ಬೆಂಗಳೂರು: ರಾಜ್ಯದಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಹಿಡಿದಿರುವ ಕಾಂಗ್ರೆಸ್ ಪಕ್ಷದ ಸಚಿವ ಸಂಪುಟ ರಚನೆ ಕಸರತ್ತು ಮುಗಿದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟಕ್ಕೆ 24 ಮಂದಿ ಹೊಸ ಸಚಿವರು ಸೇರ್ಪಡೆಯಾಗಿದ್ದಾರೆ. ಇದರಿಂದ ಸರ್ಕಾರದ ಎಲ್ಲ 34 ಸಚಿವ ಸ್ಥಾನಗಳನ್ನು ಭರ್ತಿ ಮಾಡಿದಂತಾಗಿದೆ. ನೂತನ ಸಚಿವರ ಪರಿಚಯ ಇಲ್ಲಿದೆ.
ಎಚ್.ಕೆ.ಪಾಟೀಲ್:ಹಿರಿಯ ರಾಜಕಾರಣಿ ಹಾಗೂ ಈ ಹಿಂದೆ ಹಲವು ಬಾರಿ ಸಚಿವರಾಗಿದ್ದ ಗದಗ ವಿಧಾನಸಭಾ ಕ್ಷೇತ್ರದಿಂದ ಗೆದ್ದು ಮತ್ತೊಮ್ಮೆ ಎಚ್.ಕೆ.ಪಾಟೀಲ್ ಅವರು ಸಚಿವರಾಗಿದ್ದಾರೆ. ಕಳೆದ 50 ವರ್ಷಗಳಿಂದ ಗದಗ ಕ್ಷೇತ್ರದ ಮೇಲೆ ಹುಲಕೋಟಿಯ ಪಾಟೀಲ್ ಮನೆತನದ ಹಿಡಿತವಿದೆ. ಮಾಜಿ ಸಹಕಾರ ಸಚಿವ ಕೆ.ಎಚ್. ಪಾಟೀಲ್ ಕುಟುಂಬವೇ ಈ ಕ್ಷೇತ್ರದಲ್ಲಿ ರಾಜಕೀಯ ಹಿಡಿತ ಇಟ್ಟುಕೊಂಡಿದ್ದು, ಆಗಿನಿಂದಲೂ ಆ ಕುಟುಂಬ ಸದಸ್ಯರೇ ಆರಿಸಿಬಂದಿದ್ದಾರೆ.
ತಂದೆ ಕೆ.ಎಚ್.ಪಾಟೀಲ್, ತಾಯಿ ಪದ್ಮಾವತಿ ಮಗನಾಗಿ ಆಗಸ್ಟ್ 15, 1953 ರಲ್ಲಿ ಗದಗದಲ್ಲಿ ಎಚ್.ಕೆ.ಪಾಟೀಲ್ ಜನಿಸಿದರು. ಬ್ಯಾಚುಲರ್ ಆಫ್ ಸೈನ್ಸ್ ಹಾಗೂ ಬ್ಯಾಚುಲರ್ ಆಫ್ ಲಾ ಪದವಿಯನ್ನು ಪಡೆದುಕೊಂಡಿದ್ದ ಅವರು, ಪತ್ರಕರ್ತರಾಗಿಯೂ ಕೆಲಸ ಮಾಡಿದ್ದಾರೆ. ಗದಗ ಜಿಲ್ಲೆಯಲ್ಲಿ ಅವರು ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರಾಗಿದ್ದಾರೆ. ಪತ್ನಿ ಹೇಮಾ ಪಾಟೀಲ್, ಇವರಿಗೆ ಒಬ್ಬರು ಪುತ್ರ, ಇಬ್ಬರು ಪುತ್ರಿಯರು.
2013 ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾಗಿ ಕೆಲಸ ಮಾಡಿದ್ದರು.
ಎಚ್.ಕೆ.ಪಾಟೀಲ್ ಪ್ರಮುಖ ಖಾತೆಗಳನ್ನು ನಿರ್ವಹಿಸಿದ್ದು, ಇದರ ಜೊತೆಗೆ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕರಾಗಿ ಕೆಲಸ ಮಾಡಿದ್ದರು. 1984 ರಿಂದ 2008 ರವರೆಗೂ ಪಶ್ಚಿಮ ಪದವಿಧರ ಕ್ಷೇತ್ರದಿಂದ 4 ಬಾರಿ ವಿಧಾನ ಪರಿಷತ್ಗೆ ಆಯ್ಕೆಯಾಗಿದ್ದರು. ಜವಳಿ ಹಾಗೂ ಆಹಾರ ಸಂಸ್ಕರಣೆ, ಜಲಸಂಪನ್ಮೂಲ ಇಲಾಖೆ, ಕೃಷಿ ಇಲಾಖೆ, ಕಾನೂನು ಮಾನವ ಹಕ್ಕು ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. 1994 ರಿಂದ 1998 ಹಾಗೂ 2006 ರಿಂದ 2008 ರವರೆಗೆ ಪ್ರತಿಪಕ್ಷ ನಾಯಕರಾಗಿದ್ದರು.
ಕೃಷ್ಣಬೈರೇಗೌಡ: ಸತತ ಆರು ಬಾರಿ ಗೆಲುವು ಸಾಧಿಸಿರುವ ಕೃಷ್ಣಬೈರೇಗೌಡ ಅವರು ನೂತನ ಸಚಿವ ಸಂಪುಟಕ್ಕೆ ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಬ್ಯಾಟರಾಯನಪುರ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿರುವ ಕೃಷ್ಣಬೈರೇಗೌಡ ಅವರ, ತಂದೆ ಮಾಜಿ ಸಚಿವ ದಿ.ಸಿ.ಬೈರೇಗೌಡ. ತಂದೆ ನಿಧನರಾದ ನಂತರ ಅವರ ಸ್ಥಾನ ತುಂಬಲು ರಾಜಕೀಯಕ್ಕೆ ಎಂಟ್ರಿಕೊಟ್ಟರು. ಕೃಷ್ಣಬೈರೇಗೌಡರು 1973, ಏಪ್ರಿಲ್ 4 ರಂದು ಜನಿಸಿದ್ದು, ನರಸಾಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಓದಿ, ಮುದ್ದೇನಹಳ್ಳಿಯ ಸತ್ಯಸಾಯಿ ಶಾಲೆಯಲ್ಲಿ ಎಸ್ಎಸ್ಎಲ್ಸಿಯನ್ನು ಮುಗಿಸಿದರು.
ಬಳಿಕ ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜ್ನಲ್ಲಿ ಪಿಯುಸಿ ಶಿಕ್ಷಣ ಮುಗಿಸಿ, 1994 ರಲ್ಲಿ ಸ್ನಾತಕ ಪದವಿ ಪಡೆದು ನಂತರ ಅಮೆರಿಕದಲ್ಲಿ ಇಂಟರ್ ನ್ಯಾಷನಲ್ ಆಫೇರ್ಸ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅಮೆರಿಕ ವಾಷಿಂಗ್ಟನ್ ನಲ್ಲಿರುವ ಇಥಿಯೋಪಿಯಾ ರಾಜತಾಂತ್ರಿಕ ಕಚೇರಿಯಲ್ಲಿ ಪ್ರಾಜೆಕ್ಟ್ ಅಸೋಸಿಯೇಟ್ ಆಗಿ ಒಂದು ವರ್ಷ ಕೆಲಸ ಮಾಡಿದರು. ಬಳಿಕ 2000 ದಿಂದ 2002ರ ಮಧ್ಯೆ ಕೋಲಾರದ ವೇಮಗಲ್ ಹೋಬಳಿಯ ತಮ್ಮ ಹಳ್ಳಿಯಲ್ಲಿ ಕೃಷಿಕರಾಗಿಯೂ ಕೆಲಸ ಮಾಡಿದ್ದರು. ರಾಹುಲ್ ಗಾಂಧಿ ಅವರಿಗೆ ಆಪ್ತ ನಾಯಕರಲ್ಲಿ ಕೃಷ್ಣಬೈರೇಗೌಡ ಅವರು ಸಹ ಒಬ್ಬರು. ಕೃಷಿ ಭಾಗ್ಯ, ಜಲಾಮೃತ, ಸ್ವಚ್ಛ ಮೇವ ಜಯತೆ ಕೃತಿಗಳನ್ನು ಕೂಡ ರಚಿಸಿದ್ದಾರೆ.
2003 ರಲ್ಲಿ ತಂದೆ ಬೈರೇಗೌಡರು ನಿಧನರಾದ ಬಳಿಕ ಆ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಜನತಾದಳದಿಂದ ಸ್ಪರ್ಧಿಸಿ ಕೋಲಾರದ ವೇಮಗಲ್ ಕ್ಷೇತ್ರದಿಂದ ಗೆಲುವು ಸಾಧಿಸಿ ಶಾಸಕರಾದರು. 2004 ಜನತಾ ದಳ ತೊರೆದು, ಕಾಂಗ್ರೆಸ್ ಸೇರಿ ಮತ್ತೆ ಪುನರಾಯ್ಕೆಯಾಗಿದ್ದರು. 2008 ರಲ್ಲಿ ಬ್ಯಾಟರಾಯನಪುರ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಕಂಡರು. 2009ರಲ್ಲಿ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಲ್ಲಿ ಅನಂತ್ ಕುಮಾರ್ ವಿರುದ್ಧ ಸ್ಪರ್ಧಿಸಿ ಸೋಲು ಅನುಭವಿಸಿದರು. 2013 ರ ಚುನಾವಣೆಯಲ್ಲಿ ಮತ್ತೆ ಬ್ಯಾಟರಾಯನಪುರ ಕ್ಷೇತ್ರದಿಂದ ಗೆದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಕೃಷಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
2018ರಲ್ಲೂ ಗೆದ್ದು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಸಚಿವ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿ ಕೆಲಸ ಮಾಡಿದ್ದಾರೆ. ಇದೀಗ ಮತ್ತೆ ಬ್ಯಾಟರಾಯನಪುರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.