ಬೆಂಗಳೂರು: ಅಕ್ರಮ ಗಣಿಗಾರಿಕೆ ವಿರುದ್ಧ ಸೂಕ್ತ ತನಿಖೆ ನಡೆಯುತ್ತಿದೆ. ಇಲ್ಲಿ ಭ್ರಷ್ಟಾಚಾರ ಇದೆ. ಇದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.
ನಿಯಮ 68ರ ಅಡಿ ವಿಧಾನ ಪರಿಷತ್ನಲ್ಲಿ ಚಿಕ್ಕಬಳ್ಳಾಪುರ ಭಾಗದ ಅಕ್ರಮ ಗಣಿಗಾರಿಕೆ ಕುರಿತ ಚರ್ಚೆಗೆ ಉತ್ತರಿಸಿದ ಅವರು, ಶೇ. 40ರಷ್ಟು ಅಧಿಕಾರಿ, ಸಿಬ್ಬಂದಿ ಕೊರತೆಯಿದೆ. ಇದನ್ನು ತುಂಬಿಕೊಳ್ಳಬೇಕು. ಗಣಿಗಾರಿಕೆ ಅಕ್ರಮದಲ್ಲಿ ತೊಡಗಿದವರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದೇವೆ. ಎಷ್ಟೇ ಪ್ರಭಾವಿಗಳು ಇದರ ಹಿಂದಿದ್ದರೂ ಅಂತವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದರು.
ಸುಧಾರಣೆ ಸವಾಲಿನದ್ದಾಗಿದೆ. ಆದರೂ ಪ್ರಯತ್ನ ಮುಂದುವರೆಸಿದ್ದೇವೆ. ವಿವಿಧ ಇಲಾಖೆಯ ಪರವಾನಗಿ ಬೇಕು. ಎಲ್ಲರ ನಿರಪೇಕ್ಷಣಾ ಪತ್ರ ಸಿಗಬೇಕಿದೆ. ಇದಕ್ಕೆ ಕಾಲಾವಕಾಶ ಹಿಡಿಯಲಿದೆ. ಇದಕ್ಕಾಗಿ ಹೊಸ ಕೈಗಾರಿಕಾ ನೀತಿ ತರುತ್ತಿದ್ದೇವೆ. ಸರಳೀಕರಣ ಹಾಗೂ ಸುಗಮ ಆಗಿರಬೇಕು. ಸರ್ಕಾರಕ್ಕೆ ಆದಾಯ ಬರಬೇಕು. ಕಾಯ್ದೆ ಅಂತಿಮ ಆಗುವ ಮುನ್ನ ಪ್ರತಿಪಕ್ಷ ನಾಯಕರೂ ಸೇರಿದಂತೆ ಎಲ್ಲರಿಗೂ ಕರಡು ಪ್ರತಿ ಕಳಿಸುತ್ತೇನೆ. ಬದಲಾವಣೆಗೆ ಸೂಚನೆ ಸಿಕ್ಕರೆ ಮಾಡುತ್ತೇವೆ ಎಂದು ಸಚಿವರು ತಿಳಿಸಿದರು.
ವಿವಿಧ ಸರಳೀಕೃತ ಕ್ರಮ ಕೈಗೊಳ್ಳುತ್ತೇವೆ. ಕಡಿಮೆ ಸ್ಥಳಾವಕಾಶದಲ್ಲಿ ಗಣಿಗಾರಿಕೆ ಮಾಡುವವರಿಗೆ ಸ್ಕೂಲ್ ಆಫ್ ಮೈನಿಂಗ್ ಆರಂಭಿಸಿ ತರಬೇತಿ ನೀಡುತ್ತೇವೆ. ಗಣಿಗಾರಿಕೆ ಅಕಾಡೆಮಿ ಸ್ಥಾಪಿಸುವ ಗುರಿ ನಮ್ಮದು. ಹಂತ ಹಂತವಾಗಿ ಮಾಡುತ್ತೇವೆ. ಗಣಿಗಾರಿಕೆ ಮಾಡುವವರು 5-10 ಕೋಟಿ ಹಣ ಹೂಡಿ ಗಣಿಗಾರಿಕೆ ಆರಂಭಿಸಿದ್ದಾರೆ. ಕಳೆದ ಒಂದು ತಿಂಗಳಿಂದ ಕೆಲಸ ನಿಂತಿದೆ. ಅವರಿಗೆ ಸಮಸ್ಯೆಯಾಗುತ್ತಿದೆ. ಲೈಸೆನ್ಸ್ ಪ್ರಕ್ರಿಯೆ ಆನ್ಲೈನ್ ಮೂಲಕ ಮಾಡಿದರೂ ಕಾಲಾವಕಾಶ ಹಿಡಿಯಲಿದೆ. ಆದಾಗ್ಯೂ ಸಾಕಷ್ಟು ತ್ವರಿತವಾಗಿ ಕ್ರಮಕ್ಕೆ ಮುಂದಾಗುತ್ತೇವೆ.