ಬೆಂಗಳೂರು: ರಾಜ್ಯದಲ್ಲಿ ಚುನಾವಣೆ ಭರಾಟೆ ಜೋರಾಗುತ್ತಿದೆ. ಕಾಂಗ್ರೆಸ್ ಪಕ್ಷದ ಮೊದಲ ಪಟ್ಟಿ ಸಹ ಇದುವರೆಗೂ ಬಿಡುಗಡೆ ಆಗಿಲ್ಲ. ಇದು ಆಕಾಂಕ್ಷಿಗಳಲ್ಲಿ ಆತಂಕ ಮೂಡಿಸುತ್ತಿದೆ. ಚುನಾವಣಾ ಆಯೋಗದಿಂದ ಎಲೆಕ್ಷನ್ ದಿನಾಂಕ ಘೋಷಣೆ ಸಮಯ ಹತ್ತಿರವಾಗುತ್ತಿದೆ. ಮಾರ್ಚ್ ತಿಂಗಳ ಮೂರನೇ ವಾರದಲ್ಲಿ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಗೆ ಬರುವ ಸಾಧ್ಯತೆ ಹೆಚ್ಚಿದೆ ಎಂಬ ಮಾತಿದೆ. ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಹಾಗೂ ಬಿಜೆಪಿ ಇದುವರೆಗೂ ತಮ್ಮ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿಲ್ಲ.
ಪ್ರಾದೇಶಿಕ ಪಕ್ಷ ಜೆಡಿಎಸ್ ಮೊದಲ ಪಟ್ಟಿ ಪ್ರಕಟಿಸಿದ್ದು ಇದೀಗ ಎರಡನೇ ಪಟ್ಟಿ ಪ್ರಕಟಿಸುವ ಸಿದ್ಧತೆ ನಡೆಸಿದೆ. ಬಿಜೆಪಿ ಪಟ್ಟಿ ಘೋಷಿಸುವ ಮುನ್ನವೇ ತಮ್ಮ ಮೊದಲ ಪಟ್ಟಿ ಬಿಡುಗಡೆ ಮಾಡುವ ತಯಾರಿ ನಡೆಸಿರುವ ಕಾಂಗ್ರೆಸ್ ನಾಯಕರಿಗೆ ಮೊದಲ ಪಟ್ಟಿ ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ. ಮೊದಲ ಪಟ್ಟಿಯನ್ನು ಅಂತಿಮಗೊಳಿಸಿ ಈಗಾಗಲೇ ರಾಷ್ಟ್ರೀಯ ನಾಯಕರಿಗೆ ತಲುಪಿಸಿದ್ದರೂ ಅದನ್ನು ಪರಿಶೀಲಿಸಿ ಹಸಿರು ನಿಶಾನೆ ನೀಡಲು ಇದುವರೆಗೂ ಸಾಧ್ಯವಾಗಿಲ್ಲ.
ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಭಾರತ್ ಜೋಡೋ ಪಾದಯಾತ್ರೆ ಮುಗಿಸಿ ಹಿಂದಿರುಗಿದ್ದು ಸಕ್ರಿಯವಾಗಿನ್ನೂ ರಾಜಕೀಯ ಚಟುವಟಿಕೆಗೆ ಮರಳಿಲ್ಲ. ಎಐಸಿಸಿ ಮಾಜಿ ಅಧ್ಯಕ್ಷ ಸೋನಿಯಾ ಗಾಂಧಿ ಅನಾರೋಗ್ಯದ ಹಿನ್ನೆಲೆಯಲ್ಲಿ ಪಕ್ಷದ ನಾಯಕರನ್ನು ಸಕಾಲಕ್ಕೆ ಭೇಟಿಯಾಗಲು ಸಾಧ್ಯವಾಗುತ್ತಿಲ್ಲ. ಹಾಲಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪಕ್ಷದ ಇತರೆ ವರಿಷ್ಠರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕಿದ್ದು ಕಾಂಗ್ರೆಸ್ನ ಮೊದಲ ಪಟ್ಟಿಗೆ ಇದುವರೆಗೂ ಹಸಿರು ನಿಶಾನೆ ಸಿಕ್ಕಿಲ್ಲ.
ಕಳೆದ ಸಂಕ್ರಾಂತಿ ಹಬ್ಬದ ಸಮಯದಲ್ಲೇ ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ ಆಗಬೇಕಿತ್ತು. ಆದರೆ ಶಿವರಾತ್ರಿ ಕಳೆದರೂ ಮುಹೂರ್ತ ಕೂಡಿ ಬರದಿರುವುದು ಆಕಾಂಕ್ಷಿಗಳನ್ನು ಆತಂಕಕ್ಕೆ ದೂಡಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡುತ್ತಿರುವ ನಾಯಕರು ಬಹುತೇಕ ಸಂದರ್ಭದಲ್ಲಿ ಅವರನ್ನು ಭೇಟಿಯಾಗಲಾಗದೆ ನಿರಾಶರಾಗಿ ಹಿಂತಿರುಗುತ್ತಿದ್ದಾರೆ. ಎರಡು ವಾರ ವಿಧಾನ ಮಂಡಲ ಅಧಿವೇಶನ ಹಾಗೂ ಅದಕ್ಕೂ ಮುನ್ನ ಬಸ್ಯಾತ್ರೆ ಹಿನ್ನೆಲೆಯಲ್ಲಿ ಪ್ರವಾಸದಲ್ಲಿಯೇ ಇದ್ದ ಕಾಂಗ್ರೆಸ್ ನಾಯಕರು ಟಿಕೆಟ್ ಆಕಾಂಕ್ಷಿಗಳ ಕೈಗೆ ಸಿಗುತ್ತಿಲ್ಲ. ಈ ಎಲ್ಲ ಕಾರಣಗಳಿಂದ ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ ವಿಳಂಬವಾಗುತ್ತಿದ್ದು ಒಂದೊಮ್ಮೆ ಬಿಜೆಪಿ ತನ್ನ ಪಟ್ಟಿ ಬಿಡುಗಡೆ ಮಾಡಿದರೆ ಕಾಂಗ್ರೆಸ್ ಪಾಲಿಗೆ ಇನ್ನಷ್ಟು ಒತ್ತಡ ಹೆಚ್ಚಾಗಲಿದೆ.
ನಾಯಕರ ಏಕಸ್ವಾಮ್ಯ:ರಾಜ್ಯ ಕಾಂಗ್ರೆಸ್‌ನಲ್ಲಿ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವಿರುವ ಹತ್ತಾರು ನಾಯಕರು ಇದ್ದರೂ ಸಹ ಯಾರೊಬ್ಬರ ಅನುಭವವನ್ನು ಸದ್ಯ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತಿಲ್ಲ. ಕೇವಲ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರ ಮಾತೇ ಪ್ರಮುಖವಾಗಿ ರಾಜ್ಯದಲ್ಲಿ ನಡೆಯುತ್ತಿದೆ. ಈ ಇಬ್ಬರು ನಾಯಕರು ತಮ್ಮದೇ ಆದ ವ್ಯಾಪ್ತಿಯಲ್ಲಿ ವೈಯಕ್ತಿಕ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದು ಇತರೆ ನಾಯಕರಿಗೆ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ನೀಡಿಲ್ಲ.