ಬೆಂಗಳೂರು : ಸಾಮೂಹಿಕ ಅತ್ಯಾಚಾರ ಪ್ರಕರಣ ಕೃತ್ಯದಲ್ಲಿ ಭಾಗಿಯಾಗಿದ್ದ ದಂಪತಿ ಸೇರಿ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ನಗರ ಪೂರ್ವ ವಿಭಾಗದ ಪೊಲೀಸರು ಶೋಧ ಕಾರ್ಯ ಚುರುಕುಗೊಳಿಸಿದ್ದಾರೆ.
ಪ್ರಕರಣದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಆರು ಮಂದಿ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಕೃತ್ಯದಲ್ಲಿ ದಂಪತಿ ಹಾಗೂ ಯುವಕ ಸೇರಿದಂತೆ ಮೂವರು ಭಾಗಿಯಾಗಿದ್ದರು ಎಂದು ಆರೋಪಿಗಳು ಬಾಯ್ಬಿಟ್ಟ ಹಿನ್ನೆಲೆ ಟವರ್ ಲೊಕೇಶನ್ ಆಧಾರದ ಮೇಲೆ ಪೊಲೀಸ್ ವಿಶೇಷ ತಂಡ ತಮಿಳುನಾಡಿನ ಚೆನ್ನೈಗೆ ಧಾವಿಸಿದೆ.
ಪರಾರಿಯಾಗಿರುವ ಈ ಮೂವರು ಬಾಂಗ್ಲಾದೇಶದ ಪ್ರಜೆಗಳಾಗಿದ್ದು, ಅಕ್ರಮವಾಗಿ ಭಾರತಕ್ಕೆ ನುಸುಳಿ ನಗರದಲ್ಲಿ ವಾಸ್ತವ್ಯ ಹೂಡಿದ್ದರು. ಘಟನೆ ನಡೆದ ದಿನದಂದು ಕೃತ್ಯಕ್ಕೆ ಪ್ರಚೋದನೆ ನೀಡಿದ್ದರು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮೂವರು ಚೈನ್ನೈಗೆ ಪರಾರಿಯಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು ಹುಡುಕಾಟ ನಡೆಸುತ್ತಿದ್ದಾರೆ.
ಸಂತ್ರಸ್ತೆ ಹೇಳಿಕೆ ದಾಖಲಿಸಿಕೊಂಡಿರುವ ತನಿಖಾಧಿಕಾರಿಗಳು ಸದ್ಯ ಸೆಕ್ಷನ್ 164ರಡಿ ಕೇಸ್ ದಾಖಲಿಸಿಕೊಂಡಿದ್ದು, ಕೋರ್ಟ್ಗೆ ದಾಖಲಿಸಲು ಸಿದ್ದತೆ ನಡೆಸುತ್ತಿದ್ದಾರೆ. ಅನುಮತಿ ಸಿಕ್ಕ ಕೂಡಲೇ ಹಾಜರುಪಡಿಸಿ ಹೇಳಿಕೆ ದಾಖಲಿಸಿಕೊಳ್ಳಲಿದ್ದಾರೆ. ಸದ್ಯ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿಚಾರಣೆ ನಡೆಯುತ್ತಿದೆ.
ಓದಿ:ಬಾಂಗ್ಲಾ ಯುವತಿ ಮೇಲೆ ಅತ್ಯಾಚಾರ ಪ್ರಕರಣ: ವಲಸಿಗರ ಆಧಾರ್ ಕಾರ್ಡ್ ಮೂಲದ ತನಿಖೆ