ಬೆಂಗಳೂರು:ಕೊರೊನಾ ಚಿಕಿತ್ಸೆಯ ನಿರ್ವಹಣೆಗೆ ಸಂಬಂಧಿಸಿದಂತೆ ಖಾಸಗಿ ಆಸ್ಪತ್ರೆಗಳ ಜವಾಬ್ದಾರಿ ಹೊತ್ತಿರುವ ಐಪಿಎಸ್ ಅಧಿಕಾರಿ ಡಿ. ರೂಪಾ ಖಾಸಗಿ ಆಸ್ಪತ್ರೆಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕೊರೊನಾ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳು ಹೆಚ್ಚು ಬಿಲ್ ಮಾಡಿ ಜನರನ್ನು ಲೂಟಿ ಮಾಡ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಸದ್ಯ ಇದರ ಬಗ್ಗೆ ನಾವು ಪರಿಶೀಲನೆ ನಡೆಸಿದ್ದೇವೆ. ಕೊರೊನಾ ರೋಗಿಗಳ ಚಿಕಿತ್ಸೆಗೆ ಅಧಿಕ ಬಿಲ್ ಮಾಡಿದ್ರೆ ಕ್ರಿಮಿನಲ್ ಕೇಸ್ ದಾಖಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನ ಕೆಲ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಂದ ಹೆಚ್ಚಿನ ಬಿಲ್ ವಸೂಲಿ ಮಾಡಿರುವ ಸಂಗತಿಯನ್ನು ಐಎಎಸ್ ಅಧಿಕಾರಿ ಹರ್ಷ ಗುಪ್ತಾ ಮತ್ತು ಐಪಿಎಸ್ ಅಧಿಕಾರಿ ಡಿ. ರೂಪಾ ನೇತೃತ್ವದ ತಂಡ ಪತ್ತೆ ಹಚ್ಚಿದೆ. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಹಣವನ್ನು ವಾಪಸು ರೋಗಿಗಳ ಖಾತೆಗೆ ಜಮೆ ಮಾಡುವಂತೆ ಆಸ್ಪತ್ರೆಗಳಿಗೆ ಸೂಚನೆಯನ್ನೂ ಡಿ. ರೂಪಾ ನೀಡಿದ್ದಾರೆ.
ಐಪಿಎಸ್ ಅಧಿಕಾರಿ ಡಿ.ರೂಪಾ ಖಡಕ್ ಎಚ್ಚರಿಕೆ ಖಾಸಗಿ ಆಸ್ಪತ್ರೆಯವರು ಕೊರೊನಾ ಸೋಂಕಿತರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದ ಬಗ್ಗೆ ದೂರುಗಳು ಕೇಳಿಬಂದಿದ್ದವು. ಈ ಬಗ್ಗೆ ನಿಗಾ ವಹಿಸಲು ರಾಜ್ಯ ಸರ್ಕಾರ ಐಎಎಸ್ ಅಧಿಕಾರಿ ಹರ್ಷ ಗುಪ್ತ ಹಾಗೂ ಐಪಿಎಸ್ ಅಧಿಕಾರಿ ಡಿ.ರೂಪಾ ನೇತೃತ್ವದಲ್ಲಿ ತಂಡ ನಿಯೋಜಿಸಿತ್ತು.
ನಗರದ ಹಲವು ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿದ್ದ ತಂಡ, ಚಿಕಿತ್ಸಾ ವೈಖರಿ ಹಾಗೂ ರೋಗಿಗಳ ಮಾಹಿತಿ ಸಂಗ್ರಹಿಸಿತ್ತು. ಕೆಲ ಆಸ್ಪತ್ರೆಯವರು, 22 ರೋಗಿಗಳಿಂದ ರಾಜ್ಯ ಸರ್ಕಾರ ನಿಗದಿಪಡಿಸಿದ್ದ ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡಿದ್ದು ಖಚಿತವಾಗಿತ್ತು. ಈ ಬಗ್ಗೆ ಟ್ವೀಟ್ ಮಾಡಿರುವ ಡಿ.ರೂಪಾ, 'ಖಾಸಗಿ ಆಸ್ಪತ್ರೆಯವರು ₹24 ಲಕ್ಷ ಹೆಚ್ಚುವರಿಯಾಗಿ ಬಿಲ್ ಪಡೆದಿದ್ದಾರೆ. ಹಣವನ್ನು ವಾಪಸು ರೋಗಿಗಳಿಗೆ ಕೊಡಿಸಲಾಗುತ್ತಿದೆ' ಎಂದಿದ್ದಾರೆ.
ಕೊರೊನಾ ರೋಗಿಗಳಿಗೆ ಸರಿಯಾಗಿ ಮಾಹಿತಿ ನೀಡಬೇಕು. ಸದ್ಯ ಅಧಿಕಾರಿಗಳು ಹಾಗೂ ನಾನು ಭೇಟಿ ನೀಡಿರುವ ಮೂರು ಆಸ್ಪತ್ರೆಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದು, ನಗರದ ಮೂರು ಆಸ್ಪತ್ರೆಗಳಲ್ಲಿ ಲೋಪದೋಷ ಕಂಡು ಬಂದಿದೆ. ಹೀಗಾಗಿ ಅದನ್ನು ತಿದ್ದಿಕೊಳ್ಳಲು ಸೂಚಿಸಿದ್ದು, ಆಸ್ಪತ್ರೆ ಆಡಳಿತ ಮಂಡಳಿ ಒಪ್ಪಿಕೊಂಡಿದೆ ಎಂದರು.
ಖಾಸಗಿ ಆಸ್ಪತ್ರೆಯಲ್ಲಿ ಬೆಡ್ ಎಷ್ಟಿದೆ?, ಇದರ ಬಗ್ಗೆ ಆನ್ಲೈನ್ನಲ್ಲಿ ಪ್ರತಿ ಬೆಡ್ನ ಮಾಹಿತಿ ಇರಬೇಕು. ಸರ್ಕಾರ ನಿಗದಿ ಮಾಡಿದ ಹಣಕ್ಕಿಂತ ಹೆಚ್ಚು ಬಿಲ್ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಕೆಲವರು ಬಿಬಿಎಂಪಿ ಗಮನಕ್ಕೆ ತರದೆ ಆಸ್ಪತ್ರೆಗೆ ಹೋಗಿದ್ದಾರೆ. ಹೀಗಾಗಿ ನೇರವಾಗಿ ಹೋದವರಿಗೆ ಹೆಚ್ಚಿನ ಬಿಲ್ ಮಾಡಿದ್ದಾರೆ. ಸದ್ಯ ಕೋವಿಡ್ ತಪಾಸಣೆ ಮಾಡಿ ಫಲಿತಾಂಶ ಬಂದು ಮಾರ್ಗಸೂಚಿ ಬರುವುದಕ್ಕೆ ಮೂರು ದಿನ ಆಗುತ್ತಿದೆ. ಪಾಸಿಟಿವ್ ಬಂದವರು ಆತಂಕಕ್ಕೊಳಗಾಗಿ ಖಾಸಗಿ ಆಸ್ಪತ್ರೆಗೆ ಹೋಗಿ ಸೇರಿಕೊಳ್ಳುತ್ತಿದ್ದಾರೆ. ಆದರೆ, ಸರ್ಕಾರದ ಮಾರ್ಗಸೂಚಿ ಪಡೆದು ಖಾಸಗಿ ಆಸ್ಪತ್ರೆಗೆ ಹೋದರೆ ಯಾವುದೇ ಸಮಸ್ಯೆ ಆಗುವುದಿಲ್ಲ. ಕೆಲವರಿಗೆ ಮನೆಯಲ್ಲಿ ಕ್ವಾರಂಟೈನ್ ಮಾಡಿಕೊಳ್ಳಲು ಸೂಚಿಸಲಾಗುತ್ತದೆ. ಆದರೆ, ಕೇಳದೆ ಕೆಲವರು ತಾವಾಗಿಯೇ ಆಸ್ಪತ್ರೆಗೆ ಹೋಗುತ್ತಿದ್ದಾರೆ ಎಂದು ರೂಪಾ ಹೇಳಿದರು.