ಬೆಂಗಳೂರು : ಮಹಾನಗರದಲ್ಲಿ ಬಂಧಿತರಾದ ಶಂಕಿತ ಉಗ್ರರ ಕುರಿತು ಗುಪ್ತಚರ ಇಲಾಖೆಯು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಂಪೂರ್ಣ ಮಾಹಿತಿ ಸಲ್ಲಿಕೆ ಮಾಡಿದೆ. ಗುಪ್ತಚರ ಇಲಾಖೆ ಸಂಗ್ರಹಿಸಿದ ಮಾಹಿತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರೇ ನೀಡಿದ್ದಾರೆ.
ವಿಧಾನಸಭೆ ಆವರಣದ ಸಿಎಂ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಉಗ್ರರ ಸಂಚಿನ ಇಂಚಿಂಚು ಮಾಹಿತಿ ನೀಡಿದ ಗೃಹ ಸಚಿವ ಪರಮೇಶ್ವರ್ ಇದೇ ವಿಚಾರವಾಗಿ ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳ ಕಾಲ ನಡೆದ ವಿಪಕ್ಷಗಳ ಸಭೆ ಹಿಟ್ ಲಿಸ್ಟ್ ನಲ್ಲಿ ಇತ್ತು ಎಂಬ ಆಘಾತಕಾರಿ ಮಾಹಿತಿಯನ್ನು ಗೃಹ ಸಚಿವರು ನೀಡಿದ್ದಾರೆ. ಸ್ವಲ್ಪ ಅಜಾಗರೂಕಾಗಿದ್ದರೂ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಆದರೆ ಇವೆಲ್ಲವನ್ನು ಪೊಲೀಸರು ತಡೆದಿದ್ದಾರೆ. ಸರಿಯಾದ ಮಾಹಿತಿ ಆಧರಿಸಿ ಉಗ್ರರನ್ನು ಸೆರೆ ಹಿಡಿದಿದ್ದಾರೆ ಎಂದು ಸಿಎಂಗೆ ಗೃಹ ಸಚಿವರು ವಿವರಿಸಿದ್ದಾರೆ.
ಇನ್ನೆರಡು ದಿನದಲ್ಲಿ ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಬ್ಲಾಸ್ಟ್ ನಡೆಸಲು ಉಗ್ರರು ಸಂಚು ರೂಪಿಸಿದ್ದರು. ಉಗ್ರರು ಮಹಾನಗರದಲ್ಲಿ ದೊಡ್ಡಮಟ್ಟದ ಆತಂಕದ ಸ್ಥಿತಿ ಉಂಟುಮಾಡುವ ಯತ್ನದಲ್ಲಿ ಇದ್ದರು ಎಂಬ ಮಾಹಿತಿ ವಿಚಾರಣೆ ವೇಳೆ ತಿಳಿದು ಬಂದಿದೆ. ಅಂತಿಮವಾಗಿ ಈ ಬಗ್ಗೆ ಖಚಿತ ಸುಳಿವಿನ ಹಿನ್ನೆಲೆಯಲ್ಲಿ ಕಡೆ ಗಳಿಗೆಯಲ್ಲಿ ಉಗ್ರರನ್ನು ಬಂಧಿಸಿ ಸಂಭಾವ್ಯ ಭಾರಿ ಅನಾಹುತವನ್ನು ತಪ್ಪಿಸಲಾಗಿದೆ. ಈ ವಿಚಾರವಾಗಿ ಬೆಂಗಳೂರು ಪೊಲೀಸರು ಅಭಿನಂದನೆಗೆ ಅರ್ಹರು ಎಂದು ಪರಮೇಶ್ವರ್ ಹೇಳಿದ್ದಾರೆ.