ಬೆಂಗಳೂರು: ಮುಖ್ಯಮಂತ್ರಿ ಸ್ಥಾನ ಸಸ್ಪೆನ್ಸ್ ಗೆ ತೆರೆ ಬಿದ್ದಾಗಿದೆ. ಈಗ ಸಂಪುಟ ಸಸ್ಪೆನ್ಸ್ ಮಾತುಗಳು ಆರಂಭಗೊಂಡಿವೆ. ಹೈಕಮಾಂಡ್ ಸೂಚನೆ, ಯಡಿಯೂರಪ್ಪ ಸಲಹೆ, ಪಕ್ಷ ನಿಷ್ಠರ ಗಣನೆಯಾಧಾರಿತ ಸಂಪುಟ ರಚನೆ ಮಾಡುವ ಕುರಿತು ಪಕ್ಷದ ವಲಯದಲ್ಲಿ ತೀವ್ರ ಚರ್ಚೆಯಾಗುತ್ತಿದೆ. ಬೊಮ್ಮಾಯಿ ಸಂಪುಟದಲ್ಲಿಯೂ ಮೂರು ಡಿಸಿಎಂ ಸ್ಥಾನಗಳು ಇರಲಿವೆ ಎನ್ನಲಾಗ್ತಿದೆ.
ನೂತನ ಮುಖ್ಯಮಂತ್ರಿ ಆಗಿ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಸಚಿವ ಸಂಪುಟದ ಲೆಕ್ಕಾಚಾರ ಆರಂಭವಾಗಿದೆ. ಯಡಿಯೂರಪ್ಪ ಸಂಪುಟದಲ್ಲಿದ್ದ ಯಾರೆಲ್ಲಾ ಕಮ್ ಬ್ಯಾಕ್ ಮಾಡಲಿದ್ದಾರೆ, ಯಾರಿಗೆ ಕೊಕ್ ನೀಡಲಾಗುತ್ತದೆ, ಹೊಸ ಮುಖಗಳು ಯಾರು ಎನ್ನುವ ಕುತೂಹಲದ ಚರ್ಚೆ ನಡೆಯುತ್ತಿದೆ.
ಮೂವರು ಡಿಸಿಎಂ:
ಯಡಿಯೂರಪ್ಪ ಸಂಪುಟದಲ್ಲಿದ್ದ ರೀತಿಯಲ್ಲೇ ಕನಿಷ್ಠ ಮೂರು ಡಿಸಿಎಂ ಸ್ಥಾನಗಳು ಬೊಮ್ಮಾಯಿ ಸಂಪುಟದಲ್ಲಿಯೂ ಇರಲಿವೆ ಎನ್ನಲಾಗ್ತಿದೆ. ಅಶ್ವತ್ಥ್ ನಾರಾಯಣ್, ಲಕ್ಷ್ಮಣ ಸವದಿಗೆ ಕೊಕ್ ನೀಡಿ ಗೋವಿಂದ ಕಾರಜೋಳ ಅವರನ್ನು ಉಳಿಸಿಕೊಳ್ಳಲಾಗುತ್ತದೆ. ಆರ್.ಅಶೋಕ್ ಮತ್ತು ಬಿ.ಶ್ರೀರಾಮುಲುಗೆ ಅವಕಾಶ ನೀಡಲಾಗುತ್ತದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಹೆಚ್ಚಿನ ಓದಿಗೆ: ಆಗಿರುವ ನಿಶ್ಚಿತಾರ್ಥ ಮುರಿದು ಬೀಳಲಿ.. ದೇವರಿಗೆ ಪತ್ರ ಬರೆದ ಅನಾಮಿಕ..
ಕೊಕ್ ಸಾಧ್ಯತೆ:
ಲಕ್ಷ್ಮಣ ಸವದಿ, ಸುರೇಶ್ ಕುಮಾರ್, ಜಗದೀಶ್ ಶೆಟ್ಟರ್, ಶಶಿಕಲಾ ಜೊಲ್ಲೆ, ಪ್ರಭು ಚವ್ಹಾಣ್, ಕೋಟ ಶ್ರೀನಿವಾಸ ಪೂಜಾರಿ, ಆನಂದ್ ಸಿಂಗ್, ಬಾಂಬೆ ಟೀಂ ನ ಆರ್ ಶಂಕರ್, ಶ್ರೀಮಂತ ಪಾಟೀಲ್, ಗೋಪಾಲಯ್ಯ, ಶಿವರಾಮ ಹೆಬ್ಬಾರ ಹೆಸರುಗಳು ಬೊಮ್ಮಾಯಿ ಸಂಪುಟದಲ್ಲಿ ಪರಿಗಣಿಸದಿರಲು ನಿರ್ಧಾರ ಮಾಡಿರುವ ಹೆಸರುಗಳಾಗಿವೆ ಎಂದು ಹೇಳಲಾಗ್ತಿದೆ.
ಹೊಸ ಎಂಟ್ರಿ:
ಶಾಸಕರಾದ ಎಸ್. ಎ. ರಾಮದಾಸ್, ರಾಜುಗೌಡ, ದತ್ತಾತ್ರೇಯ ಪಾಟೀಲ್ ರೇವೂರ, ರೇಣುಕಾಚಾರ್ಯ ಅಥವಾ ಮಾಡಾಳು ವಿರೂಪಾಕ್ಷಪ್ಪ, ರೂಪಾಲಿ ನಾಯ್ಕ ಅಥವಾ ಪೂರ್ಣಿಮಾ ಶ್ರೀನಿವಾಸ್, ಅಪ್ಪಚ್ಚು ರಂಜನ್ ಅಥವಾ ಕೆ.ಜಿ ಬೋಪಯ್ಯ, ಸುನಿಲ್ ಕುಮಾರ್, ಜಿ ಹೆಚ್ ತಿಪ್ಪಾರೆಡ್ಡಿ, ಮುನಿರತ್ನ ಹೊಸದಾಗಿ ಸಂಪುಟಕ್ಕೆ ಸೇರಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇದನ್ನೂ ಓದಿ: ರಾಜ್ಯದ ಜನತೆಗೆ ನೂತನ ಸಿಎಂ ಭರ್ಜರಿ ಕೊಡುಗೆ: ರೈತರ ಮಕ್ಕಳು, ವಿಧವೆಯರು, ಹಿರಿಯ ನಾಗರಿಕರಿಗೆ ಬಂಪರ್
ಈಗಾಗಲೇ ಬಸವರಾಜ ಬೊಮ್ಮಾಯಿ ಸಚಿವ ಸಂಪುಟ ರಚನೆ ಕುರಿತು ಪ್ರಯತ್ನ ಆರಂಭಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜೊತೆ ಸಮಾಲೋಚನೆ ನಡೆಸಿದ್ದು, ಯಡಿಯೂರಪ್ಪ ಸೂಚಿಸಿದ ಕೆಲ ಹೆಸರುಗಳ ಪಟ್ಟಿ ಸಿದ್ಧಪಡಿಸಿಕೊಳ್ಳಲಾಗಿದೆ.
ಪಕ್ಷದ ಕಡೆಯಿಂದಲೂ ಅಭಿಪ್ರಾಯ ಪಡೆಯಲಿರುವ ಸಿಎಂ ಅಲ್ಲಿನ ಸಲಹೆ, ಅಭಿಪ್ರಾಯ ಪಡೆದು ಮತ್ತಷ್ಟು ಹೆಸರುಗಳನ್ನು ಪಟ್ಟಿಗೆ ಸೇರಿಸಿಕೊಳ್ಳಲಿದ್ದಾರೆ. ಸದ್ಯದಲ್ಲೇ ದೆಹಲಿಗೂ ಸಿಎಂ ತೆರಳಲಿದ್ದಾರೆ. ವರಿಷ್ಠರಿಗೆ ಧನ್ಯವಾದ ಅರ್ಪಿಸುವ ನೆಪದಲ್ಲಿ ಹೈಕಮಾಂಡ್ ಭೇಟಿ ಮಾಡಿ ಚರ್ಚಿಸುವುದರೊಂದಿಗೆ ಡಿಸಿಎಂಗಳನ್ನು ಒಳಗೊಂಡಂತೆ ಸಚಿವರ ಪಟ್ಟಿಗೆ ಗ್ರೀನ್ ಸಿಗ್ನಲ್ ಪಡೆದುಕೊಂಡು ಬರಲಿದ್ದಾರೆ ಎಂದು ಹೇಳಲಾಗ್ತಿದೆ.
ಇನ್ನೊಂದು ವಾರದಲ್ಲಿ ನೂತನ ಸಚಿವ ಸಂಪುಟ ರಚನೆಯಾಗಲಿದೆ ಎಂದು ಖುದ್ದು ಮುಖ್ಯಮಂತ್ರಿಗಳೇ ಸ್ಪಷ್ಟಪಡಿಸಿದ್ದು, ಪೂರ್ಣಪ್ರಮಾಣದ ಸಂಪುಟ ರಚನೆ ಮಾಡಲಿದ್ದಾರಾ ಅಥವಾ ಕೆಲ ಸ್ಥಾನ ಖಾಲಿ ಉಳಿಸಿಕೊಳ್ಳಲಿದ್ದಾರಾ ಎನ್ನುವುದನ್ನು ಕಾದು ನೋಡಬೇಕಿದೆ.