ಬೆಂಗಳೂರುನ :ಅಂತಾರಾಜ್ಯ ಜಲ ವ್ಯಾಜ್ಯಗಳ ವಿಚಾರದಲ್ಲಿ ನಾಲ್ಕು ಪ್ರಮುಖ ನಿರ್ಧಾರಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಹಿರಿಯ ವಕೀಲರ, ಕಾನೂನು ತಜ್ಞರ ಸಭೆಯಲ್ಲಿ ಕೈಗೊಳ್ಳಲಾಗಿದ್ದು, ರಾಜ್ಯದ ಹಿತಾಸಕ್ತಿಗೆ ವಿರುದ್ಧವಾಗಿ ಯಾವುದೇ ಯೋಜನೆ ಅನುಷ್ಠಾನಕ್ಕೆ ಅವಕಾಶ ನೀಡಬಾರದು ಎನ್ನುವ ನಿರ್ಧಾರ ಕೈಗೊಳ್ಳಾಗಿದೆ.
ಸಿಎಂ ಅವರ ಅಧ್ಯಕ್ಷತೆಯಲ್ಲಿ ಇಂದು ನವದೆಹಲಿಯಲ್ಲಿ ಅಂತಾರಾಜ್ಯ ಜಲ ವಿವಾದ ಕುರಿತು ಕಾನೂನು ತಜ್ಞರೊಂದಿಗೆ ಸಭೆ ನಡೆಯಿತು. ನವದೆಹಲಿಯ ಕರ್ನಾಟಕ ಭವನದಲ್ಲಿ ನಡೆದ ಸಭೆಯಲ್ಲಿ ಸಚಿವರಾದ ಜೆ.ಸಿ.ಮಾಧುಸ್ವಾಮಿ, ಗೋವಿಂದ ಕಾರಜೋಳ, ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ರಾಜ್ಯ ಸರ್ಕಾರದ ಅಡ್ವೋಕೆಟ್ ಜನರಲ್ ಪ್ರಭುಲಿಂಗ ನಾವದಗಿ ಹಾಗೂ ಹಿರಿಯ ಕಾನೂನು ತಜ್ಞರು ಸಭೆಯಲ್ಲಿ ಉಪಸ್ಥಿತರಿದ್ದರು. ಜಲ ವ್ಯಾಜ್ಯಗಳ ಕುರಿತು ಮಹತ್ವದ ಮಾತುಕತೆ ನಡೆಸಿ ಕೆಲ ನಿರ್ಧಾರಗಳನ್ನು ಕೈಗೊಳ್ಳಲಾಯಿತು.
ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಇಂದು ಅಂತಾರಾಜ್ಯ ಜಲವಿವಾದಗಳ ಬಗ್ಗೆ ನಮ್ಮ ಹಿರಿಯ ನ್ಯಾಯವಾದಿಗಳು, ಅಡ್ವೋಕೇಟ್ ಜನರಲ್, ಅಧಿಕಾರಿಗಳು ಮತ್ತು ಸಚಿವ ಸಂಪುಟ ಸಹೋದ್ಯೋಗಿಗಳ ಜೊತೆ ಚರ್ಚೆ ಮಾಡಿದ್ದೇನೆ. ಪ್ರಮುಖವಾಗಿ ಕೃಷ್ಣಾ ಮೇಲ್ದಂಡೆ ಎರಡನೇ ಹಂತದ ನ್ಯಾಯಾಧೀಕರಣದ ಆದೇಶದ ನೋಟಿಫಿಕೇಶನ್ ಮಾಡುವ ಕುರಿತು ಪ್ರಯತ್ನ ತ್ವರಿತಗೊಳಿಸಬೇಕು, ಸುಪ್ರೀಂಕೋರ್ಟ್ನಲ್ಲಿ ನಮ್ಮ ವ್ಯಾಜ್ಯದ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿಗಳು ಹಿಂದೆ ಸರಿದ ಕಾರಣ ಬೇರೆ ನ್ಯಾಯಪೀಠ ರಚನೆ ಮಾಡಲು ಸುಪ್ರೀಂಕೋರ್ಟ್ ರಿಜಿಸ್ಟರ್ಗೆ ತಕ್ಷಣ ಮನವಿ ಮಾಡಬೇಕು ಎನ್ನುವ ಕುರಿತು ನಿರ್ಧರಿಸಲಾಯಿತು ಎಂದರು.
ಮೇಕೆದಾಟು ಯೋಜನೆ ವಿಚಾರದ ಕುರಿತು ಚರ್ಚೆ ಮಾಡಲಾಗಿದೆ. ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದಲ್ಲಿ ನಮ್ಮ ಮತ್ತು ತಮಿಳುನಾಡಿನ ಎರಡು ಪ್ರಕರಣಗಳು ಒಟ್ಟಿಗೆ ವಿಚಾರಣೆಗೆ ಬರುತ್ತಿದೆ. ತಮಿಳುನಾಡು ಹೊಗೇನಕಲ್ ಯೋಜನೆ, ಎರಡು ಜಲ ವಿದ್ಯುತ್ ಯೋಜನೆಗಳಿಗೆ ಆಕ್ಷೇಪಣೆ ಸಲ್ಲಿಕೆ ಮಾಡಬೇಕು ಎಂದು ನಿರ್ಧರಿಸಲಾಗಿದೆ.