ಬೆಂಗಳೂರು: ಪಂಚರಾಜ್ಯ ಚುನಾವಣೆ ಫಲಿತಾಂಶ ಬಂದ ಬೆನ್ನಲ್ಲೇ ಕರ್ನಾಟಕದಲ್ಲಿ ಅಧಿಕಾರದ ಚುಕ್ಕಾಣಿಯನ್ನು ಯಾರು ಹಿಡಿಯುತ್ತಾರೆಂಬ ಸ್ವಾರಸ್ಯಕರ ಚರ್ಚೆ ಇಂದು ವಿಧಾನಸಭೆಯಲ್ಲಿ ನಡೆದಿದೆ.
2023ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಸ್ವತಂತ್ರ ಸರ್ಕಾರ ರಚನೆ ಮಾಡುವ ಬಗ್ಗೆ ಆಡಳಿತಾರೂಢ ಬಿಜೆಪಿ ಪ್ರತಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ತಮ್ಮದೇ ರೀತಿಯಲ್ಲಿ ವ್ಯಾಖ್ಯಾನ ಹಾಗೂ ಸಮರ್ಥನೆ ಮಾಡಿದ್ದು ಹೀಗೆ...
ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಹಿಂದೆಂದೂ ಕಾಣದ ಅಭಿವೃದ್ಧಿ ರಾಷ್ಟ್ರದಲ್ಲಿ ಆಗಿದ್ದು, ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲುವು ಸಿಕ್ಕಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 135 ರಿಂದ 140 ಸ್ಥಾನ ಗೆದ್ದು ಮತ್ತೆ ಅಧಿಕಾರಕ್ಕೆ ಬರುತ್ತೇವೆ. ವಿರೋಧ ಪಕ್ಷ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಭ್ರಮೆಯಲ್ಲಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ಮುಕ್ತ ಕರ್ನಾಟಕ:ಕಾಂಗ್ರೆಸ್ ಮುಕ್ತ ಭಾರತವಾಗುತ್ತಿದ್ದು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಮುಕ್ತ ಕರ್ನಾಟಕವಾಗಲಿದೆ. ಶಾಶ್ವತ ವಿರೋಧ ಪಕ್ಷದ ಸ್ಥಾನ ಕಾಂಗ್ರೆಸ್‍ಗೆ ಅನಿವಾರ್ಯ ಎಂದು ಹೇಳಿದರು. ಆಗ ಶಾಸಕ ಎಂ.ಬಿ.ಪಾಟೀಲ್, ಬಿಜೆಪಿಯವರು ನಿಮ್ಮನ್ನು ಮುಖ್ಯಮಂತ್ರಿಯಿಂದ ಮುಕ್ತ ಮಾಡಿದ್ದಾರೆ ಎಂದು ಛೇಡಿಸಿದರು.
ಈ ಮಧ್ಯೆ ಮಾತನಾಡಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಯಡಿಯೂರಪ್ಪ ಅವರನ್ನು ಅನಗತ್ಯವಾಗಿ ಮುಖ್ಯಮಂತ್ರಿ ಸ್ಥಾನದಿಂದ ಮುಕ್ತಗೊಳಿಸಿದರು. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಾಗ ಕಣ್ಣೀರು ಹಾಕಿದರು. ಆ ನೋವಿನಿಂದ ಮತ್ತೆ ಅಧಿಕಾರಕ್ಕೆ ಬರುವುದಾಗಿ ವ್ಯಂಗ್ಯವಾಗಿ ಹೇಳಿದ್ದಾರೆ. 2018ರಲ್ಲೂ 150 ಸ್ಥಾನ ಬರುವುದಾಗಿ ಹೇಳಿದ್ದರು. ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಭಾರತ ಪ್ರಕಾಶಿಸುತ್ತಿದೆ ಎಂದು ಹೇಳಿದ್ದರು. ಆಗಲೂ ಅಧಿಕಾರಕ್ಕೆ ಬರಲಿಲ್ಲ. ನೀವು (ಬಿಜೆಪಿಯವರು) ಭ್ರಮೆಯಲ್ಲಿದ್ದೀರಿ, ಇತ್ತೀಚೆಗೆ ಜನರ ಬಳಿಗೆ ಹೋಗಿಲ್ಲ. ಉಪಚುನಾವಣೆ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಮೊದಲ ಸ್ಥಾನ, ಬಿಜೆಪಿಗೆ 2ನೇ ಸ್ಥಾನ, ಜೆಡಿಎಸ್‍ಗೆ 3ನೇ ಸ್ಥಾನ ನೀಡಲಾಗಿದೆ. ಯಡಿಯೂರಪ್ಪ ಅವರನ್ನು ಹೊರ ಹಾಕಿದಾಗಲೇ ಅಧಿಕಾರದಿಂದ ಜನ ಹೊರ ಹಾಕಲು ತೀರ್ಮಾನ ಮಾಡಿದ್ದಾರೆ ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ: ಮರ್ಮಾಂಗಕ್ಕೆ ಒದ್ದು ಗಂಡನನ್ನೇ ಮುಗಿಸಿದ ಹೆಂಡತಿ: ಪ್ರೀತಿಸಿ ಮದುವೆಯಾದ್ರೂ ಇಬ್ಬರಿಗೂ ಇತ್ತು ಅಕ್ರಮ ಸಂಬಂಧ!
ನಾಲ್ಕು ರಾಜ್ಯಗಳಲ್ಲಿ ನೀವು ಅಧಿಕಾರದಲ್ಲಿದ್ದೀರಿ ಮತ್ತೆ ಅಧಿಕಾರಕ್ಕೆ ಬಂದಿದ್ದೀರಿ. ನಮ್ಮ ತಪ್ಪಿನಿಂದಾಗಿ ಪಂಜಾಬ್‌ನಲ್ಲಿ ಅಧಿಕಾರ ಕಳೆದುಕೊಂಡಿದ್ದೇವೆ. ಕರ್ನಾಟಕದ ಸ್ಥಿತಿ ಬೇರೆ. ಬೇರೇ ರಾಜ್ಯದ ಸ್ಥಿತಿ ಬೇರೆ. ಜನರು ತೀರ್ಮಾನಿಸಿದ್ದಾರೆ. ನಿಮ್ಮನ್ನು ಸೋಲಿಸಲು ಜನರ ನಾಡಿಮಿಡಿತ ನೋಡಿ ನಾವೇ ಅಧಿಕಾರಕ್ಕೆ ಬರುತ್ತೇವೆ. ನಿಮ್ಮ ಕನಸು ನನಸು ಆಗುವುದಿಲ್ಲ. ನೀವು ಮತ್ತೆ ಮುಖ್ಯಮಂತ್ರಿಯಾಗಲ್ಲ ಎಂದು ಕಾಲೆಳೆದರು.
ಕಾಂಗ್ರೆಸ್‍ಗೆ ನಾಯಕತ್ವವೇ ಇಲ್ಲ:ಈ ವೇಳೆ ಮತ್ತೆ ಮಾತು ಮುಂದುವರೆಸಿದ ಯಡಿಯೂರಪ್ಪ, ಸ್ವಇಚ್ಛೆಯಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಮಾಡಲಾಗಿದೆ. ನೀವು ಭ್ರಮೆಯಲ್ಲಿದ್ದೀರಿ. ನಿಮಗೆ ಶಾಶ್ವತವಾಗಿ ವಿರೋಧ ಪಕ್ಷ ಖಾಯಂ. ಕಾಂಗ್ರೆಸ್ ಪಕ್ಷ ಧೂಳಿಪಟವಾಗಿದೆ. ನಿಮಗೆ ನಾಯಕರೇ ಇಲ್ಲ. ಅಡ್ರೆಸ್ ಇಲ್ಲದಂತಾಗಿದೆ. ಕಾಂಗ್ರೆಸ್ ಮುಕ್ತ ಭಾರತವಾಗುತ್ತಿದೆ. ಕರ್ನಾಟಕದಲ್ಲಿ ಉಸಿರಾಡುತ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದರು.
ಇನ್ನು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ ಬಂಡೆಪ್ಪ ಕಾಶೆಂಪೂರ್ ಮಾತನಾಡಿ, ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷವಾಗಿ ಜೆಡಿಎಸ್ ಇದೆ. 2013 ರಲ್ಲಿ 40 ಸ್ಥಾನ ಹಾಗೂ 2018ರಲ್ಲಿ 37 ಸ್ಥಾನದಲ್ಲಿ ಗೆದ್ದಿದ್ದೆವು. ನಮ್ಮದೇ ಆದ ಶಕ್ತಿಯಿದೆ. ಎರಡೂ ರಾಷ್ಟ್ರೀಯ ಪಕ್ಷಗಳ ಹೈಕಮಾಂಡ್ ದೆಹಲಿಯಲ್ಲಿದ್ದರೆ ನಮ್ಮ ಪಕ್ಷದ ಹೈಕಮಾಂಡ್ ಪದ್ಮನಾಭನಗರದಲ್ಲಿದೆ. ರೈತರ ಸಾಲಮನ್ನ ಸೇರಿದಂತೆ ಜನಪರ ಕಾರ್ಯಕ್ರಮಗಳನ್ನು ನೀಡಿದ ಕೀರ್ತಿ ನಮ್ಮ ಪಕ್ಷದ್ದು. ಹಾಗಾಗಿ, 2023ರ ವಿಧಾನಸಭೆ ಚುನಾವಣೆಯಲ್ಲಿ ಜನರು ಆಶೀರ್ವಾದ ಮಾಡಿ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಹಂತದಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ಮಾತನಾಡಿ, ಪಾದಯಾತ್ರೆ ಮಾಡಿ ಏಕೆ ಕಾಲು ನೋವು ತಂದುಕೊಳ್ಳುತ್ತೀರಿ. ಯಡಿಯೂರಪ್ಪ ಅವರು ಹೇಳಿದಂತೆ ವಿಶ್ರಾಂತಿ ಪಡೆಯಿರಿ ಎಂದು ಸಿದ್ದರಾಮಯ್ಯ ಅವರನ್ನು ಛೇಡಿಸಿದರು.
ಆಗ ಸಿದ್ದರಾಮಯ್ಯ ಮತ್ತೆ ಮಾತನಾಡಿ, ನಮ್ಮ ಪಕ್ಷದ ಸಿದ್ಧಾಂತ, ಕಾರ್ಯಕ್ರಮ, ಬಜೆಟ್‍ನ್ನು ಜನರ ಮುಂದಿಡುತ್ತೇವೆ. ಅವರೂ ಇಡಲಿ. ಭ್ರಮೆಯಲ್ಲಿಲ್ಲ. ಈಗಾಗಲೇ ಜನ ತೀರ್ಮಾನ ಮಾಡಿದ್ದಾರೆ. ಎಲ್ಲ ವರ್ಗದ ಜನರಿಗೆ ಉಂಟಾದ ನೋವು ನೋಡಿ ನಮಗೂ ನೋವಾಗಿದೆ. ನಾವು ಅಧಿಕಾರಕ್ಕೆ ಬರುವುದು ನೈಜ ಕನಸು ಎಂದು ಸಮರ್ಥಿಸಿಕೊಂಡರು.
ಸಿಎಂ ಕುರ್ಚಿ ಆಸೆ:ಈ ವೇಳೆ ಮಧ್ಯಪ್ರವೇಶಿಸಿದ ಕಾನೂನು ಸಚಿವ ಮಾಧುಸ್ವಾಮಿ, ಮುಖ್ಯಮಂತ್ರಿ ಕುರ್ಚಿ ಮೇಲೆ ಆಸೆ ಇಲ್ಲ ಎಂದು ಕಾಂಗ್ರೆಸ್‍ನಲ್ಲಿ ಹೇಳುವವರು ಯಾರಿದ್ದಾರೆ? ನಮ್ಮನ್ನು ಅಧಿಕಾರದಿಂದ ದೂರವಿಡಲು ಬೇರೆ ಪಕ್ಷದವರ ಕೈಕಾಲು ಕಟ್ಟಿ ಮುಖ್ಯಮಂತ್ರಿ ಮಾಡಿದ ಸ್ಥಿತಿ ನಿಮಗೆ ಬರಬಾರದು ಎಂದು ವ್ಯಂಗ್ಯವಾಡಿದರು.
ಮಾಜಿ ಸ್ಪೀಕರ್ ರಮೇಶ್‍ಕುಮಾರ್ ಮಧ್ಯಪ್ರವೇಶಿಸಿ, 1985ರಿಂದ ಯಡಿಯೂರಪ್ಪ ಮತ್ತು ನಾವು ಜೊತೆಯಲ್ಲಿದ್ದೇವೆ. ಸಾಂದರ್ಭಿಕ ಒತ್ತಡಕ್ಕೆ ಒಳಗಾಗಿ ಮಾಡಿದ ಭಾಷಣ ಕಂಬಳಿ ಹುಳು ಚಿಟ್ಟೆಯಾಗಿ ರೂಪಾಂತರಗೊಳ್ಳುತ್ತದೆ. ಯಡಿಯೂರಪ್ಪ ಅವರ ಸ್ವಭಾವವೇ ಬೇರೆ. ಇತಿಹಾಸ ಎಲ್ಲವನ್ನು ದಾಖಲಿಸುತ್ತದೆ. ಪರಿವರ್ತಿತ ಯಡಿಯೂರಪ್ಪ ಅವರ ಯಾತ್ರೆಯಲ್ಲಿ ಯಶಸ್ಸು ಸಿಗಲಿ ಎಂದು ಕುಟುಕಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ನಮ್ಮ ಕಾರ್ಯಕ್ರಮ, ಶ್ರಮದ ಮೇಲೆ ಜನರಿಗೆ ವಿಶ್ವಾಸವಿದೆ. ಪ್ರಧಾನಿ ನರೇಂದ್ರ ನಾಯಕತ್ವಕ್ಕೆ ಎಲ್ಲೆಡೆ ಒಪ್ಪಿಗೆ ಮುದ್ರೆ ಸಿಕ್ಕಿದೆ. ಯಡಿಯೂರಪ್ಪ ನಾಯಕತ್ವದಲ್ಲಿ 2023ರ ವಿಧಾನಸಭೆಯಲ್ಲಿ ಮತ್ತೆ ಗೆದ್ದು ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಆಗ ಸಭಾಧ್ಯಕ್ಷರು ಮಧ್ಯಪ್ರವೇಶಿಸಿ ಈ ವಿಚಾರದ ಚರ್ಚೆಗೆ ತೆರೆ ಎಳೆದರು.