ಕರ್ನಾಟಕ

karnataka

ETV Bharat / state

ವಿದ್ಯಾ ವಿಕಾಸ ಯೋಜನೆಯಡಿ ಕಳಪೆ ಸಮವಸ್ತ್ರ ಪೂರೈಕೆ: ಸಂಬಂಧಪಟ್ಟ ಇಲಾಖಾ ತನಿಖೆ ನಡೆಸಲು ಸಂಪುಟ ಸಭೆ ತೀರ್ಮಾನ - ಈಟಿವಿ ಭಾರತ್​ ಕನ್ನಡ ನ್ಯೂಸ್​

ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಸಚಿವ ಹೆಚ್.ಕೆ‌.ಪಾಟೀಲ್ ಸಭೆಯಲ್ಲಿ ಚರ್ಚೆಸಿದ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.

ಸಚಿವ ಹೆಚ್.ಕೆ‌.ಪಾಟೀಲ್
ಸಚಿವ ಹೆಚ್.ಕೆ‌.ಪಾಟೀಲ್

By ETV Bharat Karnataka Team

Published : Sep 7, 2023, 8:42 PM IST

ಬೆಂಗಳೂರು : ವಿದ್ಯಾ ವಿಕಾಸ ಯೋಜನೆಯಲ್ಲಿ ವಿದ್ಯಾರ್ಥಿಗಳಿಗೆ ಕೇಂದ್ರೀಯ ಭಂಡಾರದಿಂದ ಕಳಪೆ ಸಮವಸ್ತ್ರ ಪೂರೈಕೆ ಮಾಡಲಾಗಿದ್ದು, ಈ ಬಗ್ಗೆ ಇಲಾಖಾ ತನಿಖೆ ನಡೆಸಲು ಸಂಪುಟ ಸಭೆ ನಿರ್ಧರಿಸಿದೆ ಎಂದು ಕಾನೂನು ಸಚಿವ ಸಚಿವ ಹೆಚ್.ಕೆ‌.ಪಾಟೀಲ್ ತಿಳಿಸಿದರು.

ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಅವರು, 2020-21, 2021-2022 ಸಾಲಿನಲ್ಲಿ ವಿದ್ಯಾ ವಿಕಾಸ ಯೋಜನೆಯಡಿ ಒಂದರಿಂದ 10ನೇ ತರಗತಿವರೆಗಿನ ಗಂಡು ಮಕ್ಕಳಿಗೆ ಮತ್ತು ಒಂದರಿಂದ ಏಳನೇ ತರಗತಿವರೆಗಿನ ಹೆಣ್ಣು ಮಕ್ಕಳಿಗೆ ಸಮವಸ್ತ್ರ, ಎಂಟರಿಂದ 10ನೇ ತರಗತಿವರೆಗಿನ ಹೆಣ್ಣು ಮಕ್ಕಳಿಗೆ ಚೂಡಿದಾರ್‌ ಸೇರಿ ಎರಡು ಜೊತೆ ಸಮವಸ್ತ್ರಕ್ಕೆ ಒಟ್ಟು 1.34 ಕೋಟಿ ಮೀಟರ್‌ ಬಟ್ಟೆ‌ ಪೂರೈಸಲು ಸಾರ್ವಜನಿಕ ಶಿಕ್ಷಣ ಇಲಾಖೆಯು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ ಕಾರ್ಯಾದೇಶ ನೀಡಿತ್ತು.

ಆದರೆ, ನಿಗಮ ಪೂರೈಸಿದ ಬಟ್ಟೆಯು ಕಳಪೆ ಗುಣಮಟ್ಟದ್ದು ಎಂದು 2023ರ ಫೆ. 21ರಂದು ಕೇಂದ್ರ ರೇಷ್ಮೆ ಮಂಡಳಿ ವರದಿ ನೀಡಿತ್ತು. ಒಟ್ಟು144 ಕೋಟಿ ರೂ. ಮೊತ್ತದ ಕಾರ್ಯಾದೇಶ ನೀಡಲಾಗಿತ್ತು. ಈ ಪೈಕಿ 117 ಕೋಟಿ ರೂ.‌ ಪಾವತಿಸಲಾಗಿದೆ. ಈ ಪೈಕಿ ಗುಣಮಟ್ಟ ವಿಚಲನೆ ಮೌಲ್ಯ 54.8 ಕೋಟಿ ರೂ. ಆಗಿದ್ದು, 26 ಕೋಟಿ ರೂ‌.ವನ್ನು ತಡೆ ಹಿಡಿಯಲಾಗಿದೆ ಎಂದು ವಿವರಿಸಿದರು.

ಕೆಹೆಚ್​ಡಿಸಿ ನೋಂದಾಯಿತ ಕೈ ಮಗ್ಗ ನೇಕಾರರಿಂದ ಖರೀದಿಸಿದ ಸಮವಸ್ತ್ರಕ್ಕೆ ಹಣ ಪಾವತಿ ಮಾಡಿಲ್ಲ. ಈ ನಿಟ್ಟಿನಲ್ಲಿ ಅಗತ್ಯ ಹಣ 14.48 ಕೋಟಿ ರೂ. ಬಿಡುಗಡೆಗೆ ಸಂಪುಟ ಸಭೆಯಲ್ಲಿ ಸಮ್ಮತಿ ಸೂಚಿಸಲಾಗಿದೆ. ಪೂರೈಕೆ ಮಾಡಲಾದ 90% ಸಮವಸ್ತ್ರ ಕಳಪೆ ಇತ್ತು. ಕಳಪೆ ಸಮವಸ್ತ್ರ ಪೂರೈಕೆ ಮಾಡಿದವರಿಗೆ 100% ಹಣ ಪಾವತಿಯಾಗಿದೆ. ಈ ಅವ್ಯವಹಾರದ ಬಗ್ಗೆ ಇಲಾಖಾ ತನಿಖೆ ನಡೆಸಲು ತೀರ್ಮಾನಿಸಲಾಗಿದೆ. ಕೇಂದ್ರಿಯ ಬಂಡಾರ ಮೂಲಕ ಕಳಪೆ ಬಟ್ಟೆ ಪೂರೈಕೆಯಾಗಿದೆ ಎಂದು ಹೆಚ್​.ಕೆ ಪಾಟೀಲ್​ ಹೇಳಿದರು.

ಬರ ತಾಲೂಕು ಘೋಷಣೆ : ಬರ ತಾಲೂಕುಗಳ ಘೋಷಣೆಯ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಬರ ತಾಲೂಕು ಘೋಷಣೆ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಗಿದೆ. ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರ ಬರ ಘೋಷಣೆಗೆ ವಿಧಿಸಿರುವ ಮಾನದಂಡವನ್ನು ಸಡಿಲಿಸಲು ಪತ್ರ ಬರೆದಿದ್ದಾರೆ. ಬರ ಪರಿಸ್ಥಿತಿ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಗಿದೆ‌. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಬರ ಸಂಬಂಧ ಬೆಳೆ ಸಮೀಕ್ಷೆ ವರದಿ ಬಂದ ಬಳಿಕ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲು ನಿರ್ಧರಿಸಲಾಗುವುದು ಎಂದರು.

ಶಕ್ತಿ ಯೋಜನೆ ಸ್ಮಾರ್ಟ್ ಕಾರ್ಡ್​ಗೆ ಸೇವಾ ಶುಲ್ಕ ನಿಗದಿ :ಶಕ್ತಿ ಯೋಜನೆ ಸ್ಮಾರ್ಟ್ ಕಾರ್ಡ್ ಮಾಡಲು ಫಲಾನುಭವಿಗಳಿಗೆ 14.16 ರೂ. ಸೇವಾ ಶುಲ್ಕ ನಿಗದಿಗೊಳಿಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಜೊತೆಗೆ ಸ್ಮಾರ್ಟ್ ಕಾರ್ಡ್ ಮಾಡುವ ಅವಧಿಯನ್ನು ಆರು ತಿಂಗಳಿಗೆ ವಿಸ್ತರಿಸಲು ತೀರ್ಮಾನಿಸಿದೆ. ಈ ಮುಂಚೆ ಸ್ಮಾರ್ಟ್ ಕಾರ್ಡ್ ಮಾಡಲು ಮೂರು ತಿಂಗಳ ಗಡುವು ನೀಡಲಾಗಿತ್ತು ಎಂದು ಸಚಿವರು ಮಾಹಿತಿ ನೀಡಿದರು.

ಕಾವೇರಿ ವಿವಾದದ ಬಗ್ಗೆ ಚರ್ಚೆ : ಕಾವೇರಿ ವಿಚಾರದಲ್ಲಿ ರೈತರ ರಕ್ಷಣೆ ಕಾಪಾಡಲು ಏನು ಮಾಡಬಹುದು ಎಂಬ ಬಗ್ಗೆ ಜಲಸಂಪನ್ಮೂಲ ಸಚಿವರು ಸಚಿವ ಸಂಪುಟ ಸಭೆಯಲ್ಲಿ ವಿವರಣೆ ನೀಡಿದ್ದಾರೆ. ಕಾವೇರಿ ಬೇಸಿನ್​ನಲ್ಲಿ ಮಳೆಯಾಗುವ ನಿರೀಕ್ಷೆ ಇದೆ. ರೈತರ ಹಿತರಕ್ಷಣೆಗಾಗಿ ಏನೇನು ಮಾಡಬೇಕು ಎಂಬ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ನುಡಿದರು.

ಸಚಿವ ಸಂಪುಟದ ಇತರ ತೀರ್ಮಾನಗಳೇನು? :

  • ಉಗ್ರಾಣಗಳ ನಿರ್ಮಾಣಕ್ಕಾಗಿ ವಿವಿಧ ಯೋಜನೆಗಳಿಗೆ ನಬಾರ್ಡ್ ಸಂಸ್ಥೆಯಿಂದ ಸಾಲ‌ ಪಡೆಯಲಾಗಿದ್ದು, ಸಾಲ ಮರುಪಾವತಿಗಾಗಿ 13 ಕೋಟಿ ರೂ. ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿದ್ದು, ಅದಕ್ಕೆ ಘಟನೋತ್ತರ ಅನುಮೋದನೆ
  • ಕೆಪಿಎಸ್‌ಸಿಯ ಎರಡು ಖಾಲಿ ಸ್ಥಾನಗಳ ಭರ್ತಿಗೆ ಅನುಮೋದನೆ. ಸದಸ್ಯ ಸ್ಥಾನ ಭರ್ತಿಗೆ ಸಿಎಂಗೆ ಅಧಿಕಾರ
  • 5ನೇ ರಾಜ್ಯ ಹಣಕಾಸು ಆಯೋಗ ರಚನೆಗೆ ಅಸ್ತು. ಆಯೋಗ ಅಧ್ಯಕ್ಷ ಹಾಗೂ ಇಬ್ಬರು ಸದಸ್ಯರನ್ನು ‌ನೇಮಕ‌ ಮಾಡಲು ಸಿಎಂಗೆ ಅಧಿಕಾರ
  • ಮಂಡ್ಯ, ಕೊಪ್ಪಳ, ಕಲಬುರಗಿ ವೈದ್ಯಕೀಯ ಕಾಲೇಜುಗಳ ಕಾಮಗಾರಿ ಗಳಿಗೆ ಹೆಚ್ಚುವರಿ ಮೊತ್ತಕ್ಕೆ ಅನುಮೋದನೆ. ಮಂಡ್ಯದಲ್ಲಿ ಟರ್ಷರಿ ಚಿಕಿತ್ಸೆಗಾಗಿ 17 ಕೋಟಿ ರೂ.‌ಪರಿಷ್ಕೃತ ವೆಚ್ಚಕ್ಕೆ ಆಡಳಿತಾತ್ಮಕ ಅನುಮೋದನೆ. ಕಲಬುರಗಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿಗಾಗಿ 162.80 ಕೋಟಿ ರೂ. ಪರಿಷ್ಕೃತ ವೆಚ್ಚಕ್ಕೆ ಅನುಮೋದನೆ. ಇನ್ನು ಕೊಪ್ಪಳದಲ್ಲಿ ಹಾಸ್ಟೆಲ್ ಕಟ್ಟಡ ನಿರ್ಮಾಣಕ್ಕಾಗಿ 29.76 ಕೋಟಿ ರೂ. ಪರಿಷ್ಕೃತ ವೆಚ್ಚಕ್ಕೆ ಅಸ್ತು.
  • ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ವಿಧೇಯಕ ತಿದ್ದುಪಡಿ ಅನುಮೋದನೆ. ಮಲೆನಾಡು ಭಾಗದಲ್ಲಿ 35,000 ಜನಸಂಖ್ಯೆ ಇರುವ ಪ್ರದೇಶವನ್ನು ಜಿಲ್ಲಾ ಪಂಚಾಯತ್ ಸದಸ್ಯ ಕ್ಷೇತ್ರವನ್ನಾಗಿ ಮಾಡಲಾಗುತ್ತದೆ. ಆದರೆ ಕೊಡಗು, ಚಿಕ್ಕಮಗಳೂರು ಮತ್ತು ಶಿವಮೊಗ್ಗದ ಕೆಲ ಪ್ರದೇಶಗಳಲ್ಲಿ ಜನಸಂಖ್ಯೆ ಕಡಿಮೆ ಇದೆ. ಹೀಗಾಗಿ ಕೊಡಗು ಹಾಗು ಚಿಕ್ಕಮಗಳೂರಿನ ತರೀಕೆರೆ, ಕಡೂರು ಹೊರತುಪಡಿಸಿ, ಶಿವಮೊಗ್ಗದಲ್ಲಿ ಭದ್ರಾವತಿ, ಶಿಕಾರಿಪುರ ಹೊರತು ಪಡಿಸಿ ತೀರ್ಥಹಳ್ಳಿ, ಸಾಗರ, ಹೊಸನಗರ, ಸೊರಬವನ್ನು 18,000-28,000 ಜನಸಂಖ್ಯೆಗೆ ಒಬ್ಬ ಜಿ.ಪಂ ಸದಸ್ಯ ಕ್ಷೇತ್ರವನ್ನಾಗಿ ರಚಿಸಲು ತಿದ್ದುಪಡಿ ಮಾಡಲಾಗಿದೆ.
  • ಜೆಒಸಿಯ ಉಪನ್ಯಾಸಕರ ಬಿಇಡಿ ಶಿಕ್ಷಣಕ್ಕೆ ಅನುಮತಿ.‌ ಬಿಇಡಿ ಪದವಿ ವ್ಯಾಸಂಗ ಮಾಡಲು ಪರವಾನಗಿ ನೀಡಲು ಒಪ್ಪಿಗೆ ನೀಡಲಾಗಿದ್ದು, 162 ಉಪನ್ಯಾಸಕರು ಬಿಇಡಿ ಮಾಡಲಿದ್ದಾರೆ.
  • ಕೆಎಸ್‌ಆರ್‌ಟಿಸಿಯಲ್ಲಿ 100 ಕೋಟಿ ರೂ. ವೆಚ್ಚದಲ್ಲಿ 250 ಹೊಸ ಬಸ್, ವಾಯುವ್ಯ ಸಾರಿಗೆಯಲ್ಲಿ 150 ಕೋಟಿ ರೂ. ವೆಚ್ಚದಲ್ಲಿ 375 ಹೊಸ ಬಸ್, ಬಿಎಂಟಿಸಿ ಯಲ್ಲಿ 150 ಕೋಟಿ ರೂ. ವೆಚ್ಚದಲ್ಲಿ ಎಸಿ ಎಲೆಕ್ಟ್ರಿಕ್ ಬಸ್ ಗಳನ್ನು ಜಿಸಿಸಿ ಆಧಾರದಲ್ಲಿ ಕಾರ್ಯಾಚರಣೆಗೆ ಅನುಮತಿ. ಕಲ್ಯಾಣ ಕರ್ನಾಟಕ ಸಾರಿಗೆಯಲ್ಲಿ 100 ಕೋಟಿ ರೂ. ವೆಚ್ಚದಲ್ಲಿ 250 ಹೊಸ ಬಸ್ ಖರೀದಿಗೆ ಅನುಮತಿ.
  • ಸಹಕಾರ ಇಲಾಖೆಯ ಲೆಕ್ಕ ಪರಿಶೋಧನೆ ಇಲಾಖೆಯನ್ನು ರಾಜ್ಯ ಸರ್ಕಾರದ ಲೆಕ್ಕಪರಿಶೋಧ‌ನೆ ಇಲಾಖೆಯ ಜೊತೆ ವಿಲೀನ ಮಾಡಲು ಆರನೇ ವೇತನ ಆಯೋಗ ಶಿಫಾರಸು ಮಾಡಿತ್ತು. ಅದಕ್ಕೆ ತಾತ್ವಿಕ ಅನುಮೋದನೆ ನೀಡಲಾಗಿತ್ತು. ಆದರೆ ಯಾವುದೇ ಆದೇಶ ಹೊರಡಿಸಿರಲಿಲ್ಲ. ಸಹಕಾರ ಇಲಾಖೆಯ ಲೆಕ್ಕ ಪರಿಶೋಧನೆ ಇಲಾಖೆ 13,000 ಸಹಕಾರ ಸಂಸ್ಥೆಗಳನ್ನು ಲೆಕ್ಕಪರಿಶೋಧನೆ ಮಾಡಿದೆ. ಆರನೇ ವೇತನ ಆಯೋಗದ ಶಿಫಾರಸಿನಂತೆ ವಿಲೀನ ಮಾಡದಿರಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ.
  • ಕೋರಮಂಗಲ ಒಳ ವರ್ತುಲ ರಸ್ತೆಯಲ್ಲಿನ ಎಲೆವೇಟೆಡ್ ಕಾರಿಡಾರ್ ನಿರ್ಮಾಣಕ್ಕಾಗಿನ‌ ಪರಿಷ್ಕೃತ 307.96 ಕೋಟಿ ರೂ. ವೆಚ್ಚಕ್ಕೆ ಆಡಳಿತಾತ್ಮಕ ಅನುಮೋದನೆ.
  • ಸ್ಥಳೀಯ ಸಂಸ್ಥೆಯ ಮೀಸಲಾತಿ ಬಗ್ಗೆ ನ್ಯಾ. ಭಕ್ತವತ್ಸಲ ಸಮಿತಿ ಶಿಫಾರಸು ಮಾಡುವ ಬಗ್ಗೆ ಇನ್ನಷ್ಟು ಚರ್ಚೆ ನಡೆಸಬೇಕಾಗಿದ್ದು, ತೀರ್ಮಾನವನ್ನು ಮುಂದಿನ ಸಚಿವ ಸಂಪುಟ ಸಭೆಗೆ ಮುಂದೂಡಲಾಗಿದೆ.

ಇದನ್ನೂ ಓದಿ :ದೌರ್ಜನ್ಯ ನಡೆದು 120 ದಿನ ಕಳೆದರೂ ಆರೋಪ ಪಟ್ಟಿ ಏಕೆ ದಾಖಲಾಗಿಲ್ಲ: ಅಧಿಕಾರಿಗಳನ್ನು ಪ್ರಶ್ನಿಸಿದ ಸಿಎಂ ಸಿದ್ದರಾಮಯ್ಯ

ABOUT THE AUTHOR

...view details