ಬೆಂಗಳೂರು: ಚಿಲುಮೆ ಹಾಗೂ ಬಿಬಿಎಂಪಿ ಆಯುಕ್ತರ ವಿರುದ್ಧ ತನಿಖೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು, ಪ್ರಸ್ತುತವಾಗಿ ಏನು ನಡೆಯುತ್ತಿದೆ ಎಂಬುದು ನನಗೆ ಗೊತ್ತಿಲ್ಲ. ಆದರೆ ನಾವು ವಿಪಕ್ಷದಲ್ಲಿ ಇದ್ದಾಗ ಇಲ್ಲೊಂದು ಏನೋ ನಡೆಯುತ್ತಿದೆ ಎಂದು ಪ್ರಾರಂಭ ಮಾಡಿದ್ದೆವು ಎಂದು ಹೇಳಿದರು.
ತಮ್ಮ ನಿವಾಸದ ಬಳಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸರ್ಕಾರದದಲ್ಲಿ ಮ್ಯಾನುಪುಲೇಟ್ ಮಾಡ್ತಾ ಇದ್ದಾರೆ. ವೋಟರ್ ಲಿಸ್ಟ್ ಮ್ಯಾನುಪುಲೇಟ್ ಮಾಡ್ತಾ ಇದ್ದಾರೆ ಎಂದು ನಾವೇ ಆರೋಪ ಮಾಡಿದ್ದೆವು. ಆದರೆ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅದರಲ್ಲಿ ಭಾಗಿಯಾಗಿದ್ದಾರೆ ಎನ್ನುವ ಮಾಹಿತಿ ನನಗಿಲ್ಲ. ಅದು ತನಿಖೆ ಮಾಡಲು ಇನ್ನೂ ಪೊಲೀಸ್ ಇಲಾಖೆಗೆ ಬಂದಿಲ್ಲ, ಬಂದ ಮೇಲೆ ತನಿಖೆ ಮಾಡ್ತೇವೆ. ಹಾಗಾಗಿ ಸಂಬಂಧ ಪಟ್ಟವರು ವಿಚಾರ ಮಾಡುತ್ತಾರೆ ಎಂದರು.
ಜಾತಿ ಜನಗಣತಿ ಜಾರಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಆದಷ್ಟು ಶೀಘ್ರದಲ್ಲೇ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇನೆ ಎಂದು ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ. ವರದಿ ಬಂದ ಮೇಲೆ ಚರ್ಚೆ ಮಾಡೋಣ. ಯಾವ ಯಾವ ಸಮುದಾಯದ್ದು ಎಷ್ಟಿದೆ ಅನ್ನೋದು ಗೊತ್ತಾಗುತ್ತದೆ. ನಾವು ಮಾಡ್ತೇವೆ ಎಂದು ಹೇಳಿದ್ದೇವೆ. ಬೇಗ ಹೊರಗಡೆ ತನ್ನಿ ಎಂದು ಜಯಪ್ರಕಾಶ್ ಹೆಗ್ಡೆ ಅವರಿಗೆ ತಿಳಿಸಿದ್ದೇವೆ ಎಂದು ಸಚಿವರು ಹೇಳಿದರು.
ಸರ್ಕಾರ ಜವಾಬ್ದಾರಿ ಸಮಿತಿಗೆ ಕೊಟ್ಟಿತ್ತು. ನೂರಕ್ಕೂ ಹೆಚ್ಚು ಕೋಟಿ ಹಣ ಖರ್ಚಾಗಿದೆ. ಇಷ್ಟೆಲ್ಲಾ ಖರ್ಚು ಮಾಡಿ ಸರ್ಕಾರಕ್ಕೆ ವರದಿ ಕೊಡದೆ ಹೋದರೆ ಹಣ ವ್ಯರ್ಥ ಅಲ್ಲವೇ?. ಶಾಶ್ವತ ಮಾಹಿತಿ ಇದ್ದರೆ ಅನುಕೂಲ ಆಗಬಹುದು ಎಂಬ ಉದ್ದೇಶದಿಂದ ಮಾಡಿದ್ದಾರೆ. ಸರ್ಕಾರದ ಹಣ ಪೋಲಾಗಲಿ ಎಂದು ಮಾಡಿಲ್ಲ. ಮುಂದಿನ ದಿನದಲ್ಲಿ ಮೀಸಲಾತಿ ಮಾಡುವ ಸಂದರ್ಭದಲ್ಲಿ ಅನುಕೂಲ. ತಮಿಳುನಾಡಿನಲ್ಲಿ 69% ಮಾಡಿದ್ರು ಬೇರೆ ರಾಜ್ಯದಲ್ಲಿ ಕೂಗು ಕೇಳಿ ಬರುತ್ತಿದೆ. ನಮ್ಮ ರಾಜ್ಯದಲ್ಲಿ ಮೀಸಲಾತಿ ಕೂಗು ಕೇಳಿ ಬಂದಿವೆ. 50% ಇದ್ದ ಮೀಸಲಾತಿ ಹೆಚ್ಚಳ ಮಾಡಿ ಎಂದು ಒತ್ತಾಯಿಸುತ್ತಿದ್ದಾರೆ. ಆದ್ದರಿಂದ ಮಾಹಿತಿ ಬಹಿರಂಗಪಡಿಸಿದ್ರೆ ಅನುಕೂಲ ಆಗಬಹುದು ಎಂದು ಅನಿಸುತ್ತದೆ ಎಂದು ಅಭಿಪ್ರಾಯಪಟ್ಟರು.