ಕರ್ನಾಟಕ

karnataka

ETV Bharat / state

ಸ್ಪೀಕರ್ ನೇತೃತ್ವದಲ್ಲಿ ಆತ್ಮಾವಲೋಕನ ಸಭೆ: ಅಶಿಸ್ತು ಪ್ರದರ್ಶಿಸುವ ಸದಸ್ಯರ ವಿರುದ್ಧ ಕಠಿಣ ಕ್ರಮಕ್ಕೆ ಒಮ್ಮತದ ಅಭಿಪ್ರಾಯ - speaker vishweshwar hegde kageri meeting

ಕುಸಿಯುತ್ತಿರುವ ಸಂಸದೀಯ ಮೌಲ್ಯಗಳನ್ನು ತಡೆಯಲು ಮಾರ್ಗೋಪಾಯಗಳನ್ನು ಹುಡುಕುವ ನಿಟ್ಟಿನಲ್ಲಿ ಕರ್ನಾಟಕ ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ್​ ಹೆಗಡೆ ಕಾಗೇರಿ ಇಂದು ಆತ್ಮಾವಲೋಕನ ಸಭೆ ನಡೆಸಿದರು.

introspection-meeting-by-speaker-vishweshwar-hegde-kageri
ಸ್ಪೀಕರ್ ನೇತೃತ್ವದಲ್ಲಿ ಆತ್ಮಾವಲೋಕನ ಸಭೆ

By

Published : Aug 25, 2021, 10:46 PM IST

ಬೆಂಗಳೂರು:ವಿಧಾನಸಭೆಯಲ್ಲಿ ಗದ್ದಲವನ್ನು ಸೃಷ್ಟಿಸುವ, ಅಸಭ್ಯವಾಗಿ ವರ್ತಿಸುವ ಮತ್ತು ಅಶಿಸ್ತು ಪ್ರದರ್ಶಿಸುವ ಸದಸ್ಯರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಸ್ಪೀಕರ್ ನೇತೃತ್ವದಲ್ಲಿ ನಡೆದ ಆತ್ಮಾವಲೋಕನ‌ ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ನಾಯಕರು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕುಸಿಯುತ್ತಿರುವ ಸಂಸದೀಯ ಮೌಲ್ಯಗಳನ್ನು ತಡೆಯಲು ಮಾರ್ಗೋಪಾಯಗಳನ್ನು ಹುಡುಕುವ ನಿಟ್ಟಿನಲ್ಲಿ ಕರ್ನಾಟಕ ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ್​ ಹೆಗಡೆ ಕಾಗೇರಿ ಇಂದು ಆತ್ಮಾವಲೋಕನ ಸಭೆ ಕರೆದಿದ್ದರು. ಸಂಸದೀಯ ಮೌಲ್ಯವನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ನಡೆದ ಎರಡನೇ ಆತ್ಮಾವಲೋಕನ ಸಭೆ ಇದಾಗಿತ್ತು.

ಈ ಮುನ್ನ ಕಳೆದ ಫೆಬ್ರವರಿಯಲ್ಲಿ ಮೊದಲ ಸಭೆ ನಡೆದಿತ್ತು. ಇಂದಿನ ಆತ್ಮಾವಲೋಕನ ಸಭೆಯಲ್ಲಿ ವಿಧಾನಮಂಡಲ ಅಧಿವೇಶನಕ್ಕೆ ಹಾಜರಾಗುವ ಮುನ್ನ ತಮ್ಮ ಸದಸ್ಯರಿಗೆ ಶಿಸ್ತು, ಉತ್ತಮ ಮತ್ತು ಘನತೆಯ ನಡವಳಿಕೆಯನ್ನು ಬೆಳೆಸುವುದು ರಾಜಕೀಯ ಪಕ್ಷಗಳ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ ಎಂದು ಸರ್ವಾನುಮತದ ಅಭಿಪ್ರಾಯ ವ್ಯಕ್ತಪಡಿಸಲಾಯಿತು.

ಆತ್ಮಾವಲೋಕನ‌ ಸಭೆ

ಸದನದಲ್ಲಿ ಗದ್ದಲ ಸೃಷ್ಟಿಸುವ, ಅಶಿಸ್ತಿನಿಂದ ವರ್ತಿಸುವ ಸದಸ್ಯರನ್ನು ಅಧಿವೇಶನದ ಉಳಿದ ಅವಧಿಗೆ ಬಹಿಷ್ಕರಿಸಬೇಕು. ಅದು ಪ್ರಬಲ ಪ್ರತಿರೋಧವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹಿರಿಯ ನಾಯಕರು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದರು.

ಗೌರವವಿಲ್ಲದ ಮತ್ತು ಸ್ವೀಕಾರಾರ್ಹವಲ್ಲದ ನಡವಳಿಕೆಯು ಶಾಸಕಾಂಗದ ಘನತೆಯನ್ನು ತಗ್ಗಿಸುತ್ತದೆ ಮತ್ತು ಶಾಸಕಾಂಗದ ಪ್ರತಿಷ್ಠೆಯನ್ನು ಹಾಳು ಮಾಡುತ್ತದೆ. ಶಾಸಕಾಂಗದ ಘನತೆಯನ್ನು ಮರುಸ್ಥಾಪಿಸಲು ಬಲವಾದ ಕ್ರಮವನ್ನು ಕೈಗೊಳ್ಳಬೇಕು. ಅಗತ್ಯವಿದ್ದರೆ, ನಿಯಮಗಳಿಗೆ ಸೂಕ್ತ ತಿದ್ದುಪಡಿ ಮಾಡಬೇಕು ಎಂದು ನಾಯಕರು ಅಭಿಪ್ರಾಯಪಟ್ಟರು.

ಇಂದು ನಡೆದ ಆತ್ಮಾವಲೋಕನ ಸಭೆಯಲ್ಲಿ ಮಾಜಿ ಸಭಾಪತಿಗಳಾದ ಡಿ.ಹೆಚ್. ಶಂಕರಮೂರ್ತಿ, ವಿ.ಆರ್. ಸುದರ್ಶನ್, ಮಾಜಿ ಸಭಾಧ್ಯಕ್ಷ ಕೆ.ಜಿ. ಭೋಪಣ್ಣ, ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ, ಎಸ್. ಸುರೇಶ್ ಕುಮಾರ್, ಶಾಸಕ ಎ.ಟಿ. ರಾಮಸ್ವಾಮಿ ಮತ್ತು ಹೆಚ್.ಕೆ. ಕುಮಾರಸ್ವಾಮಿ ಪಾಲ್ಗೊಂಡಿದ್ದರು.

ಇದನ್ನೂ ಓದಿ:ಟಾಲಿವುಡ್​ ಡ್ರಗ್ಸ್​​ ಕೇಸ್​​​: ರಾಣಾ ದಗ್ಗುಬಾಟಿ, ರಾಕುಲ್‌ ಪ್ರೀತ್‌ ಸಿಂಗ್‌ ಸೇರಿ 12 ಸೆಲಿಬ್ರಿಟಿಗಳಿಗೆ ಸಮನ್ಸ್​

ABOUT THE AUTHOR

...view details