ಬೆಂಗಳೂರು:ನಗರದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮುದ್ರಣ ಕಲೆಯ ದೈವಾರ್ಷಿಕ ಪ್ರದರ್ಶನವನ್ನು ಕೇಂದ್ರ ಲಲಿತಕಲಾ ಅಕಾಡೆಮಿ ಹಾಗು ಚಿತ್ರಕಲಾ ಪರಿಷತ್ ಸಹಯೋಗದೊಂದಿಗೆ ಸಿಕೆಪಿ ಆವರಣದಲ್ಲಿ ಏರ್ಪಡಿಸಲಾಗಿದೆ. ಜನವರಿ 10 ರಿಂದ 30 ರವರೆಗೆ ಈ ಕಾರ್ಯಕ್ರಮ ನಡೆಯಲಿದೆ.
ಲಲಿತ ಕಲೆಯ ಒಂದು ಪ್ರಮುಖ ಮಾಧ್ಯಮವಾಗಿರುವ ಪ್ರಿಂಟ್ ಮೇಕಿಂಗ್ನ ಈ ಪ್ರದರ್ಶನದಲ್ಲಿ ಭಾರತವೂ ಸೇರಿದಂತೆ ಜರ್ಮನಿ, ರಷ್ಯಾ, ನೆದರ್ ಲ್ಯಾಂಡ್ಸ್, ಮೆಕ್ಸಿಕೋ, ಬಾಂಗ್ಲಾದೇಶ, ಅಮೆರಿಕ, ಫ್ರಾನ್ಸ್, ಅರ್ಜೆಂಟೈನಾ, ಪೋಲೆಂಡ್, ಕ್ರೋಏಷಿಯಾ, ಇಸ್ರೇಲ್, ಪೆರು ಹಾಗೂ ನೇಪಾಳ ಇತ್ಯಾದಿ 14 ದೇಶಗಳ ಕಲಾಕೃತಿಗಳನ್ನು ಪ್ರದರ್ಶಿಸಲಾಗಿದೆ. ಇದರಲ್ಲಿ ಅಂತಾರಾಷ್ಟ್ರೀಯ ವಿಭಾಗದಲ್ಲಿ 28, ಆಹ್ವಾನಿತ ಕಲಾವಿದರಲ್ಲಿ 33 ಹಾಗೂ ರಾಷ್ಟ್ರಮಟ್ಟದ 121 ಕಲಾಕೃತಿಗಳಿವೆ.