ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ವಿವಿಧ ನಿಯಂತ್ರಕ ಇಲಾಖೆಗಳು ಮತ್ತು ಸಹಭಾಗಿಗಳೊಂದಿಗೆ ಸುದೀರ್ಘ ಸಮಾಲೋಚನೆಯ ನಂತರ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ, ಆಕರ್ಷಕ ಟರ್ಮಿನಲ್ 2 ರಿಂದ ಅಂತರರಾಷ್ಟ್ರೀಯ ವಿಮಾನಗಳ ಕಾರ್ಯಾಚರಣೆಯನ್ನು ಇಂದಿನಿಂದ ಆರಂಭಿಸಲಾಗುವುದು ಎಂದು ಈ ಹಿಂದೆ ಬಿಐಎಎಲ್ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದರು. ಆಗಸ್ಟ್ 31ಕ್ಕೆ ನಿಗದಿಯಾಗಿದ್ದ ಟರ್ಮಿನಲ್ 2 ಕಾರ್ಯಾಚರಣೆಯನ್ನು ಕೆಲವು ತಾಂತ್ರಿಕ ಕಾರಣಗಳಿಂದ ಮುಂದೂಡಿಕೆ ಮಾಡಲಾಗಿತ್ತು. ಇಂದು ಬೆಳಗ್ಗೆ 10.45 ರಿಂದ ಹೊಸ ಟರ್ಮಿನಲ್ ಮುಖೇನ ವಿಮಾನಗಳ ಕಾರ್ಯಾಚರಣೆ ಆರಂಭಿಸಲು ತೀರ್ಮಾನಿಸಲಾಗಿದೆ. ನಿಯಂತ್ರಕರ ಅಂಗೀಕಾರ, ಕಾರ್ಯಾಚರಣೆಯ ದಕ್ಷತೆ ಹಾಗೂ ಪ್ರಯಾಣಿಕರ ಅನುಕೂಲತೆ ಸೇರಿದಂತೆ ವಿವಿಧ ಅಂಶಗಳನ್ನು ಎಚ್ಚರಿಕೆಯಿಂದ ಪರೀಕ್ಷಿಸಿ, ಪರಿಗಣಿಸಿದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ.
ವಿಮಾನಯಾನ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ನಮ್ಮ ಪ್ರಯಾಣಿಕರಿಗೆ ಈ ಬದಲಾವಣೆಯನ್ನು ಸುಗಮವಾಗಿಸಲು ನಾವು ಬದ್ಧರಾಗಿದ್ದೇವೆ. ಹೊಸ ಸೌಲಭ್ಯಕ್ಕೆ ಅಂತರರಾಷ್ಟ್ರೀಯ ಕಾರ್ಯಾಚರಣೆಯ ಅಡಚಣೆರಹಿತ ಸ್ಥಳಾಂತರಕ್ಕೆ ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಬಿಐಎಎಲ್ ಭರವಸೆ ನೀಡಿದೆ.
ಅತ್ಯಾಕರ್ಷಕವಾಗಿದೆ ಟರ್ಮಿನಲ್ 2: ಈ ಟರ್ಮಿನಲ್ ಅನ್ನು ಉದ್ಯಾನವನದಂತೆ ಅತ್ಯಂತ ಸುಂದರವಾಗಿ ನಿರ್ಮಿಸಲಾಗಿದೆ. ಸುಸ್ಥಿರತೆ, ತಂತ್ರಜ್ಞಾನ, ಕಲೆ ಮತ್ತು ಸಂಸ್ಕೃತಿ ಎಂಬ ನಾಲ್ಕು ಆಧಾರಸ್ತಂಭಗಳ ಮೇಲೆ ರೂಪುಗೊಂಡಿದೆ. ಇಲ್ಲಿ ಸಸ್ಯ ಸಾಮ್ರಾಜ್ಯವನ್ನೇ ಸೃಷ್ಟಿಸಲಾಗಿದೆ. 180 ಅಳಿವಿನಂಚಿನಲ್ಲಿರುವ ಸಸ್ಯಗಳು, 600-800 ವರ್ಷದ ಹಳೆಯ ಮರಗಳು, 620 ಸ್ಥಳೀಯ ಸಸಿಗಳು, 150 ಪಾಮ್ ಜಾತಿಯ ಸಸ್ಯಗಳು, 7,700 ಕಸಿ ಮಾಡಿದ ಮರಗಳು, 96 ಕಮಲ, 100 ಲಿಲ್ಲಿ ಜಾತಿಯ ಸಸ್ಯಗಳನ್ನು ಟರ್ಮಿನಲ್‌ನಲ್ಲಿ ನೋಡಬಹುದು. ಸಸ್ಯಲೋಕದಲ್ಲಿ ಪುಟ್ಟ ಜಲಪಾತ ಮತ್ತು ಹೊಂಡವೂ ಕಾಣಸಿಗುತ್ತದೆ.