ಕರ್ನಾಟಕ

karnataka

ETV Bharat / state

ಕಾಂಗ್ರೆಸ್ ಸುದ್ದಿಗೋಷ್ಠಿಯಲ್ಲಿ ಗುಪ್ತಚರ ಇಲಾಖೆ ಅಧಿಕಾರಿ : ಕೈ ನಾಯಕರು ಗರಂ - ಕಾಂಗ್ರೆಸ್ ಸುದ್ದಿಗೋಷ್ಠಿ ಸಂದರ್ಭ ಗುಪ್ತಚರ ಇಲಾಖೆ ಅಧಿಕಾರಿ ಉಪಸ್ಥಿತಿ

ರಾಮಲಿಂಗ ರೆಡ್ಡಿ ಹಾಗೂ ಮಾಜಿ ಸಚಿವ ಪ್ರಿಯಾಂಕ್‌ ಖರ್ಗೆ ಇಂದು ಸಂಜೆ ಸುದ್ದಿಗೋಷ್ಠಿ ನಡೆಸುತ್ತಿದ್ದ ಸಂದರ್ಭ ಗುಪ್ತಚರ ಇಲಾಖೆ ಮತ್ತು ಕ್ರೈಮ್ ಬ್ರ್ಯಾಂಚ್ ಅಧಿಕಾರಿ ಕಾತ್ಯಾಯಿನಿ ಹಾಗೂ ಮತ್ತೋರ್ವ ಅಧಿಕಾರಿ ಆಗಮಿಸಿ ಸುದ್ದಿಗೋಷ್ಠಿ ನಡೆಸುತ್ತಿದ್ದ ಸಭಾಂಗಣದಲ್ಲಿ ಕುಳಿತಿದ್ದರು..

ಕಾಂಗ್ರೆಸ್
ಕಾಂಗ್ರೆಸ್

By

Published : Nov 17, 2021, 8:07 PM IST

ಬೆಂಗಳೂರು: ಸುದ್ದಿಗೋಷ್ಠಿ ನಡೆಸುತ್ತಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿಗೆ ಗುಪ್ತಚರ ಇಲಾಖೆ ಅಧಿಕಾರಿ ಆಗಮಿಸಿದ್ದನ್ನು ಕಾಂಗ್ರೆಸ್ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ.

ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಕಾರ್ಯಾಧ್ಯಕ್ಷ ರಾಮಲಿಂಗ ರೆಡ್ಡಿ ಹಾಗೂ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಇಂದು ಸಂಜೆ ಸುದ್ದಿಗೋಷ್ಠಿ ನಡೆಸುತ್ತಿದ್ದ ಸಂದರ್ಭದಲ್ಲಿ ಗುಪ್ತಚರ ಇಲಾಖೆ ಮತ್ತು ಕ್ರೈಮ್ ಬ್ರ್ಯಾಂಚ್ ಅಧಿಕಾರಿ ಕಾತ್ಯಾಯಿನಿ ಹಾಗೂ ಮತ್ತೋರ್ವ ಅಧಿಕಾರಿ ಆಗಮಿಸಿ ಸುದ್ದಿಗೋಷ್ಠಿ ನಡೆಸುತ್ತಿದ್ದ ಸಭಾಂಗಣದಲ್ಲಿ ಕುಳಿತಿದ್ದರು.

ಇದನ್ನು ಗಮನಿಸಿದ ಕೆಪಿಸಿಸಿ ಸಿಬ್ಬಂದಿ, ಮಾಜಿ ಮೇಯರ್ ರಾಮಚಂದ್ರಪ್ಪ ಅವರಿಗೆ ಮಾಹಿತಿ ತಲುಪಿಸಿದ್ದಾರೆ. ಕೂಡಲೇ ಅಧಿಕಾರಿಗಳು ಇದ್ದ ಸ್ಥಳಕ್ಕೆ ಆಗಮಿಸಿದ ರಾಮಚಂದ್ರಪ್ಪ ಅವರು, ತಾವು ಇಲ್ಲಿಗೆ ಆಗಮಿಸುವಂತೆ ಇಲ್ಲ ಎಂದು ತಾಕೀತು ಮಾಡಿದ್ದಾರೆ. ಕೂಡಲೇ ಅಧಿಕಾರಿಗಳು ಸಭಾಂಗಣದಿಂದ ಆಚೆಗೆ ತೆರಳಿದ್ದಾರೆ.

ಈ ಬಗ್ಗೆ ಮಾಹಿತಿ ಪಡೆದ ಮಾಜಿ ಸಚಿವ ಪ್ರಿಯಾಂಕ್‌ ಖರ್ಗೆ ಸುದ್ದಿಗೋಷ್ಠಿ ಕೊನೆಯಲ್ಲಿ ಮಾತನಾಡಿ, ಗುಪ್ತಚರ ಇಲಾಖೆ ಅಧಿಕಾರಿ ಒಬ್ಬರು ಕಾಂಗ್ರೆಸ್ ಪತ್ರಿಕಾಗೋಷ್ಠಿ ಮಾಹಿತಿ ಪಡೆಯಲು ಆಗಮಿಸಿದ್ದರು ಎಂದರೆ, ಬಿಟ್​​​​ ಕಾಯಿನ್​​ ವಿಚಾರದಲ್ಲಿ ಸರ್ಕಾರವೇ ನೇರವಾಗಿ ಶಾಮೀಲಾಗಿದೆ ಎಂದು ಹೇಳುವುದಕ್ಕೆ ಬೇರೆ ಉದಾಹರಣೆ ಬೇಕಿಲ್ಲ ಎಂದರು.

ರಾಜ್ಯ ಸರ್ಕಾರವೇ ಈ ಹಗರಣದಲ್ಲಿ ಶಾಮೀಲಾಗಿದೆ ಎಂಬ ಅನುಮಾನಕ್ಕೆ ಪುಷ್ಟಿ ನೀಡುವ ರೀತಿ ಒಬ್ಬ ಅಧಿಕಾರಿಯನ್ನು ಸುದ್ದಿಗೋಷ್ಠಿಯಲ್ಲಿನ ಮಾಹಿತಿ ಪಡೆಯಲು ಸರ್ಕಾರ ಕಳುಹಿಸಿ ಕೊಟ್ಟಿದೆ. ಸರ್ಕಾರದ ಅಧೀನದಲ್ಲಿರುವ ಯಾವುದೇ ತನಿಖಾ ಸಂಸ್ಥೆಯ ಮೂಲಕ ಬಿಟ್ ಕಾಯಿನ್ ಹಗರಣದ ತನಿಖೆ ನಡೆಸುವುದರಿಂದ ಪ್ರಯೋಜನ ಇಲ್ಲ ಎಂದು ನಾವು ಹೇಳಿರುವುದು ಸಹ ಇದೇ ಉದ್ದೇಶಕ್ಕೆ ಎಂದು ವಿವರಿಸಿದರು.

ಒಟ್ಟಾರೆ ಕಾಂಗ್ರೆಸ್ ಪಕ್ಷದ ಮುಖಂಡರು ದಾಖಲೆ ಬಿಡುಗಡೆ ಮಾಡುವುದಾಗಿ ಹೇಳಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಗುಪ್ತಚರ ಇಲಾಖೆ ಅಧಿಕಾರಿ ಆಗಮಿಸಿ ತೆರಳಿದ್ದು ದೊಡ್ಡ ಚರ್ಚೆಗೆ ಗ್ರಾಸವಾಗಿದೆ.

ಪ್ರಿಯಾಂಕ್ ಖರ್ಗೆ ಟ್ವೀಟ್ :ಟ್ವೀಟ್ ಮೂಲಕ ಇದೇ ವಿಚಾರ ಪ್ರಸ್ತಾಪಿಸಿರುವ ಪ್ರಿಯಾಂಕ್‌ ಖರ್ಗೆ, ಬಿಟ್​​ ಕಾಯಿನ್​​ ಹಗರಣದ ವಿಚಾರದಲ್ಲಿ ರಾಜ್ಯ ಬಿಜೆಪಿ ಸರ್ಕಾರವು ಸಾಕಷ್ಟು ದೊಡ್ಡ ಮಟ್ಟದ ಒತ್ತಡವನ್ನು ಎದುರಿಸುತ್ತಿದೆ. ಇಲ್ಲವಾಗಿದ್ದರೆ ಯಾಕೆ ಕಾಂಗ್ರೆಸ್ ನಾಯಕರು ಕರೆದಿದ್ದ ಪತ್ರಿಕಾಗೋಷ್ಠಿ ಸಂದರ್ಭ ಪೊಲೀಸ್ ಅಧಿಕಾರಿಯನ್ನ ಕಾಂಗ್ರೆಸ್ ಕಚೇರಿಗೆ ಕಳಿಸುತ್ತಿದ್ದರು.

ಬಿಟ್​​ ಕಾಯಿನ್​​ ಹಗರಣದ ವಿಚಾರವಾಗಿಯೇ ನಾವು ಕರೆದಿದ್ದ ಪತ್ರಿಕಾಗೋಷ್ಠಿಗೆ ಯಾಕೆ ಪೊಲೀಸ್ ಅಧಿಕಾರಿಯನ್ನು ಕಳುಹಿಸಿದ್ದೀರಿ ಎಂಬ ಪ್ರಶ್ನೆಗೆ ಗೃಹಸಚಿವರು ದಯವಿಟ್ಟು ಮಾಹಿತಿ ನೀಡುತ್ತಾರಾ? ಎಂದು ಪ್ರಶ್ನಿಸಿದ್ದಾರೆ.

ABOUT THE AUTHOR

...view details