ಬೆಂಗಳೂರು:ರಾಜ್ಯದಲ್ಲಿ ಚುನಾವಣೆ ಅಖಾಡ ರಂಗೇರುತ್ತಿದೆ. ಈ ಬಾರಿ 2,613 ಅಭ್ಯರ್ಥಿಗಳು ರಣಕಣದಲ್ಲಿ ಸ್ಪರ್ಧೆಗೆ ಇಳಿದಿದ್ದಾರೆ. ಕೆಲ ಕ್ಷೇತ್ರಗಳಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಕಣಕ್ಕಿಳಿದಿದ್ದರೆ, ಇನ್ನು ಕೆಲ ಕ್ಷೇತ್ರಗಳಲ್ಲಿ ಕನಿಷ್ಠ ಅಭ್ಯರ್ಥಿಗಳು ಅಖಾಡಕ್ಕಿಳಿದಿದ್ದಾರೆ. ಅಷ್ಟಕ್ಕೂ ಕಳೆದ ಮೂರು ಚುನಾವಣೆಗಳಲ್ಲಿ ಅಖಾಡದಲ್ಲಿದ್ದ ಗರಿಷ್ಠ ಹಾಗೂ ಕನಿಷ್ಠ ಅಭ್ಯರ್ಥಿಗಳ ಇಂಟ್ರೆಸ್ಟಿಂಗ್ ಅಂಕಿಅಂಶ ಇಲ್ಲಿದೆ.
ರಾಜ್ಯದ ಚುನಾವಣೆ ಅಖಾಡದಲ್ಲಿ ಬಿಸಿಯೇರುತ್ತಿದೆ. ಅಭ್ಯರ್ಥಿಗಳು ತಮ್ಮ ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಈ ಬಾರಿ ಚುನಾವಣೆ ಅಖಾಡದಲ್ಲಿ 2,613 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಒಂದೊಂದು ಕ್ಷೇತ್ರದಲ್ಲಿ ಹತ್ತಾರು ಅಭ್ಯರ್ಥಿಗಳು ಕಣಕ್ಕಿಳಿದಿದ್ದು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. 224 ಕ್ಷೇತ್ರಗಳಲ್ಲಿ ಒಟ್ಟು 2,613 ಅಭ್ಯರ್ಥಿಗಳು ಪೈಪೋಟಿ ನಡೆಸಲಿದ್ದಾರೆ.
ಕಳೆದ ಮೂರು ವಿಧಾನಸಭೆ ಚುನಾವಣೆಗಳಲ್ಲಿ ರಾಜ್ಯದಲ್ಲಿ ಸಾವಿರಾರು ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಪ್ರತಿ ಚುನಾವಣೆಯಲ್ಲೂ ಒಟ್ಟು 2,000ಕ್ಕೂ ಅಧಿಕ ಅಭ್ಯರ್ಥಿಗಳು ಚುನಾವಣೆ ಎದುರಿಸಿದ್ದಾರೆ. ಹೆಚ್ಚು ಜಿದ್ದಾಜಿದ್ದು, ಹೈ ಪ್ರೊಫೈಲ್ ಕ್ಷೇತ್ರಗಳಲ್ಲಿ ಹೆಚ್ಚಿನ ಅಭ್ಯರ್ಥಿಗಳು ಕಣಕ್ಕಿಳಿಯುತ್ತಾರೆ. ಇನ್ನು ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಸಂಖ್ಯೆ ಕಡಿಮೆ ಇರುತ್ತದೆ. ಕಳೆದ ಮೂರು ಚುನಾವಣೆಗಳಲ್ಲಿನ ಈ ಇಂಟ್ರೆಸ್ಟಿಂಗ್ ಅಂಕಿಅಂಶ ಇಲ್ಲಿದೆ.
2008ರ ಗರಿಷ್ಠ-ಕನಿಷ್ಠ ಅಭ್ಯರ್ಥಿಗಳ ಕ್ಷೇತ್ರ:2008ರ ಚುನಾವಣೆಯಲ್ಲಿ ಗರಿಷ್ಟ ಅಭ್ಯರ್ಥಿಗಳನ್ನು ಹೊಂದಿರುವ ಕ್ಷೇತ್ರಗಳ ಸಂಖ್ಯೆ 31. 2008ರ ಚುನಾವಣೆಯಲ್ಲಿ ರಾಜ್ಯದಲ್ಲಿ ಒಟ್ಟು 2,242 ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. 16 ಕ್ಷೇತ್ರಗಳಲ್ಲಿ 15ಕ್ಕೂ ಅಧಿಕ ಅಭ್ಯರ್ಥಿಗಳು ರಣಕಣದಲ್ಲಿದ್ದರು. ಇನ್ನು 65 ಕ್ಷೇತ್ರಗಳಲ್ಲಿ 11-15 ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. 130 ಕ್ಷೇತ್ರಗಳಲ್ಲಿ 6-10 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. 9 ಕ್ಷೇತ್ರಗಳಲ್ಲಿ 5 ಅಭ್ಯರ್ಥಿಗಳು ಸೆಣಸಾಟ ನಡೆಸಿದ್ದರು. 2 ಕ್ಷೇತ್ರಗಳಲ್ಲಿ 4 ಅಭ್ಯರ್ಥಿಗಳು, 1 ಕ್ಷೇತ್ರದಲ್ಲಿ 3 ಹಾಗೂ 1 ಕ್ಷೇತ್ರದಲ್ಲಿ 2 ಅಭ್ಯರ್ಥಿಗಳು ಕಣಕ್ಕಿಳಿದಿದ್ದರು.