ಬೆಂಗಳೂರು: ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಹಾಗೂ ವಸಿಷ್ಠ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ವಂಚನೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿ ರಾಜ್ಯ ಸರ್ಕಾರ ಆದೇಶ ಮಾಡಿದೆ. ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಅಕ್ರಮದ ಕುರಿತು ಸಿಬಿಐ ತನಿಖೆಗೆ ವಹಿಸುವ ಬಗ್ಗೆ ಸಹಕಾರ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಸದ್ಯ ರಾಜ್ಯ ಸರ್ಕಾರ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಹಾಗೂ ವಸಿಷ್ಠ ಕೋ-ಆಪರೇಟಿವ್ ಸೊಸೈಟಿ ಹಗರಣವನ್ನು ಸಿಬಿಐ ತನಿಖೆಗೆ ವಹಿಸಲಾಗಿದೆ.
ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್ ಪ್ರಕರಣ: ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಮತ್ತು ಅದರ ಅಂಗ ಸಂಸ್ಥೆ ಕೋ-ಅಪರೇಟಿವ್ ಸೊಸೈಟಿ ಠೇವಣಿದಾರರ ಹಣವನ್ನು ಖಾತರಿ ಇಲ್ಲದ ಅನುಮಾನಾಸ್ಪದ ವ್ಯಕ್ತಿಗಳಿಗೆ, ನಕಲಿ ಖಾತೆದಾರರಿಗೆ ಸಾಲ ನೀಡಿತ್ತು. ಈ ಅವ್ಯವಹಾರದಲ್ಲಿ ಬ್ಯಾಂಕ್ ಮತ್ತು ಕ್ರೆಡಿಟ್ ಸೊಸೈಟಿಯ ಪದಾಧಿಕಾರಿಗಳು ಶಾಮೀಲಾಗಿದ್ದಾರೆ ಎಂಬ ಆರೋಪವಿದೆ.
1,500 ಕೋಟಿ ರೂ. ಅಕ್ರಮದ ಆರೋಪ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಮೇಲಿದೆ. ಸುಮಾರು 38,000 ಗ್ರಾಹಕರನ್ನ ಹೊಂದಿದ್ದ ಗುರು ರಾಘವೇಂದ್ರ ಬ್ಯಾಂಕ್ ಒಂದೇ ದಿನದಲ್ಲಿ 90 ಖಾತೆಗಳಿಗೆ 60 ಕೋಟಿ ರೂ. ಮೌಲ್ಯದ ಸಾಲಗಳನ್ನು ಬಿಡುಗಡೆ ಮಾಡಿರುವುದು ಆಡಿಟ್ ವೇಳೆ ಪತ್ತೆಯಾಗಿತ್ತು. ಹಗರಣ ಬೆಳಕಿಗೆ ಬಂದ ಬಳಿಕ ಹಣ ಬಾರದೇ ಕಂಗಾಲಾಗಿರುವ ಠೇವಣಿದಾರರು ಪೊಲೀಸರಿಗೆ ದೂರು ನೀಡಿದ್ದರು.