ಕರ್ನಾಟಕ

karnataka

ETV Bharat / state

ಹಲವು ವಿಧೇಯಕಗಳಿಗೆ ವಿಧಾನ ಪರಿಷತ್​ ಅಂಗೀಕಾರ: ರೇಸ್​ ಕೋರ್ಸ್​ಗಳ ಪರವಾನಗಿ ತಿದ್ದುಪಡಿ ವಿಧೇಯಕ ಮಂಡನೆ - ಕರ್ನಾಟಕ ರೇಸ್ ಕೋರ್ಸ್

ವಿಧಾನ ಪರಿಷತ್ ಬೆಳಗಿನ ಕಲಾಪದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪರವಾಗಿ ಕರ್ನಾಟಕ ರೇಸ್ ಕೋರ್ಸ್​ಗಳಿಗೆ ಪರವಾನಗಿ ನೀಡುವ ತಿದ್ದುಪಡಿ ವಿಧೇಯಕ 2020 ಅನ್ನು ಕಾನೂನು ಸಚಿವ ಜೆ‌.ಸಿ. ಮಾಧುಸ್ವಾಮಿ ಮಂಡನೆ ಮಾಡಿದರು.

Minister JC Madhuswamy
ಕಾನೂನು ಸಚಿವ ಜೆ‌.ಸಿ ಮಾಧುಸ್ವಾಮಿ

By

Published : Sep 23, 2020, 3:44 PM IST

ಬೆಂಗಳೂರು: ಕರ್ನಾಟಕ ರೇಸ್ ಕೋರ್ಸ್​ಗಳಿಗೆ ಪರವಾನಗಿ ನೀಡುವ ತಿದ್ದುಪಡಿ ವಿಧೇಯಕ 2020 ಸೇರಿದಂತೆ ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ 7 ವಿಧೇಯಕಗಳಿಗೆ ವಿಧಾನ ಪರಿಷತ್ ಧ್ವನಿಮತದ ಮೂಲಕ ಅಂಗೀಕಾರ ನೀಡಿತು.

ವಿಧಾನ ಪರಿಷತ್ ಬೆಳಗಿನ ಕಲಾಪದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪರವಾಗಿ ಕರ್ನಾಟಕ ರೇಸ್ ಕೋರ್ಸ್​ಗಳಿಗೆ ಪರವಾನಗಿ ನೀಡುವ ತಿದ್ದುಪಡಿ ವಿಧೇಯಕ 2020 ಅನ್ನು ಕಾನೂನು ಸಚಿವ ಜೆ‌.ಸಿ. ಮಾಧುಸ್ವಾಮಿ ಮಂಡನೆ ಮಾಡಿದರು. ವಿಧೇಯಕ ಮೇಲೆ ನಡೆದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸದಸ್ಯ ನಾರಾಯಣಸ್ವಾಮಿ, ರೇಸ್ ಕೋರ್ಸ್ ಸ್ಥಳಾಂತರಕ್ಕೆ ಕೈ ಇಟ್ಟರೆ ಸರ್ಕಾರವೇ ಬಿದ್ದು ಹೋಗಲಿದೆ ಎನ್ನುವ ಮಟ್ಟದ ಲಾಬಿ ಇದೆ. ರೇಸ್ ಕೋರ್ಸ್ ನಡೆಸುವವರು ಸಿಎಂ ಮಾತಿಗೂ ಬೆಲೆ ಕೊಡಲ್ಲ. ಹಾಗಾಗಿ ರೇಸ್ ಕೋರ್ಸ್ ಸ್ಥಳಾಂತರ ಸೂಕ್ತ ಎಂದು ಮನವಿ ಮಾಡಿದರು.

ಇದಕ್ಕೆ ದನಿಗೂಡಿಸಿದ ಕಾಂಗ್ರೆಸ್ ಸದಸ್ಯ ಸಿಎಂ ಇಬ್ರಾಹಿಂ, ಕುದುರೆ ರೇಸ್ ಜೂಜೋ ಅಥವಾ ಕ್ರೀಡೆಯೋ ಎನ್ನುವ ಗೊಂದಲ ಇದೆ. ಜೂಜು ಎಂದು ಪರವಾನಗಿ ರದ್ದು ಮಾಡಿದರೆ ಸ್ವಯಂ ರೇಸ್ ಕೋರ್ಸ್ ರದ್ದಾಗಲಿದೆ. ಆ ನಿಟ್ಟಿನಲ್ಲಿ ಯೋಚಿಸಿ ಎಂದು ಸಲಹೆ ನೀಡಿದರು. ಬಿಜೆಪಿ ಸದಸ್ಯೆ ತೇಜಸ್ವಿನಿ ಗೌಡ ಮಾತನಾಡಿ, ಕುದುರೆ ಬಾಲಕ್ಕೆ ಹಣಕಟ್ಟಿ ಜನರು ಹಣ ಕಳೆದುಕೊಳ್ಳುತ್ತಿದ್ದಾರೆ. ಇದು ವ್ಯಸನವಾಗುತ್ತಿದ್ದು, ಇದನ್ನು ವಿರೋಧಿಸುತ್ತೇನೆ ಎಂದರು. 64 ಎಕರೆ ಭೂಮಿ ವಿಧಾನಸೌಧದ ಕೂಗಳತೆ ದೂರದಲ್ಲಿದೆ. ರೇಸ್ ಕೋರ್ಸ್ ನಲ್ಲಿ ಟ್ವಿನ್ ಟವರ್ ನಿರ್ಮಿಸಿದರೆ ಅನುಕೂಲವಾಗಲಿದೆ. ಸರ್ಕಾರಿ ಕಚೇರಿ, ಮಂತ್ರಿಗಳ ಕ್ವಾಟ್ರಸ್, ಪಾರ್ಕಿಂಗ್ ತಾಣ ಇಲ್ಲ. ಐದು ಸಾವಿರ ಜನ ಕುಳಿತುಕೊಳ್ಳುವ ಸಭಾಂಗಣ ಇಲ್ಲ. ಇದೆಲ್ಲವನ್ನೂ ಅಲ್ಲಿ ನಿರ್ಮಿಸಲು ಅವಕಾಶ ಕಲ್ಪಿಸಿ ಎಂದು ಮನವಿ ಮಾಡಿದರು.

ಚರ್ಚೆಗೆ ಉತ್ತರ ನೀಡಿದ ಕಾನೂನು ಸಚಿವ ಮಾಧುಸ್ವಾಮಿ, ರೇಸ್ ಕೋರ್ಸ್ ಸ್ಥಳಾಂತರಕ್ಕೆ ಕೈ ಹಾಕಿದರೆ ಸರ್ಕಾರ ಪತನವಾಗಲಿದೆ ಎನ್ನುವ ಭಯ ನಮ್ಮ ಸರ್ಕಾರಕ್ಕೆ ಇಲ್ಲ. ಆದರೆ ಸುಪ್ರೀಂ ಕೋರ್ಟ್​ನಲ್ಲಿ ಪ್ರಕರಣ ಬಾಕಿ ಇರುವಾಗ ಕಾನೂನು ಸಚಿವನಾಗಿ ಹೇಗೆ ಮಾತನಾಡಲಿ ಎನ್ನುತ್ತಾ ಸದ್ಯದ ಪರವಾನಗಿ ತಿದ್ದುಪಡಿ ವಿಧೇಯಕಕ್ಕೆ ಅಂಗೀಕರಿಸಲು ಮನವಿ ಮಾಡಿದರು. ನಂತರ ಧ್ವನಿ ಮತದ ಮೂಲಕ ವಿಧೇಯಕಕ್ಕೆ ವಿಧಾನ ಪರಿಷತ್ ಅಂಗೀಕಾರ ನೀಡಿತು. ಬಳಿಕ ಸರ್ವಜ್ಞ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ 2020 ಅನ್ನು ಕಂದಾಯ ಸಚಿವ ಆರ್. ಅಶೋಕ್ ಪರವಾಗಿ ಮಾಧುಸ್ವಾಮಿ ಮಂಡಿಸಿದರು.

ಪ್ರಾಚೀನ, ಪ್ರವಾಸೋದ್ಯಮ ತಾಣ ರಕ್ಷಣೆಗೆ ಹಿಂದಿನಿಂದಲೂ ಪ್ರಾಧಿಕಾರಗಳನ್ನು ರಚಿಸಿಕೊಂಡು ಬಂದಿದ್ದೇವೆ. ಅದೇ ರೀತಿ ಸರ್ವಜ್ಞನ ಜನ್ಮಸ್ಥಳವನ್ನು ಅಂತಾರಾಷ್ಟ್ರೀಯ ಪ್ರವಾಸಿ ತಾಣವಾಗಿ ಮಾಡಲು ಸರ್ವಜ್ಞ ಪ್ರಾಧಿಕಾರ ರಚನೆ ಮಾಡಲಾಗುತ್ತಿದೆ. ಇದಕ್ಕೆ 3 ಕೋಟಿ ರೂ. ಆಡಳಿತಾತ್ಮಕ ಅನುಮೋದನೆ ನೀಡಲಾಗಿದ್ದು, 50 ಲಕ್ಷ ಬಿಡುಗಡೆ ಮಾಡಿದ್ದೇವೆ. ಯಾವ ರೀತಿ ನಿರ್ವಹಣೆ ಎಂದು ಬಿಲ್​ನಲ್ಲಿದೆ ಎಂದು ಬಿಲ್ ಬಗ್ಗೆ ವಿವರ ನೀಡಿದರು. ಬಿಲ್ ಮೇಲೆ ಮಾತನಾಡಿದ ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ, ಮೂರು ಕೋಟಿ ಸಾಲುವುದಿಲ್ಲ. 10 ಕೋಟಿ ರೂ. ಹಣ ನೀಡಿ ಎಂದು ಸಲಹೆ ನೀಡಿದರು. ಪ್ರಾಧಿಕಾರದಲ್ಲಿ ಶಾಸಕರು, ಪರಿಷತ್ ಸದಸ್ಯರಿಗೆ ಅವಕಾಶ ಕಲ್ಪಿಸಿ ಎಂದು ಕೆಲ ಸದಸ್ಯರು ಸಲಹೆ ನೀಡಿದರು. ಇದನ್ನು ಪರಿಶೀಲಿಸಿ ಪರಿಗಣಿಸುವ ಭರವಸೆ ನೀಡಿದ ನಂತರ ಧ್ವನಿಮತದ ಮೂಲಕ ಸರ್ವಜ್ಞ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ 2020 ಅನ್ನು ಅಂಗೀಕರಿಸಲಾಯಿತು.

ಎಲ್ಲೋ ಕುಳಿತು ಬೇರೆ ಸಚಿವರ ಕಳಿಸೋ ಸ್ಥಿತಿ ನಮಗೆ ಬಂದಿಲ್ಲ: ಕಾಂಗ್ರೆಸ್ ಸದಸ್ಯ ಲಿಂಗಪ್ಪ ಎಲ್ಲಾ ವಿಧೇಯಕ ಮಂಡನೆ ಮಾಡುತ್ತಿದ್ದೀರಿ. ಎಲ್ಲಾ ಪ್ರಶ್ನೆಗೂ ಸಮರ್ಥ ಉತ್ತರ ನೀಡುತ್ತಿದ್ದೀರಿ, ನಿಮಗೆ ಆ ಸಾಮರ್ಥ್ಯ ಇದೆ ಎನ್ನುವ ಶ್ಲಾಘನೆ ಮಾಡುತ್ತಲೇ ಹಿಂದೆ ನಡೆದ ಕೆಲ ಘಟನೆಗಳನ್ನು ಉಲ್ಲೇಖಿಸಿದರು. ಕಚೇರಿಯಲ್ಲಿ ಕುಳಿತು ಬೇರೆ ಸಚಿವರನ್ನು ಸದನಕ್ಕೆ ಕಳಿಸುತ್ತಿದ್ದ ಉದಾಹರಣ ನೀಡಲು ಮುಂದಾದರು. ಕೂಡಲೇ ಎದ್ದು ನಿಂತ ಸಚಿವ ಮಾಧುಸ್ವಾಮಿ ಅಲ್ಲಿ ಎಲ್ಲೋ ಕುಳಿತು ನಮ್ಮನ್ನು ಕಳಿಸೋ ಮಟ್ಟಕ್ಕೆ ನಮ್ಮ ಸಚಿವರು ಬಂದಿಲ್ಲ. ಕೆಳ ಮನೆಯಲ್ಲಿ ಭೂ ಸುಧಾರಣಾ ಕಾಯ್ದೆ ಚರ್ಚೆಗೆ ಬಂದ ಕಾರಣಕ್ಕೆ ಸಿಎಂ ಹಾಗೂ ಸಚಿವ ಅಶೋಕ್ ಬಂದಿಲ್ಲ ಅಷ್ಟೇ. ಬೇರೆ ಯಾವುದೇ ಕಾರಣ ಇಲ್ಲವೆಂದು ಸಮರ್ಥನೆ ಮಾಡಿಕೊಂಡು ಸರ್ಕಾರದ ಕಾಲೆಳೆದ ಲಿಂಗಪ್ಪ ಅವರಿಗೆ ಟಾಂಗ್ ನೀಡಿದರು.

ನಮ್ಮ ಸರ್ಕಾರ ನಮ್ಮ ಸರ್ಕಾರ ಎಂದ ವಿಶ್ವನಾಥ್: ನಮ್ಮ ಸರ್ಕಾರ ಸರ್ವಜ್ಞ ಪ್ರಾಧಿಕಾರ ರಚಿಸುತ್ತಿದೆ. ಕನ್ನಡಿಗರ ಆಶಯವನ್ನು ನಮ್ಮ ಸರ್ಕಾರ ಅನುಷ್ಠಾನಕ್ಕೆ ತರುತ್ತಿರುವುದನ್ನು ಸ್ವಾಗತಿಸುತ್ತೇನೆ. ಸರ್ವಜ್ಞ ಹಿಂದುಳಿದ ವರ್ಗದ ಕಮ್ಮಾರ ಸಮುದಾಯದ ಕವಿ, ಅವರು ಸರ್ವಶ್ರೇಷ್ಠ ಕವಿ. ಜಾತ್ಯತೀತ ಕವಿ ಎಂದು ಹೆಚ್​ ವಿಶ್ವನಾಥ್ ಬಣ್ಣಿಸಿದರು. ಈ ವೇಳೆ ಜಾತಿ ಹೇಳಬೇಡಿ ಎಂದು ಜೆಡಿಎಸ್ ನ ಬಸವರಾಜ ಹೊರಟ್ಟಿ ಆಕ್ಷೇಪ ವ್ಯಕ್ತಪಡಿಸಿದರು. ಆದರೆ ಕನಕದಾಸ ಜಯಂತಿ, ಬಸವ ಜಯಂತಿ ಎಲ್ಲವನ್ನೂ ಪ್ರಸ್ತಾಪಿಸಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡ ವಿಶ್ವನಾಥ್ ನಿಜವಾದ ಜಂಗಮ ಸರ್ವಜ್ಞ, ಜಾತ್ಯತೀತ ಕವಿ ಸರ್ವಜ್ಞ, ಅವರ ಜನ್ಮಸ್ಥಳ ಅಭಿವೃದ್ಧಿಗೆ ಪ್ರಾಧಿಕಾರ ರಚನೆ ಸ್ವಾಗತಾರ್ಹ. ನಮ್ಮ ಸರ್ಕಾರ ಈ ಕೆಲಸ ಮಾಡುತ್ತಿರುವುದಕ್ಕೆ ಹೆಮ್ಮೆಯಾಗುತ್ತಿದೆ ಎಂದು ಪದೇ ಪದೇ ನಮ್ಮ ಸರ್ಕಾರ ನಮ್ಮ ಸರ್ಕಾರ ಎನ್ನುವ ಹೇಳಿಕೆ ನೀಡಿ ಗಮನ ಸೆಳೆದರು.

ನಂತರ ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ತಿದ್ದುಪಡಿ ವಿಧೇಯಕ -2020, ಕೈಗಾರಿಕಾ ವಿವಾದಗಳ ತಿದ್ದುಪಡಿ ವಿಧೇಯಕ-2020, ಕರ್ನಾಟಕ ಅಂಗಡಿಗಳ ಮತ್ತು ವಾಣಿಜ್ಯ ಸಂಸ್ಥೆಗಳ ತಿದ್ದುಪಡಿ ವಿಧೇಯಕ-2020, ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ತಿದ್ದುಪಡಿ ವಿಧೇಯಕ -2020 ಮತ್ತು ಕರ್ನಾಟಕದ ಕೆಲವು ಅಧಿನಿಯಮಗಳು ಮತ್ತು ಪ್ರಾದೇಶಿಕ ಕಾನೂನುಗಳನ್ನು ನಿರಸನಗೊಳಿಸುವ ವಿಧೇಯಕ -2020 ವಿಧೇಯಕಕ್ಕೆ ವಿಧಾನ ಪರಿಷತ್ ಅಂಗೀಕಾರ ನೀಡಿತು.

ABOUT THE AUTHOR

...view details