗೊಂಡಿದೆ. ಯಶವಂತಪುರ ಮೆಟ್ರೋ ನಿಲ್ದಾಣದ ಬಳಿ ಈ ಅವಘಡ ನಡೆದಿದೆ.

Iron piece fell on a moving car
ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಕಬ್ಬಿಣದ ತುಂಡು

ಬೆಂಗಳೂರು: ಮೆಟ್ರೋ ಪಿಲ್ಲರ್ ಕುಸಿದು ತಾಯಿ ಮಗು ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಮೆಟ್ರೋ ನಿಲ್ದಾಣದಲ್ಲಿ ಮತ್ತೊಂದು ಅವಘಡ ನಡೆದಿದೆ. ಚಲಿಸುತ್ತಿದ್ದ ಕಾರಿನ ಮೇಲೆ ಕಬ್ಬಿಣದ ತುಂಡು ಬಿದ್ದು ಕಾರಿನ ಗಾಜು ಜಖಂಗೊಂಡಿದೆ. ಯಶವಂತಪುರದ ಸ್ಯಾಂಡಲ್ ಸೋಪು ಫ್ಯಾಕ್ಟರಿ ಮೆಟ್ರೋ ನಿಲ್ದಾಣದ ಕೆಳಗೆ ನಿನ್ನೆ(ಶುಕ್ರವಾರ) ಸಂಜೆ ಈ ಘಟನೆ ನಡೆದಿದೆ.

ಪ್ರಕರಣ ದಾಖಲು: ಮೆಟ್ರೋ ನಿಲ್ದಾಣದ ಕೆಳಗೆ ತೆರಳುತ್ತಿದ್ದ ರಿತೇಶ್ ಎಂಬುವವರ ಕಾರಿನ ಮೇಲೆ ಕಬ್ಬಿಣದ ತುಂಡು ಬಿದ್ದಿದೆ. ಅದೃಷ್ಟವಶಾತ್ ಚಾಲಕ ಬಚಾವಾಗಿದ್ದಾರೆ. ಬಿಎಂಆರ್​ಸಿಎಲ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ಘಟನೆ ನಡೆದಿದೆ ಎಂದು ಕಾರಿನ ಮಾಲೀಕ ರಿತೇಶ್ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮೆಟ್ರೋ ಪಿಲ್ಲರ್ ದುರಂತ:ನಾಗವಾರ ಬಳಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ದಿಢೀರ್ ಕುಸಿತಗೊಂಡು ತಾಯಿ ಮಗ ಸಾವನ್ನಪ್ಪಿರುವ ಘಟನೆ ಗೋವಿಂದಪುರ‌ ಪೊಲೀಸ್ ಠಾಣಾ ವ್ಯಾಪ್ತಿಯ ಹೆಚ್ ಬಿಆರ್​ ಲೇಔಟ್ ಬಳಿ‌ ಕಳೆದ ಜನವರಿ 10ರಂದು ಬೆಳಗ್ಗೆ 9.30ರ ಸುಮಾರಿಗೆ ನಡೆದಿತ್ತು. ಘಟನೆಯಲ್ಲಿ ತೇಜಸ್ವಿನಿ (28) ಹಾಗೂ ಅವರ ಪುತ್ರ ವಿಹಾನ್ (2.5) ಮೃತಪಟ್ಟಿದ್ದರು.

ಪತ್ನಿಯನ್ನು ಕಚೇರಿಗೆ ಬಿಡಲು ಹೊರಟಿದ್ದ ಪತಿ: ಅಂದು ಬೆಳಗ್ಗೆ ಲೋಹಿತ್ ಕುಮಾರ್ ಮತ್ತು ತೇಜಸ್ವಿನಿ ದಂಪತಿ ತಮ್ಮ ಅವಳಿ ಮಕ್ಕಳ ಜೊತೆ ಬೈಕ್​ನಲ್ಲಿ ತೆರಳುತ್ತಿದ್ದರು. ಇವರು ಹೊರಮಾವು ನಿವಾಸಿಗಳಾಗಿದ್ದಾರೆ. ತೇಜಸ್ವಿನಿ ಅವರು ಮಾನ್ಯತಾ ಟೆಕ್ ಪಾರ್ಕ್​ನಲ್ಲಿ ಕೆಲಸ ಮಾಡುತ್ತಿದ್ದರು. ಪತ್ನಿ ತೇಜಸ್ವಿನಿಯನ್ನು ಕೆಲಸಕ್ಕೆ ಬಿಟ್ಟು ನಂತರ ತನ್ನ ಇಬ್ಬರು ಮಕ್ಕಳನ್ನು ಬೇಬಿ ಸಿಟ್ಟಿಂಗ್ ಶಾಲೆಗೆ ಬಿಡಲು ಲೋಹಿತ್ ಕುಮಾರ್ ತೆರಳುತ್ತಿದ್ದರು. ಈ ವೇಳೆ ಏಕಾಏಕಿ ಹೆಣ್ಣೂರು ಬಳಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಮೈಮೇಲೆ ಬಿದ್ದ ಪರಿಣಾಮ ತೇಜಸ್ವಿನಿ, ಗಂಡು ಮಗು ವಿಹಾನ್ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು. ಆದ್ರೆ ಅಷ್ಟರಲ್ಲೇ ತಾಯಿ ಮಗ ಇಬ್ಬರೂ ಕೊನೆಯುಸಿರೆಳೆದಿದ್ದರು.

ಇದನ್ನೂ ಓದಿ:ಬೆಂಗಳೂರಲ್ಲಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿತ.. ತಾಯಿ ಮಗ ಸಾವು, ಅಪ್ಪ ಮಗಳ ಸ್ಥಿತಿ ಗಂಭೀರ

ಎರಡು ಅಮಾಯಕ ಜೀವ ಬಲಿ:ಪಿಲ್ಲರ್ ನಿರ್ಮಾಣ ಕಾರ್ಯ ಪೂರ್ಣವಾಗಿರಲಿಲ್ಲ. ಅದಕ್ಕೂ ಮುನ್ನ ಕಬ್ಬಿಣದ ಸರಳುಗಳನ್ನು ನಿಲ್ಲಿಸಲಾಗಿತ್ತು. ಈ ಸರಳುಗಳಿಗೆ ಸಪೋರ್ಟಿಂಗ್ ಕಂಬಿ ನೀಡದೇ ಬಿಟ್ಟಿರುವುದು ಮೇಲ್ನೋಟಕ್ಕೆ ಕಂಡು ಬಂದಿತ್ತು. ಮೆಟ್ರೋ ಅಜಾಗರೂಕತೆಗೆ ಎರಡು ಅಮಾಯಕ ಜೀವ ಬಲಿಯಾಗಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ಘಟನೆ ಬಳಿಕ ಸ್ಥಳಕ್ಕೆ ಭೇಟಿ ನೀಡಿರುವ ಬಿಎಂಆರ್​ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್, ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಚಂದ್ರಶೇಖರ್ ಹಾಗೂ ಡಿಸಿಪಿ ಭೀಮಾಶಂಕರ ಗುಳೇದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಇದನ್ನೂ ಓದಿ:ಬೆಂಗಳೂರು ಮೆಟ್ರೊ ಪಿಲ್ಲರ್ ದುರಂತ: ನಮ್ಮ ಮೆಟ್ರೋ ಸಂಸ್ಥೆಗೆ ವರದಿ ಸಲ್ಲಿಸಿದ ಐಐಎಸ್‌ಸಿ

ABOUT THE AUTHOR

...view details