ಬೆಂಗಳೂರು: ಐ ಮಾನಿಟರ್ ಅಡ್ವೈಸರಿ ಸಂಸ್ಥೆಯ ಬಹುಕೋಟಿ ವಂಚನೆ ಪ್ರಕರಣದಲ್ಲಿ ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ವಿರುದ್ಧದ ಎಫ್ಐಆರ್ ರದ್ದುಪಡಿಸಿದ್ದ ಹೈಕೋರ್ಟ್ ತೀರ್ಪಿಗೆ ಸುಪ್ರೀಂಕೋರ್ಟ್ ತಡೆ ನೀಡಿದೆ. ಹೀಗಾಗಿ ನಿಂಬಾಳ್ಕರ್ ತನಿಖೆ ಎದುರಿಸಬೇಕಿದ್ದು, ಮತ್ತೊಮ್ಮೆ ಸಂಕಷ್ಟ ಎದುರಾಗಿದೆ.
ಹೂಡಿಕೆದಾರರಿಗೆ ಕೋಟ್ಯಂತರ ರೂಪಾಯಿ ವಂಚನೆ ಎಸಗಿರುವ ಐಎಂಎ ಸಂಸ್ಥೆಯ ವಿರುದ್ಧ ಸೂಕ್ತ ತನಿಖೆ ನಡೆಸಿಲ್ಲ. ಆರೋಪಿಗಳಿಗೆ ಪೂರಕವಾಗಿ ನಡೆದುಕೊಂಡಿದ್ದಾರೆಂಬ ಆರೋಪದಡಿ ಸಿಬಿಐ, ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿತ್ತು.
ಈ ವೇಳೆ ತನಿಖೆ ಪ್ರಶ್ನಿಸಿ ನಿಂಬಾಳ್ಕರ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಏಕಸದಸ್ಯ ಪೀಠ, ಮಾರ್ಚ್ 19ರಂದು ಪ್ರಕರಣದಲ್ಲಿ ಅಧಿಕಾರಿಯ ಪಾತ್ರವಿಲ್ಲ ಎಂದು ಅಭಿಪ್ರಾಯಪಟ್ಟು ಎಫ್ಐಆರ್ ರದ್ದುಪಡಿಸಿ ಆದೇಶಿಸಿತ್ತು.
ಹೈಕೋರ್ಟ್ ಆದೇಶ ಪ್ರಶ್ನಿಸಿ ಸಿಬಿಐ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಪ್ರಕರಣದ ತನಿಖೆ ನಡೆಸಿದ ನ್ಯಾ. ಇಂದಿರಾ ಬ್ಯಾನರ್ಜಿ ಹಾಗೂ ನ್ಯಾ. ಸುಭಾಷ್ ರೆಡ್ಡಿ ಅವರಿದ್ದ ಪೀಠ, ಪ್ರಕರಣದಲ್ಲಿ ಅಧಿಕಾರಿ ತನಿಖೆಗೆ ಒಳಗಾಗುವ ಅಗತ್ಯವಿದೆ ಎಂದಿದ್ದು, ಹೈಕೋರ್ಟ್ ತೀರ್ಪಿಗೆ ತಡೆನೀಡಿದೆ. ಅದರಂತೆ ಸಿಬಿಐ, ಹೇಮಂತ್ ನಿಂಬಾಳ್ಕರ್ ವಿರುದ್ಧ 2020ರ ಫೆಬ್ರವರಿ 1ರಂದು ದಾಖಲಿಸಿರುವ ಎಫ್ಐಆರ್ ನಂತೆ ತನಿಖೆ ಎದುರಿಸಬೇಕಿದೆ.
ಓದಿ:ವಿದ್ಯಾರ್ಥಿನಿಯರ ಓಡಾಟಕ್ಕೆ ಹಾಕಲಾಗಿದ್ದ ನಿರ್ಬಂಧದ ಸುತ್ತೋಲೆ ವಾಪಸ್ ಪಡೆದ ಮೈಸೂರು ವಿವಿ