ಬೆಂಗಳೂರು: ಬಾಹ್ಯಾಕಾಶ ಇಲಾಖೆ ದೇಶದಲ್ಲಿರುವ ಸ್ಟಾರ್ಟ್ ಅಪ್‌ಗಳಿಗೆ ವಿಶೇಷ ಪ್ರಾಮುಖ್ಯತೆ ನೀಡುತ್ತಿದ್ದು, ಈ ಸ್ಟಾರ್ಟ್ ಅಪ್ಗಳನ್ನು ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ಹೇಳಿದರು.
ಇಂದಿನಿಂದ ಆರಂಭವಾದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ವಿಶ್ವದಲ್ಲಿ ಖಾಸಗಿ ಸಂಸ್ಥೆ ಹಾಗೂ ಬಾಹ್ಯಾಕಾಶ ವಿಜ್ಞಾನದಲ್ಲಿ ಸಹಭಾಗಿತ್ವ ಹೆಚ್ಚುತ್ತಿದೆ. ಭಾರತ ಈಗ ಕೇವಲ ಸರ್ಕಾರಿ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಾಗಬಾರದು. ಸಂತೋಷದ ವಿಚಾರ ಎಂದರೆ ಸರ್ಕಾರದ ಹೊಸ New Space Policy ಖಾಸಗಿ ಸಂಸ್ಥೆಗಳಿಗೆ ಹಲವಾರು ಅವಕಾಶ ಕಲ್ಪಿಸಿದೆ ಎಂದರು.
ಬಾಹ್ಯಾಕಾಶ ಸಮ್ಮೇಳನದ ಉದ್ಘಾಟನಾ ಸಮಾರಂಭ IN-Space ನಿಯೋಜಿತ ಅಧ್ಯಕ್ಷ ಪವನ್ ಗೋಯಾಂಕ ಮಾತನಾಡಿ, ವಿಶ್ವದ $440 ಬಿಲಿಯನ್ ಬಾಹ್ಯಾಕಾಶ ಆರ್ಥಿಕತೆಯಲ್ಲಿ ಭಾರತ ಕೇವಲ ಶೇ 2ರಷ್ಟು ಪಾಲು ಹೊಂದಿದೆ. ಇದರ ಬಗ್ಗೆ ಕೆಲಸ ಮಾಡುವ ಅಗತ್ಯ ಇದೆ. ಇನ್ನು ಪ್ರಾಥಮಿಕ ಹಂತದಲ್ಲಿ ಅಂಕಿಸಂಖ್ಯೆ ಬಗ್ಗೆ ಮಾತಾಡಬಾರದು, ಆದರೆ IN-Space ಮೂಲಕ ಭಾರತ ವಿಶ್ವದ ಬಾಹ್ಯಾಕಾಶ ಆರ್ಥಿಕತೆಯಲ್ಲಿ ಸದೃಢ ದೇಶ ಆಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಬಾಹ್ಯಾಕಾಶ ಸಮ್ಮೇಳನದ ಉದ್ಘಾಟನಾ ಸಮಾರಂಭ ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಮಾವೇಶ ಹಾಗೂ ಪ್ರದರ್ಶನವನ್ನು ಸಿಐಐ ಆಯೋಜನೆ ಮಾಡಿದ್ದು ಇಸ್ರೋ ನೇತೃತ್ವದಲ್ಲಿ ಮೂರು ದಿನಗಳ ಕಾಲ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಸ್ಟ್ರೇಲಿಯಾ ಹಾಗೂ ನೆದರ್‌ಲ್ಯಾಂಡ್ ರಾಷ್ಟ್ರಗಳ ಬಾಹ್ಯಾಕಾಶ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಕೋವಿಡ್ ಹಿನ್ನೆಲೆಯಲ್ಲಿ ಆನ್ಲೈನ್ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ 65ಕ್ಕೂ ಹೆಚ್ಚು ಪ್ರದರ್ಶಕರು ಭಾಗಿಯಾಗಿದ್ದಾರೆ. ಇಸ್ರೋ ಅಧ್ಯಕ್ಷ ಕೆ.ಶಿವನ್ ಸೇರಿದಂತೆ ಬಾಹ್ಯಾಕಾಶ ಕ್ಷೇತ್ರದ ಹಲವು ತಜ್ಞರು ಚರ್ಚೆಯಲ್ಲಿ ಭಾಗವಹಿಸುತ್ತಿದ್ದಾರೆ. ಖಾಸಗಿ ಸಂಸ್ಥೆಗಳು ಹಾಗೂ ಯುವ ಜನತೆಗೆ ಬಾಹ್ಯಾಕಾಶ ಕ್ಷೇತ್ರದ ಅವಕಾಶ ಬಗ್ಗೆ ವಿವರಣೆ, ಸಮಾವೇಶದಲ್ಲಿ ಚರ್ಚೆ ಆಗಲಿದೆ.