ಬೆಂಗಳೂರು : ಕೇಂದ್ರ ಸರ್ಕಾರ ರಚಿಸಲು ಉದ್ದೇಶಿಸಿರುವ ವಿಮಾ ಯೋಜನೆ ವ್ಯಾಪ್ತಿಗೆ ವೃತ್ತಿನಿರತ ವಕೀಲರ ಪೋಷಕರನ್ನೂ ಒಳಪಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಸಮಗ್ರವಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವಂತೆ ವಕೀಲ ಎಲ್. ರಮೇಶ್ ನಾಯಕ್‌ಗೆ ಹೈಕೋರ್ಟ್ ಸಲಹೆ ನೀಡಿದೆ.
ವಿಮಾ ಯೋಜನೆ ವ್ಯಾಪ್ತಿಗೆ ವೃತ್ತಿನಿರತ ವಕೀಲರ ಪೋಷಕರನ್ನೂ ಒಳಪಡಿಸಲು ಭಾರತೀಯ ವಕೀಲರ ಪರಿಷತ್ತು (ಬಿಸಿಐ) ಮತ್ತು ಕರ್ನಾಟಕ ವಕೀಲರ ಪರಿಷತ್ತಿಗೆ (ಕೆಬಿಸಿ) ನಿರ್ದೇಶಿಸುವಂತೆ ಕೋರಿ ವಕೀಲ ಎಲ್. ರಮೇಶ್ ನಾಯಕ್ ಎಂಬವರು ತಕರಾರು ಅರ್ಜಿಯನ್ನು ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್‌ನ ಏಕಸದಸ್ಯ ಪೀಠ, ಸಾರ್ವಜನಿಕ ಹಿತಾಸಕ್ತಿ (ಪಿಐಎಲ್) ಅರ್ಜಿಯನ್ನಾಗಿ ಪರಿವರ್ತಿಸಿತ್ತು. ಅದರಂತೆ ಆ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ಎಂಜೆಎಸ್ ಕಮಲ್ ಅವರಿದ್ದ ವಿಭಾಗೀಯ ಪೀಠ ಈ ಸೂಚನೆ ನೀಡಿ ವಿಚಾರಣೆ ಮುಂದೂಡಿತು.
ವಿಚಾರಣೆ ವೇಳೆ ಅರ್ಜಿದಾರರೂ ಆಗಿರುವ ಅರ್ಜಿದಾರ ವಕೀಲ ಎಲ್. ರಮೇಶ್ ನಾಯಕ್ ಅವರು ಪ್ರಕರಣ ಸಂಬಂಧ ಕರ್ನಾಟಕ ವಕೀಲರ ಪರಿಷತ್‌ಗೆ ನೀಡಿದ್ದ ಮನವಿ ಪತ್ರ ಮತ್ತು ಅರ್ಜಿಯಲ್ಲಿ ಉಲ್ಲೇಖಿಸಿದ ಕೆಲವೊಂದು ಅಂಶಗಳಲ್ಲಿ ಕೆಲವೊಂದು ವ್ಯತ್ಯಾಸ ಇರುವುದನ್ನು ನ್ಯಾಯಪೀಠ ಗಮನಿಸಿತು. ಆ ಸಂಬಂಧ ಪ್ರತಿಕ್ರಿಯಿಸಿದ ವಿಭಾಗೀಯ ಪೀಠ, ಅರ್ಜಿದಾರರು ಸೂಕ್ತವಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಸೂಕ್ತ ರೀತಿಯಲ್ಲಿ ಸಲ್ಲಿಸಿಲ್ಲ. ಅರ್ಜಿದಾರರು ಯಾವುದನ್ನು ಮಾಡಬೇಕಿತ್ತೋ; ಅದನ್ನು ಮಾಡಿಲ್ಲ. ಅರ್ಧ ಕೆಲಸವಷ್ಟೇ ಮಾಡಿದ್ದಾರೆ ಎಂದು ನುಡಿಯಿತು.