ಬೆಂಗಳೂರು:ಐಪಿಎಲ್ ಹವಾ ಜೋರಾಗುತ್ತಿದ್ದಂತೆ ಬೆಟ್ಟಿಂಗ್ ದಂಧೆಯೂ ಕೂಡ ವ್ಯಾಪಕವಾಗಿ ನಡೆಯುತ್ತಿದೆ. ಹಲವು ಮಂದಿ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದು, ಪ್ರಮುಖವಾಗಿ ಯುವಕರು ಹಾಗೂ ವಿದ್ಯಾರ್ಥಿಗಳು ಈ ಗೀಳಿಗೆ ಬಿದ್ದಿರುವುದು ನಿಜಕ್ಕೂ ಆತಂಕಕಾರಿ.
ಬುಕ್ಕಿಗಳು ಮೊಬೈಲ್ ಮುಖಾಂತರ, ಮನೆಯಲ್ಲಿ ಅಥವಾ ಲಾಡ್ಜ್ಗಳಲ್ಲಿ ತಂಡಗಳ ಸೋಲು ಗೆಲುವಿನ ಆಟವಾಡಿ, ಹೆಚ್ಚಿನ ಹಣ ಗಳಿಸ್ತಿದ್ದಾರೆ. ಆದರೆ, ಕೆಲವರು ಹಣ ಕಳೆದುಕೊಂಡು ಬೀದಿಗೆ ಬಂದಿರುವ ವಿಚಾರ ಕೂಡ ಹೆಚ್ಚಾಗಿ ಕಂಡು ಬರ್ತಿದೆ. ಸದ್ಯ ಐಪಿಎಲ್ ಶುರುವಾದ ದಿನದಿಂದ ಪೊಲೀಸರು ಅಲರ್ಟ್ ಆಗಿದ್ದು, ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಆದ ನಂತರ ಪೊಲೀಸರು ಎಲ್ಲೆಡೆ ಕಣ್ಣಿಟ್ಟಿದ್ದಾರೆ.
ಸಿಸಿಬಿ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ತೊಡಗಿದ್ದು, ಜನವರಿ 1ರಿಂದ ಸೆಪ್ಟೆಂಬರ್ 30ರವರೆಗೆ ಸಿಸಿಬಿ ಅಧಿಕಾರಿಗಳು ಒಟ್ಟು 19 ಕ್ರಿಕೆಟ್ ಬೆಟ್ಟಿಂಗ್ ಪ್ರಕರಣ ದಾಖಲಿಸಿ 40 ಜನರನ್ನ ಬಂಧಿಸಿದ್ದಾರೆ. 19 ಪ್ರಕರಣದಲ್ಲಿ ಒಟ್ಟು 34,51,850 ರೂ. ಸೀಜ್ ಮಾಡಿದ್ದಾರೆ. ಈ ಕ್ರಿಕೆಟ್ ಬೆಟ್ಟಿಂಗ್ ದಂಧೆ ಪತ್ತೆ ಹಚ್ಚಲು ಸಿಸಿಬಿ ಘಟಕದಿಂದ ವಿಶೇಷ ತಂಡ ರಚನೆಯಾಗಿದೆ. ಎಲ್ಲೆಡೆ ನಿಗಾ ಇಡಲಾಗಿದೆ. ಸದ್ಯ ಬಹುತೇಕ ಮಂದಿ ಆನ್ಲೈನ್ ಮೂಲಕ ಆಟವಾಡುವ ಕಾರಣ, ಸಿಸಿಬಿ ಪೊಲೀಸರು ಸೈಬರ್ ವಿಂಗ್ ಮುಖಾಂತರ ಆಪರೇಟ್ ಮಾಡುವುದಕ್ಕೆ ಮುಂದಾಗಿದ್ದಾರೆ.
ಹೇಗೆ ನಡೆಯುತ್ತದೆ ಆನ್ಲೈನ್ ಬೆಟ್ಟಿಂಗ್? :ಅನೇಕ ವೆಬ್ಸೈಟ್ಗಳ ಆಧಾರಿತ ಬೆಟ್ಟಿಂಗ್ ಇದು. ಬಾಲ್ ಟು ಬಾಲ್ ಆಧಾರದಲ್ಲಿ ಪಂದ್ಯದ ಫಲಿತಾಂಶದ ಆಧಾರದಲ್ಲಿ ನಡೆಯುತ್ತದೆ. ಪ್ರತಿ ಎಸೆತದಲ್ಲಿ ಏನಾಗಲಿದೆ ಎಂದು ಹೇಳುವ ಮೂಲಕ, ನಿಖರವಾಗಿ ಹೇಳಿದವರಿಗೆ ಕೋಟ್ಯಂತರ ಹಣ ಆನ್ಲೈನ್ನಲ್ಲಿಯೇ ವರ್ಗಾವಣೆಯಾಗುತ್ತದೆ. ಮಧ್ಯವರ್ತಿಯೊಬ್ಬ ಹಣ ಪಡೆದು ನಡೆಸುವ ಬೆಟ್ಟಿಂಗ್ ಅಂದ್ರೆ, ಈ ತಂಡ ಗೆದ್ರೆ ಇಂತಿಷ್ಟು ಹಣ ಎಂದು ಹಲವರಿಂದ ಹಣ ಪಡೆದು ಪಂದ್ಯದ ಫಲಿತಾಂಶದಲ್ಲಿ ಗೆದ್ದವರಿಗೆ ಇಂತಿಷ್ಟು ಹಣ ನೀಡುವುದು. ಇಲ್ಲಿ ಮಧ್ಯವರ್ತಿಯು ನಿರ್ದಿಷ್ಟ ಹಣವನ್ನು ತನ್ನ ಕಮಿಷನ್ ರೂಪದಲ್ಲಿ ಪಡೆಯುತ್ತಾನೆ.
ಹೆಡ್ ಟು ಹೆಡ್ ಬೆಟ್ಟಿಂಗ್ ಅಂದರೆ ತಮ್ಮ ತಂಡ ಗೆದ್ದರೆ ಎದುರಾಳಿ ಇಂತಿಷ್ಟು ಹಣ ನಿಡಬೇಕು ಎಂದು, ಮೊದಲೇ ಒಪ್ಪಂದ ಮಾಡಿಕೊಂಡು ಆಡುವುದು. ಅಂತಿಮವಾಗಿ ಗೆದ್ದವನಿಗೆ ಹಣ ಸಿಗುತ್ತದೆ. ಆ್ಯಪ್ ಆಧಾರಿತ ಬೆಟ್ಟಿಂಗ್ ಮೊದಲೇ ಇಂತಿಷ್ಟು ಹಣ ಪಾವತಿಸಿದ್ರೆ ಗೆದ್ದವನಿಗೆ ರ್ಯಾಕಿಂಗ್ ಆಧಾರದದಲ್ಲಿ ಇಷ್ಟು ಹಣ ಎಂದು ನಿಗದಿಯಾಗಿರುತ್ತದೆ. ಆಟಗಾರರ ಪ್ರದರ್ಶನದ ಆಧಾರದಲ್ಲಿ ಪಾಯಿಂಟ್ಸ್ಗಳನ್ನಿಳಿಸುವ ಮೂಲಕ ರ್ಯಾಕಿಂಗ್ ಪ್ರಕಾರ ಹಣ ಗಳಿಸುವುದು. ಇದಕ್ಕಾಗಿ ಅನೇಕ ಆ್ಯಪ್ಗಳು ಚಾಲ್ತಿಯಲ್ಲಿದ್ದು, ಕೆಲವು ಗಂಟೆಗಳಲ್ಲಿ ಮುಗಿಯುವ ಒಂದೊಂದು ಪಂದ್ಯಕ್ಕೆ ಕೋಟ್ಯಂತರ ರೂ. ವ್ಯವಹಾರ ನಡೆಯುತ್ತದೆ.