ಕರ್ನಾಟಕ

karnataka

ETV Bharat / state

ಪೊಲೀಸರ ವರ್ಗಾವಣೆಯಲ್ಲಿ ಹಸ್ತಕ್ಷೇಪ: ಹೈಕೋರ್ಟ್​ಗೆ ಪ್ರಮಾಣ ಪತ್ರ ಸಲ್ಲಿಸಿದ ಸರ್ಕಾರ - ರಾಜ್ಯ ಗೃಹ ಇಲಾಖೆ

ಪೊಲೀಸ್ ಅಧಿಕಾರಿಗಳ ವರ್ಗಾವಣೆಯಲ್ಲಿ ರಾಜಕಾರಣಿಗಳು ಮಾಡಿರುವ ಶಿಫಾರಸ್ಸುಗಳನ್ನು ಯಾವುದೇ ಕಾರಣದಿಂದಲೂ ಪರಿಗಣಿಸಿಲ್ಲ ಮತ್ತು ಮುಂದೆಯೂ ಅಂತಹ ಶಿಫಾರಸುಗಳನ್ನು ಪರಿಗಣಿಸುವುದಿಲ್ಲ ಎಂದು ರಾಜ್ಯ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹೈಕೋರ್ಟ್​ ಪ್ರಮಾಣ ಪತ್ರ ಸಲ್ಲಿಸಿದ್ದಾರೆ.

high-court
ಹೈಕೋರ್ಟ್​ಗೆ ಪ್ರಮಾಣ ಪತ್ರ ಸಲ್ಲಿಸಿದ ಸರ್ಕಾರ

By

Published : Mar 12, 2020, 7:58 PM IST

ಬೆಂಗಳೂರು: ಪೊಲೀಸ್ ಅಧಿಕಾರಿಗಳ ವರ್ಗಾವಣೆಯಲ್ಲಿ ರಾಜಕಾರಣಿಗಳು ಮಾಡಿರುವ ಶಿಫಾರಸ್ಸುಗಳನ್ನು ಯಾವುದೇ ಕಾರಣದಿಂದಲೂ ಪರಿಗಣಿಸಿಲ್ಲ ಮತ್ತು ಮುಂದೆಯೂ ಅಂತಹ ಶಿಫಾರಸುಗಳನ್ನು ಪರಿಗಣಿಸುವುದಿಲ್ಲ ಎಂದು ರಾಜ್ಯ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹೈಕೋರ್ಟ್​ ಪ್ರಮಾಣ ಪತ್ರ ಸಲ್ಲಿಸಿದ್ದಾರೆ.

ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನೂರಾರು ಪೊಲೀಸ್ ಅಧಿಕಾರಿಗಳನ್ನು ಜನಪ್ರತಿನಿಧಿಗಳ ಶಿಫಾರಸು ಮೇರೆಗೆ ವರ್ಗಾವಣೆ ಮಾಡಿದ್ದು, ಈ ಪ್ರಕರಣಗಳನ್ನು ಎಸ್ಐಟಿ ತನಿಖೆಗೆ ವಹಿಸುವಂತೆ ಕೋರಿ ಪೊಲೀಸ್ ಮಹಾ ಸಂಘದ ಅಧ್ಯಕ್ಷ ವಿ.ಶಶಿಧರ್ ಸಲ್ಲಿಸಿದ್ದ ಪಿಐಎಲ್ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ಸರ್ಕಾರದ ಪರ ವಕೀಲರು, ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರು ಸಿದ್ದಪಡಿಸಿದ್ದ ಪ್ರಮಾಣ ಪತ್ರವನ್ನು ಪೀಠಕ್ಕೆ ಸಲ್ಲಿಸಿದರು. ಬಳಿಕ ಪತ್ರದ ಸಾರಾಂಶ ವಿವರಿಸಿ, ಪೊಲೀಸ್ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆಯಲ್ಲಿ ಶಾಸಕರು, ಸಂಸದರು ಸೇರಿದಂತೆ ಯಾವುದೇ ಜನಪ್ರತಿನಿಧಿಗಳ ಶಿಫಾರಸುಗಳನ್ನು ಈವರೆಗೆ ಪರಿಗಣಿಸಿಲ್ಲ. ಮುಂದೆಯೂ ಶಿಫಾರಸ್ಸುಗಳನ್ನು ನಿರ್ಲಕ್ಷ್ಯಿಸಲಾಗುವುದು. ಪೊಲೀಸ್ ಮಂಡಳಿಯ ನಿಯಮಾನುಸಾರವೇ ವರ್ಗಾವಣೆ ಮಾಡಲಾಗುವುದು ಎಂದು ತಿಳಿಸಿದರು.

ಹಿಂದಿನ ವಿಚಾರಣೆ ವೇಳೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಸಹ ಇವೇ ಅಂಶಗಳುಳ್ಳ ಪ್ರಮಾಣಪತ್ರ ಸಲ್ಲಿಸಿದ್ದರು. ಈ ಎರಡು ಪ್ರಮಾಣಪತ್ರಗಳನ್ನು ಪರಿಗಣನೆಗೆ ತೆಗೆದುಕೊಂಡ ಪೀಠ, ಮುಂದೆ ಏನಾದರೂ ಪೊಲೀಸ್ ಅಧಿಕಾರಿಗಳ ವರ್ಗಾವಣೆಯಲ್ಲಿ ಜನಪ್ರತಿನಿಧಿಗಳು ಮೂಗು ತೂರಿಸಿದರೆ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ನಿರ್ದೇಶಿಸಿ, ಅರ್ಜಿ ಇತ್ಯರ್ಥಪಡಿಸಿ ಆದೇಶಿಸಿತು.
ಶಾಸಕ ಹ್ಯಾರಿಸ್ ವಿರುದ್ಧ ಅಸಮಾಧಾನ:
ವಿಚಾರಣೆ ವೇಳೆ ಶಾಂತಿನಗರ ಕ್ಷೇತ್ರದ ಶಾಸಕ ಹ್ಯಾರಿಸ್ ಪರ ಹಾಜರಿದ್ದ ವಕೀಲರಿಗೆ ಪ್ರಶ್ನಿಸಿದ ಪೀಠ, ಪೊಲೀಸ್ ವರ್ಗಾವಣೆಗೆ ಶಿಫಾರಸು ಮಾಡಲು ಕಾನೂನಿನಲ್ಲಿ ಅಧಿಕಾರವಿದೆಯೇ? ವರ್ಗಾವಣೆಗೆ ಶಿಫಾರಸು ಮಾಡುವುದು ಏಕೆ? ಎಂದು ಕಟುವಾಗಿ ಕೇಳಿತು.

ಇದಕ್ಕೆ ಪ್ರತಿಕ್ರಿಯಿಸಿದ ಹ್ಯಾರಿಸ್ ಪರ ವಕೀಲರು, ಒತ್ತಾಯ ಪೂರ್ವಕವಾಗಿ ವರ್ಗಾವಣೆಗೆ ಶಿಫಾರಸು ಮಾಡಿಲ್ಲ. ಬದಲಿಗೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಹುದ್ದೆ ಖಾಲಿಯಿತ್ತು. ಹೀಗಾಗಿ ಸಾರ್ವಜನಿಕ ಹಿತದೃಷ್ಟಿಯಿಂದ ಸೂಕ್ತ ಅಧಿಕಾರಿಯನ್ನು ನೇಮಕ ಮಾಡಲು ಪತ್ರ ಬರೆದಿದ್ದಾರೆ. ಕಬ್ಬನ್ ಪಾರ್ಕ್ ಠಾಣೆ ವ್ಯಾಪ್ತಿಯಲ್ಲಿ ಪ್ರತಿಷ್ಠಿತ ಪ್ರದೇಶಗಳಿವೆ. ಕ್ಷೇತ್ರದ ಜನಪತ್ರಿನಿಧಿಯಾಗಿ ಜನರ ಸುರಕ್ಷತೆಗಾಗಿ ಅಷ್ಟೇ ಶಾಸಕರು ಪತ್ರ ಬರೆದಿದ್ದಾರೆ. ನಾವು ಸರ್ಕಾರಕ್ಕೆ ಅಥವಾ ಪೊಲೀಸ್ ಮಂಡಳಿಗೆ ಒತ್ತಡ ಹಾಕಿಲ್ಲ ಎಂದು ಸ್ಪಷ್ಟನೆ ನೀಡಲು ಪ್ರಯತ್ನಿಸಿದರು. ಹೇಳಿಕೆ ಒಪ್ಪದ ಪೀಠ, ನೀವು ಖಾಲಿ ಹುದ್ದೆಗೆ ಭರ್ತಿ ಮಾಡಲು ಶಿಫಾರಸು ಮಾಡಿಲ್ಲ. ಇಂತಹ ಅಧಿಕಾರಿಯನ್ನೇ ನೇಮಕ ಮಾಡುವಂತೆ ಸೂಚಿಸಿದ್ದೀರಾ ಎಂದು ಅಸಮಾಧಾನ ವ್ಯಕ್ತಪಡಿಸಿತು.

ABOUT THE AUTHOR

...view details