ಬೆಂಗಳೂರು:ಕೊರೊನಾ ಹಿನ್ನೆಲೆ ಮುಂದೂಡಲಾಗಿದ್ದ 2019-20ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಗಳನ್ನು ಮಾರ್ಚ್ 27 ರಿಂದ ಏಪ್ರಿಲ್ 19ರ ವರೆಗೆ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಕೋವಿಡ್-19 ಹಿನ್ನೆಲೆ ದೇಶಾದಾದ್ಯಂತ ಲಾಕ್ಡೌನ್ ಜಾರಿಯಿದ್ದ ಕಾರಣ ಪರೀಕ್ಷೆಗಳನ್ನು ಮುಂದೂಡಲಾಗಿತ್ತು.
ಇದೀಗ ಪರೀಕ್ಷೆಯನ್ನು ಜೂನ್ 25 ರಿಂದ ಜುಲೈ 4ರ ವರೆಗೆ ನಡೆಸಲಾಗುತ್ತಿದೆ. ವೇಳಾಪಟ್ಟಿ ಬದಲಾವಣೆಯಾಗಿರುವುದರಿಂದ ಹಾಗೂ ವಲಸೆ ಕಾರ್ಮಿಕರ ಮಕ್ಕಳು ಮತ್ತು ವಸತಿ ನಿಲಯಗಳಲ್ಲಿ ಇದ್ದು, ವ್ಯಾಸಂಗ ಮಾಡಿದ 10ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರದ ಬದಲಾವಣೆಗೆ ಅವಕಾಶ ನೀಡಿದ್ದರಿಂದ ಪರೀಕ್ಷೆಗೆ ಹಾಜರಾಗುತ್ತಿರುವ ಎಲ್ಲಾ ವಿದ್ಯಾರ್ಥಿಗಳ ಪರಿಷ್ಕೃತ ಅಂತಿಮ ಪ್ರವೇಶ ಪತ್ರಗಳನ್ನು ಜೂನ್ 10 ರಂದು ಮಂಡಳಿ ಜಾಲತಾಣದಲ್ಲಿ ಅಪ್‌ಲೋಡ್ ಮಾಡಲಾಗಿದೆ.
ಈ ಹಿಂದೆ ನೀಡಿದ ಪ್ರವೇಶ ಪತ್ರಗಳು ಅಸಿಂಧುವಾಗಿದ್ದು, ಸಂಬಂಧಪಟ್ಟ ಶಾಲಾ ಮುಖ್ಯೋಪಾಧ್ಯಾಯರು ವಿದ್ಯಾರ್ಥಿಗಳ ಪರಿಷ್ಕೃತ ಪ್ರವೇಶ ಪತ್ರಗಳನ್ನು ಮಂಡಳಿಯ ಜಾಲತಾಣದ ಶಾಲಾ ಲಾಗಿನ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡು ವಿದ್ಯಾರ್ಥಿಗಳಿಗೆ ವಿತರಿಸಲು ಸೂಚಿಸಲಾಗಿದೆ.
ವಲಸೆ ಕಾರ್ಮಿಕರ ಮಕ್ಕಳು ಮತ್ತು ವಸತಿ ನಿಲಯಗಳಲ್ಲಿ ಇದ್ದು ವ್ಯಾಸಂಗ ಮಾಡಿದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರದ ಬದಲಾವಣೆ ಅವಕಾಶ ನೀಡಿದೆ. ಅದರಂತೆ ಶಾಲೆದಿಂದಲೇ ಆಯ್ಕೆ ಮಾಡಿಕೊಂಡ ಪರೀಕ್ಷಾ ಕೇಂದ್ರಗಳಿಗೆ ಆ ವಿದ್ಯಾರ್ಥಿಗಳನ್ನು ನಿಯೋಜಿಸಲಾಗಿದೆ.
ಶಾಲಾ ಮುಖ್ಯ ಶಿಕ್ಷಕರು ಮರು ಆಯ್ಕೆ ಮಾಡಿಕೊಂಡ ಪರೀಕ್ಷಾ ಕೇಂದ್ರಕ್ಕೆ ನಿಯೋಜನೆ ಮಾಡಿರುವ ಬಗ್ಗೆ ದೃಢೀಕರಿಸಿಕರಿಸುವುದು. ವಿದ್ಯಾರ್ಥಿಗಳ ಪ್ರವೇಶ ಪತ್ರಗಳನ್ನು ಮೂರು ವಿಧಾನದಲ್ಲಿ ಪಡೆಯಬಹುದಾಗಿದೆ. ವ್ಯಾಸಂಗ ಮಾಡಿದ ಶಾಲಾ ಲಾಗಿನ್‌ನಲ್ಲಿ, ಮರು ಹಂಚಿಕೆ ಮಾಡಿಕೊಂಡ ಪರೀಕ್ಷಾ ಕೇಂದ್ರದ ಶಾಲಾ ಲಾಗಿನ್‌ನಲ್ಲಿ, ಮರು ಹಂಚಿಕೆ ಮಾಡಿಕೊಂಡ ಪರೀಕ್ಷಾ ಕೇಂದ್ರದ ಬ್ಲಾಕ್ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಲಾಗಿನ್‌ನಲ್ಲಿ ಪಡೆಯಬಹುದಾಗಿದೆ.