ಬೆಂಗಳೂರು: ರಾಜ್ಯದಲ್ಲಿ ಕಳೆದ ಮೂರು ವರ್ಷಗಳಿಂದ ಮಳೆ ಅವಾಂತರ ಸೃಷ್ಟಿಸುತ್ತಲೇ ಇದೆ. ಕೋಟ್ಯಂತರ ಮೌಲ್ಯದ ಆಸ್ತಿ, ಬೆಳೆ ಹಾಗು ಜೀವ ಹಾನಿಗೆ ಸಾಕ್ಷಿಯಾಗುತ್ತಲೇ ಇದೆ. ಇದೀಗ ಈ ವರ್ಷವೂ ಮಳೆ ತನ್ನ ಆರ್ಭಟವನ್ನು ಮುಂದುವರಿಸಿದೆ. ಇದರಿಂದ ಹಲವೆಡೆ ಅತಿವೃಷ್ಟಿ ಸೃಷ್ಟಿಯಾಗಿದೆ. ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಸಂಭವಿಸಿದ ಅತಿವೃಷ್ಟಿ ಹಾನಿಗೂ, ಪರಿಹಾರವಾಗಿ ಕೇಂದ್ರ- ರಾಜ್ಯ ಸರ್ಕಾರ ನೀಡಿದ ಮೊತ್ತಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಆದ ನೆರೆ ಹಾನಿ ಬೆಟ್ಟದಷ್ಟು, ಸಂತ್ರಸ್ತರಿಗೆ ಕೊಟ್ಟ ಪರಿಹಾರ ಎಳ್ಳಷ್ಟು!.
ಈ ವರ್ಷವೂ ರಾಜ್ಯದಲ್ಲಿ ಮಳೆಯಬ್ಬರ ಜೋರಾಗಿದೆ. ಕರಾವಳಿ ಕರ್ನಾಟಕ, ಮಧ್ಯ ಕರ್ನಾಟಕದಲ್ಲಿ ಮಳೆ ಬೊಬ್ಬಿರಿದು ಅಬ್ಬರಿಸುತ್ತಿದ್ದಾನೆ. ಅತಿವೃಷ್ಟಿಗೆ ಅಪಾರ ಬೆಳೆ, ಆಸ್ತಿ ಹಾನಿ ಸಂಭವಿಸಿದೆ. ಮಳೆ ಅನಾಹುತಕ್ಕೆ ರಾಜ್ಯದ ಜನರು, ರೈತರು ನಲುಗಿ ಹೋಗಿದ್ದಾರೆ. ಸತತ ನಾಲ್ಕು ವರ್ಷಗಳಿಂದ ರಾಜ್ಯದಲ್ಲಿ ಮಳೆ ತೀವ್ರವಾಗಿದೆ. ಈ ನಾಲ್ಕು ವರ್ಷಗಳಲ್ಲೂ ರಾಜ್ಯದ ಬಹುತೇಕ ಕಡೆ ಅತಿವೃಷ್ಟಿ ನಿರ್ಮಾಣವಾಗಿದೆ. ದೊಡ್ಡ ಪ್ರಮಾಣದಲ್ಲಿ ಆಸ್ತಿ, ಬೆಳೆ ಹಾನಿಯೂ ಸಂಭವಿಸಿತ್ತು.
ನೆರೆ ಸಂತ್ರಸ್ತರಿಗೆ ಪರಿಹಾರವನ್ನು ಸರ್ಕಾರ ಘೋಷಣೆ ಮಾಡುತ್ತಿದೆ. ಎನ್ಡಿಆರ್ಎಫ್ ಹಾಗೂ ಎಸ್ಡಿಆರ್ಎಫ್ ನಡಿ ಪರಿಹಾರವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡುತ್ತಿದೆ. ಆದರೆ, ನೆರೆ ಪರಿಹಾರಕ್ಕಾಗಿ NDRF ಹಾಗೂ SDRF ನಿಂದ ಬಿಡುಗಡೆಯಾಗಿರುವ ಪರಿಹಾರ ಮಾತ್ರ ಅತ್ಯಲ್ಪ. ಕಳೆದ ಮೂರು ವರ್ಷಗಳಲ್ಲಿ ರಾಜ್ಯ ಸರ್ಕಾರ ಸಲ್ಲಿಸಿದ ನೆರೆ ಹಾನಿ ವರದಿ ಹಾಗೂ ಬಿಡುಗಡೆಯಾದ ಪರಿಹಾರ ಹಣ ನಡುವಿನ ಅಂತರ ನೋಡಿದರೆ, ನೆರೆ ಪರಿಹಾರ ಏಕೆ ಸಂತ್ರಸ್ತರ ಕೈ ಸೇರುತ್ತಿಲ್ಲ? ಎಂಬುದಕ್ಕೆ ಉತ್ತರ ಸಿಗುತ್ತದೆ.
ಮೂರು ವರ್ಷದಲ್ಲಿ 78,395 ಕೋಟಿ ನೆರೆ ಹಾನಿ: 2019-20ನೇ ಸಾಲಿನಲ್ಲಿ ಭಾರಿ ಮಳೆಗೆ ರಾಜ್ಯ ಅಕ್ಷರಶಃ ಮಂಡಿಯೂರಿತ್ತು. ಈ ವೇಳೆ ಪ್ರವಾಹದಿಂದಾಗಿ 35,160.81 ಕೋಟಿ ರೂ. ಅಂದಾಜು ನಷ್ಟ ಸಂಭವಿಸಿರುವುದಾಗಿ ಸರ್ಕಾರ ಹೇಳಿದೆ. ಬಳಿಕ 2020-21 ಸಾಲಿನಲ್ಲಿ ಮತ್ತೆ ಸುರಿದ ಜೋರು ಮಳೆಗೆ ಕರುನಾಡು ನಲುಗಿ ಹೋಗಿತ್ತು. ಈ ಸಂದರ್ಭದಲ್ಲಿ 24,941.72 ಕೋಟಿ ರೂ ನೆರೆ ಹಾನಿ ಸಂಭವಿಸಿರುವುದಾಗಿ ಸರ್ಕಾರ ವರದಿ ಸಲ್ಲಿಸಿತ್ತು. 2021-22ನೇ ಸಾಲಿನಲ್ಲೂ ರಾಜ್ಯದಲ್ಲಿ ಮಳೆ ಅಬ್ಬರಿಸಿತ್ತು. ಈ ಸಂದರ್ಭದಲ್ಲೂ 18,292.57 ಕೋಟಿ ರೂ. ನೆರೆ ನಷ್ಟ ಸಂಭವಿಸಿರುವುದಾಗಿ ಸರ್ಕಾರ ವರದಿ ನೀಡಿತ್ತು. ಕಳೆದ ಮೂರು ವರ್ಷದಿಂದ ಸತತವಾಗಿ ಸುರಿದ ಮಳೆಯಿಂದ ರಾಜ್ಯದಲ್ಲಿ ಅಪಾರ ಹಾನಿಯಾಗಿದೆ. ರಾಜ್ಯ ಸರ್ಕಾರದ ವರದಿಯಂತೆ ಕಳೆದ ಮೂರು ವರ್ಷದಲ್ಲಿ 78,395 ಕೋಟಿ ರೂ. ನೆರೆ ಹಾನಿ ಸಂಭವಿಸಿದೆ.