ಬೆಂಗಳೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣವನ್ನು ನಿರ್ಮಿಸುವ ಸಂಬಂಧ ಶೀಘ್ರದಲ್ಲೇ ಅಧಿಕಾರಿಗಳ ಸಭೆ ಕರೆದು ಚರ್ಚಿಸಲಾಗುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ. ನಾರಾಯಣಗೌಡ ಅವರು ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಇಂದು ಪ್ರಶ್ನೋತ್ತರ ವೇಳೆ ಕಾಂಗ್ರೆಸ್ ಶಾಸಕ ತನ್ವಿರ್ ಸೇಠ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಬೆಂಗಳೂರು ಹೊರತುಪಡಿಸಿದರೆ ಮೈಸೂರು 2ನೇ ಅತಿದೊಡ್ಡ ನಗರವಾಗಿದೆ. ಇಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾಪಟುಗಳನ್ನು ಉತ್ತೇಜಿಸಲು ಅನುಕೂಲವಾಗುವಂತೆ ಕ್ರೀಡಾಂಗಣವನ್ನು ನಿರ್ಮಾಣ ಮಾಡಬೇಕೆಂಬುದು ಬಹುದಿನಗಳ ಬೇಡಿಕೆಯಾಗಿದೆ. ಶೀಘ್ರದಲ್ಲೇ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸಭೆಗೆ ಕರೆಯವುದಾಗಿ ತಿಳಿಸಿದರು. ಕ್ರೀಡಾಂಗಣ ನಿರ್ಮಿಸಲು ರಾಜ್ಯ ಸರ್ಕಾರ 25 ಕೋಟಿ ರೂ. ಹಾಗೂ ಕೇಂದ್ರ ಸರ್ಕಾರ 25 ಕೋಟಿ ರೂ. ಅನುದಾನವನ್ನು ನೀಡಲಿದೆ ಎಂದರು.
ಇದಕ್ಕೂ ಮುನ್ನ ಶಾಸಕ ತನ್ವೀರ್ ಸೇಠ್ ಮಾತನಾಡಿ, ಬೆಂಗಳೂರು ಹೊರತುಪಡಿಸಿದರೆ ಮೈಸೂರು 2ನೇ ದೊಡ್ಡ ನಗರವಾಗಿದೆ. ಬೆಂಗಳೂರಿನಲ್ಲಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮಾದರಿಯಲ್ಲಿ ಮೈಸೂರಿನಲ್ಲಿ ಕ್ರಿಕೆಟ್ ಮೈದಾನವನ್ನು ನಿರ್ಮಾಣ ಮಾಡಬೇಕೆಂದು ಮನವಿ ಮಾಡಿದರು.
ಮಾನಹಾನಿಯ ವರದಿಗಳನ್ನು ಪ್ರಕಟಿಸದಂತೆ ನ್ಯಾಯಾಲಯದ ತಡೆ ತಂದಿರುವ ಸಚಿವರುಗಳಿಗೆ ಪ್ರಶ್ನೆ ಕೇಳದ ತೀರ್ಮಾನವನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷ ಕೈಗೊಂಡಿದ್ದರೂ ಕಾಂಗ್ರೆಸ್‌ನ ತನ್ವೀರ್ ಸೇಠ್ ಅವರು ವಿಧಾನಸಭೆಯಲ್ಲಿ ಇಂದು ಕ್ರೀಡಾ ಸಚಿವ ಕೆ.ಸಿ. ನಾರಾಯಣಗೌಡ ಅವರಿಗೆ ಪ್ರಶ್ನೆ ಕೇಳಿ ಉತ್ತರವನ್ನು ಪಡೆದುಕೊಂಡರು.
ಇದನ್ನೂ ಓದಿ:ಮೊದಲು ನೀವು ಮಾಡಿದ ಪಾಪವನ್ನು ಜ್ಞಾಪಕ ಮಾಡಿಕೊಳ್ಳಿ: ಹೆಚ್.ವಿಶ್ವನಾಥ್ ಗುಡುಗು
ಇಂದು ಪ್ರಶ್ನೋತ್ತರ ಕಲಾಪದ ವೇಳೆ ಪ್ರಶ್ನೆ ತನ್ವೀರ್ ಸೇಠ್ ಅವರದ್ದೇ ಇತ್ತು. ಶಾಸಕಾಂಗ ಪಕ್ಷದ ತೀರ್ಮಾನದ ಬಗ್ಗೆ ಮಾಹಿತಿ ಇದ್ದಂತೆ ಕಾಣದ ತನ್ವೀರ್ ಸೇಠ್ ಅವರು ಕ್ರೀಡಾ ಸಚಿವ ನಾರಾಯಣಗೌಡ ಅವರಿಗೆ ಪ್ರಶ್ನೆ ಕೇಳಿದರು. ತನ್ವೀರ್ ಸೇಠ್ ಅವರ ಪ್ರಶ್ನೆಯ ನಂತರ ಕಾಂಗ್ರೆಸ್‌ನ ಪಿ.ಟಿ. ಪರಮೇಶ್ವರ್ ನಾಯಕ್ ಪಕ್ಷದ ತೀರ್ಮಾನದಂತೆ ತಡೆ ತಂದಿರುವ ಸಚಿವರಿಗೆ ಪ್ರಶ್ನೆ ಕೇಳಲ್ಲ ಎಂದು ಹೇಳಿದರು.