ಕರ್ನಾಟಕ

karnataka

ETV Bharat / state

ಮುರುಘಾ ಮಠದ ವಿವಿಧ ವಿಭಾಗಗಳಿಗೆ ಆಡಳಿತಾಧಿಕಾರಿ ನೇಮಕ ಹಿಂಪಡೆಯಲು ಕೋರಿ ಮಧ್ಯಂತರ ಅರ್ಜಿ

ಚಿತ್ರದುರ್ಗದ ಮುರುಘಾ ಮಠದ ವಿವಿಧ ವಿಭಾಗಗಳಿಗೆ ಆಡಳಿತಾಧಿಕಾರಿ ನೇಮಕ ಮಾಡಿರುವುದನ್ನು ಹಿಂಪಡೆಯಲು ಕೋರಿ ಹೈಕೋರ್ಟ್​ಗೆ ಮಧ್ಯಂತರ ಅರ್ಜಿ ಸಲ್ಲಿಕೆಯಾಗಿದೆ.

interim-petition-seeking-withdrawal-of-appointment-of-administrator-for-various-departments-of-muruga-mutt
ಮುರುಘಾ ಮಠದ ವಿವಿಧ ವಿಭಾಗಗಳಿಗೆ ಆಡಳಿತಾಧಿಕಾರಿ ನೇಮಕ ಹಿಂಪಡೆಯಲು ಕೋರಿ ಮಧ್ಯಂತರ ಅರ್ಜಿ ಸಲ್ಲಿಕೆ

By

Published : Apr 6, 2023, 9:37 PM IST

ಬೆಂಗಳೂರು : ಚಿತ್ರದುರ್ಗ ಮುರುಘಾ ಮಠದ ಆಡಳಿತಾಧಿಕಾರಿಯಾಗಿ ಪಿ.ಎಸ್‌.ವಸ್ತ್ರದ, ಶ್ರೀ ಜಗದ್ಗುರು ಮುರುಘ ರಾಜೇಂದ್ರ (ಎಸ್‌ಜೆಎಂ) ವಿದ್ಯಾಪೀಠಕ್ಕೆ ಕಾರ್ಯದರ್ಶಿಯನ್ನಾಗಿ ಕೆ.ವಿ.ಪ್ರಭಾಕರ್‌, ವೃತ್ತಿಪರ ಕಾಲೇಜುಗಳ ಆಡಳಿತ ಉಸ್ತುವಾರಿಯಾಗಿ ಮಾಜಿ ಸಚಿವ ಎಚ್‌.ಏಕಾಂತಯ್ಯ ಹಾಗೂ ಬಸವರಾಜ್‌ ಪಾಟೀಲ ಅವರನ್ನು ನೇಮಕ ಮಾಡಿರುವ ಆದೇಶ ಹಿಂಪಡೆಯಲು ನಿರ್ದೇಶಿಸಬೇಕು ಎಂದು ಕೋರಿ ಹೈಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಕೆಯಾಗಿದೆ. ಚಿತ್ರದುರ್ಗದ ಪಿ.ಎಸ್‌.ಮುರುಗೇಶ್‌ ಎಂಬುವರು ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠಕ್ಕೆ ಮಧ್ಯಂತರ ಅರ್ಜಿ ಸಲ್ಲಿಸಿದರು.

ವಿಚಾರಣೆ ವೇಳೆ ಅರ್ಜಿದಾರರ ಪರ ಹಾಜರಾಗಿದ್ದ ವಕೀಲ ಬಿ.ಎ.ಚಂದ್ರಶೇಖರ್‌, ಪಿ.ಎಸ್.ಮುರುಗೇಶ್‌ ಮಠದ ಆದ್ಯ ಭಕ್ತರಾಗಿದ್ದು ಈ ಪ್ರಕರಣದಲ್ಲಿ ಅವರನ್ನೂ ಪ್ರತಿವಾದಿಯನ್ನಾಗಿ ಸೇರ್ಪಡೆ ಮಾಡಿಕೊಳ್ಳಬೇಕು ಮತ್ತು ಆಡಳಿತಾಧಿಕಾರಿ ಕಾರ್ಯವೈಖರಿ ಪ್ರಶ್ನಿಸಿರುವ ಈ ಮಧ್ಯಂತರ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಈ ಅರ್ಜಿಯನ್ನು ನೀವು ಸರ್ಕಾರಕ್ಕೆ ಸಲ್ಲಿಸಬೇಕಲ್ಲವೇ ಎಂದು ಪ್ರಶ್ನಿಸಿದರು. ಇದಕ್ಕೆ ವಕೀಲರು, ಸ್ವಾಮಿ ಈಗಾಗಲೇ ಆಡಳಿತಾಧಿಕಾರಿಯ ನೇಮಕಾತಿಯನ್ನು ಪ್ರಶ್ನಿಸಿರುವ ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯುತ್ತಿರುವ ಕಾರಣ ಇದನ್ನೂ ಇಲ್ಲಿಯೇ ಸಲ್ಲಿಸುತ್ತಿರುವುದಾಗಿ ಹೇಳಿದರು.

ಅರ್ಜಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಆಡಳಿತಾಧಿಕಾರಿ ಪಿ.ಎಸ್.ವಸ್ತ್ರದ ಪರ ಹಾಜರಿದ್ದ ಹಿರಿಯ ವಕೀಲರು, ಅರ್ಜಿದಾರರು ಪ್ರತಿಯನ್ನು ನೀಡಿದ್ದಾರೆ. ಮುಂದಿನ ವಿಚಾರಣೆ ವೇಳೆಗೆ ಪ್ರತ್ಯುತ್ತರ ನೀಡಲಾಗುವುದು ಎಂದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ವಿಚಾರಣೆಯನ್ನು ಇದೇ 17ಕ್ಕೆ ಮುಂದೂಡಿತು.

ಮಠದ ಆಡಳಿತಾಧಿಕಾರಿ ಪಿ.ಎಸ್‌.ವಸ್ತ್ರದ ಅವರು ತಮ್ಮ ಕರ್ತವ್ಯಗಳನ್ನು ಮತ್ತೊಬ್ಬರಿಗೆ ವರ್ಗಾಯಿಸುತ್ತಿದ್ದಾರೆ. ವಿದ್ಯಾಸಂಸ್ಥೆಯಲ್ಲಿ ಖಾಲಿ ಇರುವ ಕೆಲವು ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಗೆ ಮುಂದಾಗಿದ್ದಾರೆ. ಹಾಗಾಗಿ, ಈ ನೇಮಕಾತಿಯು ಸಾರ್ವಜನಿಕರು ಮತ್ತು ಮಠದ ಭಕ್ತರಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಶಿವಮೂರ್ತಿ ಮುರುಘಾ ಶರಣರು, ಲೈಂಗಿಕ ದೌರ್ಜನ್ಯ ಪ್ರಕರಣದಡಿ ಚಿತ್ರದುರ್ಗ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ರಾಜ್ಯ ಸರ್ಕಾರ ಪಿ.ಎಸ್.ವಸ್ತ್ರದ ಅವರನ್ನು 2022ರ ಡಿಸೆಂಬರ್ 13ರಂದು ಮಠಕ್ಕೆ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿದೆ. 2022ರ ಡಿಸೆಂಬರ್ 15ರಂದು ಅಧಿಕಾರ ಸ್ವೀಕರಿಸಿದ್ದರು. ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಈ ಸಂಬಂಧ ಮಧ್ಯಂತರ ಅರ್ಜಿ ಸಲ್ಲಿಕೆಯಾಗಿದೆ.

ಇದನ್ನೂ ಓದಿ :ಸಣ್ಣ ಕಾರಣಗಳಿಗೆ 'ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯ್ದೆ' ಅನ್ವಯ ಮಾಡಿದರೆ ತೊಂದರೆ: ವಕೀಲ ಸಿ.ವಿ ನಾಗೇಶ್‌

ABOUT THE AUTHOR

...view details