ಬೆಂಗಳೂರು :ಇನ್ಸ್ಪೆಕ್ಟರ್ವೊಬ್ಬರುತಮ್ಮ ಠಾಣೆ ವ್ಯಾಪ್ತಿಯಲ್ಲಿ ಅಪರಾಧ ಕೃತ್ಯ ನಡೆಯದಿದ್ದರೂ ನಡೆದಿದೆ ಎಂದು ಬಿಂಬಿಸಿ, ಸುಳ್ಳು ಕೇಸ್ ದಾಖಲಿಸಿದ ಆರೋಪ ಇರುವ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವರ್ಗಾಯಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಮಾಹಿತಿ ನೀಡಿದ್ದಾರೆ. ಬ್ಯಾಟರಾಯನಪುರ ಉಪವಿಭಾಗದ ಎಸಿಪಿ ಭರತ್ ರೆಡ್ಡಿ ನೀಡಿದ್ದ ದೂರಿನ ಅನ್ವಯ ಇನ್‌ಸ್ಪೆಕ್ಟರ್ ಜಿ ಕೆ ಶಂಕರ್ ನಾಯಕ್ ಹಾಗೂ ಇತರರ ವಿರುದ್ಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.
ಸುಳ್ಳು ಪ್ರಕರಣ ಸೃಷ್ಟಿಸಿ ಹಣ ದೋಚಲು ಸಂಚು ರೂಪಿಸಿದ್ದ ಹಾಗೂ ಲಂಚಕ್ಕೆ ಬೇಡಿಕೆ ಇರಿಸಿದ್ದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಪ್ರಕರಣದ ತನಿಖೆಯನ್ನು ಎಸಿಪಿ ಮಟ್ಟದ ಅಧಿಕಾರಿ ನಡೆಸಬೇಕಿರುವುದು ಹಾಗೂ ಎಸಿಪಿಯೇ ದೂರುದಾರ ಆಗಿರುವುದರಿಂದ ಪ್ರಕರಣದ ತನಿಖೆಯ ಹೊಣೆಯನ್ನು ಸಿಸಿಬಿಗೆ ವಹಿಸಲಾಗಿದೆ ಎಂದು ಬಿ.ದಯಾನಂದ್ ತಿಳಿಸಿದ್ದಾರೆ.
2022ರ ಸೆಪ್ಟೆಂಬರ್‌ನಲ್ಲಿ ಉದ್ಯಮಿ ಹರೀಶ್ ಅವರಿಗೆ ಸೇರಿದ್ದ 75 ಲಕ್ಷ ರೂ. ಹಣವನ್ನು ಅವರ ಚಾಲಕ ಸಂತೋಷ್ ಕದ್ದೊಯ್ದಿದ್ದ. ಈ ಬಗ್ಗೆ ದೂರು ದಾಖಲಾಗಿತ್ತು. ಆದರೆ, ಹೊಸಕೋಟೆ ವ್ಯಾಪ್ತಿಯಲ್ಲಿ ಕೃತ್ಯ ನಡೆದಿದ್ದರೂ ಸಹ ಬ್ಯಾಟರಾಯನಪುರ ವ್ಯಾಪ್ತಿಯಲ್ಲಿಯೇ ಕಳ್ಳತನ ನಡೆದಿರುವುದಾಗಿ ಇನ್ಸ್ಪೆಕ್ಟರ್ ಶಂಕರ್ ನಾಯಕ್ ಸುಳ್ಳು ಪ್ರಕರಣ ಸೃಷ್ಟಿಸಿದ್ದಾರೆ. ಅಲ್ಲದೇ, ತಾನೇ ಸಿದ್ಧಪಡಿಸಿದ್ದ ದೂರಿಗೆ ಮೂರನೇ ವ್ಯಕ್ತಿಯಿಂದ ನಕಲಿ ಸಹಿ ಪಡೆದು ಎಫ್‌ಐಆರ್ ದಾಖಲಿಸಿಕೊಂಡು, ಆರೋಪಿ ಪತ್ತೆ ಮಾಡಿ 72 ಲಕ್ಷ ರೂ. ಜಪ್ತಿ ಮಾಡಿದ್ದರು ಎಂದು ಎಸಿಪಿ ದೂರಿನಲ್ಲಿ ಉಲ್ಲೇಖಿಸಿದ್ದರು.