ಬೆಂಗಳೂರು:ಮೀಸಲಾತಿ ಸಂಬಂಧದ ಪೂರ್ಣ ವರದಿ ಇನ್ನೂ ಸಿದ್ಧವಾಗಿಲ್ಲ. ಅಂತಿಮ ವರದಿ ಸಿದ್ಧಪಡಿಸಲು ಇನ್ನೂ ಸಮಯಬೇಕು. ಆದರೆ, ಮಧ್ಯಂತರ ವರದಿ ಸದ್ಯದಲ್ಲೇ ಸರ್ಕಾರಕ್ಕೆ ಸಲ್ಲಿಕೆ ಮಾಡುತ್ತೇವೆ ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯದ 2ಎ ವರ್ಗಕ್ಕೆ ಸೇರ್ಪಡೆ ಬೇಡಿಕೆ ವಿಚಾರವಾಗಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ ಸರ್ಕಾರ ವರದಿ ಕೇಳಿರುವ ಹಿನ್ನೆಲೆ ಪ್ರತಿಕ್ರಿಯಿಸುತ್ತ, ಮೀಸಲಾತಿಗಳ ಸಂಬಂಧ ಪೂರ್ಣ ವರದಿ ಇನ್ನೂ ಸಿದ್ಧವಾಗಿಲ್ಲ. ಅಂತಿಮ ವರದಿ ಸಿದ್ಧಪಡಿಸಲು ಸಮಯ ಬೇಕು. ಪಂಚಮಸಾಲಿಯವರಷ್ಟೇ ಅಲ್ಲ, ಅನೇಕ ಸಮುದಾಯಗಳಿಂದ ಮೀಸಲಾತಿ ಬೇಡಿಕೆ ಇದೆ. ಈಗಾಗಲೇ ಆಯೋಗದಿಂದ 16 ಜಿಲ್ಲೆಗಳಲ್ಲಿ ಭೇಟಿ ಮಾಡಿ ಅಧ್ಯಯನ ನಡೆಸಲಾಗಿದೆ.
ಆಯೋಗದ ಸದಸ್ಯರೆಲ್ಲರ ಜತೆ ಚರ್ಚೆ ಮಾಡ್ತೇನೆ. ವರದಿಯನ್ನು ಯಾವಾಗ ಕೊಡಬೇಕು ಅಂತ ಚರ್ಚೆಯ ಬಳಿಕ ಗೊತ್ತಾಗುತ್ತದೆ. ನಾವು ಕೊಡುವ ವರದಿಯನ್ನು ಸರ್ಕಾರ ಮಾತ್ರವಲ್ಲ, ನ್ಯಾಯಾಲಯವೂ ಒಪ್ಪಬೇಕಾಗುತ್ತದೆ. ಅದಕ್ಕಾಗಿ ನಾವು ಸರಿಯಾದ ವರದಿ ಕೊಡಬೇಕು ಅನ್ಕೊಂಡಿದ್ದೇವೆ ಎಂದರು.
ಅಂತಿಮ ವರದಿಗೆ ಎರಡು ಮೂರು ತಿಂಗಳು ಬೇಕು:ವರದಿಯನ್ನು ಇಂಥ ನಿಗದಿತ ದಿನಾಂಕದೊಳಗೆ ಅಧ್ಯಯನ ಮಾಡಿ ಕೊಡಕ್ಕಾಗುವುದಿಲ್ಲ. ಆದರೆ, ನಾವು ಕೆಲವು ದಾಖಲೆಗಳನ್ನು ಕೇಳಿದ್ದೇವೆ, ಪೂರಕ ಮಾಹಿತಿಗಳನ್ನು ತಗೊಳ್ತಿದ್ದೇವೆ. ಖಂಡಿತವಾಗಿಯೂ ಅತೀ ಶೀಘ್ರದಲ್ಲಿ ಅಂತಿಮ ವರದಿಯನ್ನು ಕೊಡ್ತೇವೆ. ಸಾಮಾಜಿಕ ಮತ್ತು ಶೈಕ್ಷಣಿಕ ಪರಿಸ್ಥಿತಿಯ ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಕೊಡ್ತೇವೆ. ಸಂಪೂರ್ಣ ವರದಿ ಕೊಡಲು ಇನ್ನೂ ಎರಡು ಮೂರು ತಿಂಗಳಾಗಬಹುದು. ಮಧ್ಯಂತರ ವರದಿಯನ್ನು ಸಧ್ಯದಲ್ಲೇ ಸರ್ಕಾರಕ್ಕೆ ಸಲ್ಲಿಕೆ ಮಾಡ್ತೇವೆ. ಇದುವರೆಗೆ ಎಷ್ಟು ಅಧ್ಯಯನ ಆಗಿದೆಯೋ ಅದರ ಬಗ್ಗೆ ಮಧ್ಯಂತರ ವರದಿಯಲ್ಲಿ ಮಾಹಿತಿ ಕೊಡ್ತೇವೆ. ವರದಿಯ ಬಗ್ಗೆ ಮಾಹಿತಿಯನ್ನು ಹೊರಗೆ ಹೇಳಲು ಆಗಲ್ಲ ಎಂದಿದ್ದಾರೆ.