ದೇವನಹಳ್ಳಿ :ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಗಸ್ಟ್ 31 ರಂದು ಟರ್ಮಿನಲ್ 2 ಕ್ಕೆ ಸ್ಥಳಾಂತರಗೊಳ್ಳಬೇಕಿದ್ದ ಅಂತಾರಾಷ್ಟ್ರೀಯ ವಿಮಾನಗಳ ಕಾರ್ಯಾಚರಣೆಯನ್ನು ಕಾರಣಾಂತರಗಳಿಂದ ಮುಂದೂಡಿರುವ ಬಗ್ಗೆ ಬಿಐಎಎಲ್ ವಕ್ತಾರರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದು, ಸಂಬಂಧಪಟ್ಟ ಇಲಾಖೆಗಳೊಂದಿಗೆ ಚರ್ಚಿಸಿ ಕಾರ್ಯಾಚರಣೆಯ ಮುಂದಿನ ದಿನಾಂಕವನ್ನು ತಿಳಿಸುವುದಾಗಿ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಕಾರ್ಯಾಚರಣೆ ಸ್ಥಳಾಂತರದ ಅಂತಿಮ ಹಂತದ ಸಿದ್ಧತೆ ಮತ್ತು ಪರೀಕ್ಷಾ ಸಂದರ್ಭದಲ್ಲಿ ಪ್ರಯಾಣಿಕರಿಗೆ ಸೂಕ್ತ ಹಾಗೂ ಸುಗಮ ಪ್ರಯಾಣವನ್ನು ಒದಗಿಸುವ ನಿಟ್ಟಿನಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದ್ದರಿಂದ, ಮುಂದಿನ ಸೂಚನೆ ಪ್ರಕಟ ಆಗುವವರೆಗೂ ಅಂತಾರಾಷ್ಟ್ರೀಯ ವಿಮಾನಗಳ ಕಾರ್ಯಾಚರಣೆಯು ಟರ್ಮಿನಲ್ 1 ರಿಂದಲೇ ಮುಂದುವರೆಯುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಆ.31 ರಿಂದ ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್ 2 ಕಾರ್ಯಾರಂಭ
ಯಾವುದೇ ರೀತಿಯ ಅನಾನುಕೂಲಕ್ಕಾಗಿ ವಿಷಾದ ವ್ಯಕ್ತಪಡಿಸುತ್ತೇವೆ, ನಿಮ್ಮ ತಾಳ್ಮೆ ಮತ್ತು ಸಹಕಾರದೊಂದಿಗೆ ಉತ್ತಮ ಪ್ರಯಾಣದ ಅನುಭವವನ್ನು ಕಲ್ಪಿಸಲು ಕಾರ್ಯ ನಿರತರಾಗಿದ್ದೇವೆ. ಹೆಚ್ಚಿನ ವಿವರಗಳಿಗಾಗಿ ಅಂತಾರಾಷ್ಟ್ರೀಯ ಪ್ರಯಾಣಿಕರು ತಾವು ಪ್ರಯಾಣ ಮಾಡಲಿರುವ ವಿಮಾನಯಾನ ಸಂಸ್ಥೆಯನ್ನು ಸಂಪರ್ಕಿಸಬೇಕಾಗಿ ವಿನಂತಿಸುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ :ಕೆಂಪೇಗೌಡ ಏರ್‌ಪೋರ್ಟ್ ಟರ್ಮಿನಲ್ 2 ಇಂದಿನಿಂದ ಕಾರ್ಯಾರಂಭ
ಟರ್ಮಿನಲ್ 2 ವಿಶೇಷತೆ: ಈ ಟರ್ಮಿನಲ್ 2 ಅನ್ನು ಉದ್ಯಾನವನದಂತೆ ಸಿಂಗರಿಸಲಾಗಿದೆ. ಸುಸ್ಥಿರತೆ, ತಂತ್ರಜ್ಞಾನ, ಕಲೆ ಮತ್ತು ಸಂಸ್ಕೃತಿ ಎಂಬ ನಾಲ್ಕು ಆಧಾರಸ್ತಂಭಗಳ ಮೇಲೆ ಮೈದಳೆದಿದೆ. ಸಸ್ಯ ಸಾಮ್ರಾಜ್ಯವನ್ನೇ ಸೃಷ್ಟಿಸಲಾಗಿದೆ. 180 ಅಳಿವಿನಂಚಿನಲ್ಲಿರುವ ಸಸ್ಯಗಳು, 600 - 800 ವರ್ಷದ ಹಳೆಯ ಮರಗಳು, 620 ಸ್ಥಳೀಯ ಸಸಿಗಳು, 150 ಪಾಮ್ ಜಾತಿಯ ಸಸ್ಯಗಳು, 7,700 ಕಸಿ ಮಾಡಿದ ಮರಗಳು, 96 ಕಮಲ, 100 ಲಿಲ್ಲಿ ಜಾತಿಯ ಸಸ್ಯಗಳನ್ನು ಇಲ್ಲಿ ನೋಡಬಹುದು. ಸಸ್ಯಲೋಕದಲ್ಲಿ ಪುಟ್ಟ ಜಲಪಾತ ಮತ್ತು ಹೊಂಡವೂ ಕಾಣ ಸಿಗುತ್ತದೆ.
ಟರ್ಮಿನಲ್ ಒಳಗಿನ ಛಾವಣಿ, ಮೆಟ್ಟಿಲು, ಕಂಬ ಮತ್ತು ರೇಲಿಂಗ್‌ನಲ್ಲಿ ವ್ಯಾಪಕವಾಗಿ ಬಿದಿರು ಬಳಸಲಾಗಿದೆ. ಒಟ್ಟು 923 ಕಿ.ಮೀ ಉದ್ದದಷ್ಟು ಬಿದಿರು ಬಳಕೆಯಾಗಿದೆ. ಮೊದಲ ಬಾರಿಗೆ ಇಂಜಿನಿಯರ್ಸ್ ಬಿದಿರು ಬಳಕೆ ಮಾಡಿದ್ದು, ಅಗ್ನಿ ನಿರೋಧಕ ಮತ್ತು ದೀರ್ಘಕಾಲ ಬಾಳಿಕೆ ಬರುತ್ತದೆ.
ಇದನ್ನೂ ಓದಿ :ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ರ ಸೊಬಗನ್ನು ಕಣ್ತುಂಬಿಕೊಳ್ಳಿ
ಹಾಗೆಯೇ, ಟರ್ಮಿನಲ್‌ನಲ್ಲಿ ಕರ್ನಾಟಕದ ಶ್ರೀಮಂತ ಪರಂಪರೆ ಅನಾವರಣ ಮಾಡಲಾಗಿದೆ. ಅನುಪಮಾ ಹೊಸ್ಕೆರೆ ಅವರ ಮರದ ತೊಗಲುಗೊಂಬೆಗಳು, ಕೃಷ್ಣರಾಜ್ ಚೋನಾಟ್ ಅವರ ಬೋರ್ಡಿಂಗ್ ಪಿಯರ್ ಕಲಾಕೃತಿ, ಬಿದ್ರಿ ಕ್ರಾಫ್ಟ್ ಗಾಥಾ ಮತ್ತು ಎಂ.ಎ.ರೌಫ್ ಅವರ ಕಲಾ ಕೃತಿಗಳು, ಚರ್ಮದ ತೊಗಲು ಗೊಂಬೆಗಳು, ಫೋಲಿ ಡಿಸೈನ್ ಮತ್ತು ಗುಂಡುರಾಜು ಅವರ ಕಲಾ ಕೃತಿಗಳು ಪ್ರಯಾಣಿಕರ ಗಮನ ಸೆಳೆಯುತ್ತಿವೆ. ಟರ್ಮಿನಲ್ 2 ಅನ್ನು ಎರಡು ಹಂತಗಳಲ್ಲಿ ನಿರ್ಮಿಸಲಾಗಿದೆ.
ಇದನ್ನೂ ಓದಿ :ಸೆಪ್ಟೆಂಬರ್ 1ರಿಂದ ಟರ್ಮಿನಲ್ 2ನಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ?