ಬೆಂಗಳೂರು: ಮೈಸೂರು - ಬೆಂಗಳೂರು - ಚೆನ್ನೈ ನಡುವೆ ಸಂಚರಿಸಲಿರುವ ರಾಜ್ಯದ ಮೊಟ್ಟ ಮೊದಲ ಬುಲೆಟ್ ಟ್ರೈನ್ ಯೋಜನೆಗೆ ಸಂಬಂಧಿಸಿದಂತೆ ಸಮಗ್ರ ಯೋಜನಾ ವರದಿ ಸಲ್ಲಿಸಲು ಕೇಂದ್ರ ಸರ್ಕಾರ ಸೂಚಿಸಿದೆ ಎಂದು ವಸತಿ, ಮೂಲಸೌಕರ್ಯ ಖಾತೆ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮೈಸೂರು - ಬೆಂಗಳೂರು - ಚೆನ್ನೈ ನಡುವಣ ಮಾರ್ಗವನ್ನು ಮೂರು ಗಂಟೆಗಳಲ್ಲಿ ಕ್ರಮಿಸುವ ಬುಲೆಟ್ ಟ್ರೈನ್ ಯೋಜನೆಗೆ ಸಂಬಂಧಿಸಿದಂತೆ ಸಮಗ್ರ ಯೋಜನಾ ವರದಿ ನೀಡಲು ನ್ಯಾಷನಲ್ ಹೈಸ್ಪೀಡ್ ರೈಲ್ವೇ ಕಾರ್ಪೋರೇಷನ್ಗೆ ಕೇಂದ್ರ ಸರ್ಕಾರ ಆದೇಶ ನೀಡಿದೆ ಎಂದರು.
ಬೆಂಗಳೂರಿನಿಂದ ಚೆನ್ನೈಗೆ ಎರಡು ಗಂಟೆ : ರಾಜ್ಯದ ಮೊಟ್ಟ ಮೊದಲ ಬುಲೆಟ್ ಟ್ರೈನ್ ಯೋಜನೆ ಸುಮಾರು 1.15 ಲಕ್ಷ ಕೋಟಿ ರೂ. ವೆಚ್ಚದಲ್ಲಿ ಜಾರಿಯಾಗಲಿದ್ದು, ಇದು ಜಾರಿಯಾದರೆ ಮೈಸೂರಿನಿಂದ ಬೆಂಗಳೂರಿಗೆ 45 ನಿಮಿಷಗಳಲ್ಲಿ ಬರಬಹದು. ಅದೇ ರೀತಿ ಬೆಂಗಳೂರಿನಿಂದ ಚೆನ್ನೈಗೆ ಎರಡು ಗಂಟೆಗಳ ಅವಧಿ ಸಾಕು. ಯೋಜನೆಗೆ ಸಂಬಂಧಿಸಿದಂತೆ ಭೂಮಿಯನ್ನು ರಾಜ್ಯ ಸರ್ಕಾರ ಒದಗಿಸಲಿದ್ದು, ಈ ಸಂಬಂಧ ಮಹತ್ವದ ಚರ್ಚೆ ನಡೆಸಲು ಉನ್ನತ ಮಟ್ಟದ ಸಭೆಯನ್ನು ಕರೆಯಲಾಗಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದಿಂದಲೇ ಹಣ: ಬೆಂಗಳೂರು - ಮೈಸೂರು ದಶಪಥ ರಸ್ತೆಗೆ ಹೊಂದಿಕೊಂಡಂತೆ ಬುಲೆಟ್ ಟ್ರೈನ್ ಸಂಚಾರಕ್ಕೆ ಮಾರ್ಗ ಒದಗಿಸಬಹುದು ಎಂಬುದೂ ಸೇರಿದಂತೆ ಯೋಜನೆಗೆ ಭೂಮಿ ಒದಗಿಸುವ ಸ್ವರೂಪದ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು. ಇನ್ನು ಬುಲೆಟ್ ಟ್ರೈನ್ ಯೋಜನೆಯನ್ನು ಜಾರಿಗೊಳಿಸಲು ಸುಮಾರು ಒಂದು ಲಕ್ಷದ ಹದಿನೈದು ಸಾವಿರ ಕೋಟಿ ರೂಪಾಯಿ ವೆಚ್ಚವಾಗಲಿದ್ದು ಕೇಂದ್ರ ಸರ್ಕಾರವೇ ಈ ಹಣವನ್ನು ಭರಿಸಲಿದೆ ಎಂದರು.
ದೇಶದಲ್ಲಿ ಬುಲೆಟ್ ಟ್ರೈನ್ ಸಂಚರಿಸುವ ಕಾಲ ಸಮೀಪಿಸಿದ್ದು ಈಗಾಗಲೇ ಅಹಮದಾಬಾದ್ - ಮುಂಬೈ ನಡುವೆ ಸಂಚರಿಸಲಿರುವ ಬುಲೆಟ್ ಟ್ರೈನ್ ಯೋಜನೆಗೆ ಮಹಾರಾಷ್ಟ್ರ ಸರ್ಕಾರ ಭೂಸ್ವಾಧೀನ ಕಾರ್ಯವನ್ನು ನಡೆಸಿದ್ದು,ಇದೀಗ ನಮ್ಮ ಸರ್ಕಾರವೂ ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಲಿದೆ.
ಭೂಸ್ವಾಧೀನ ಕಾರ್ಯ : ರಾಜ್ಯದಲ್ಲಿ ಸದ್ಯಕ್ಕೆ ಒಂಬತ್ತು ರೈಲ್ವೇ ಮಾರ್ಗಗಳ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದ್ದು, ಮುಂದಿನ ಎರಡು ವರ್ಷಗಳಲ್ಲಿ ಇದು ಪೂರ್ಣವಾಗುವ ನಿರೀಕ್ಷೆ ಇದೆ. ಈ 9 ಯೋಜನೆಗಳ ಕಾಮಗಾರಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವೇ ಭೂಸ್ವಾಧೀನ ಕಾರ್ಯ ನಡೆಸಿದ್ದು ಕಾಮಗಾರಿಗಾಗಿ 1,666 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ ಎಂದು ಹೇಳಿದರು.
ಎಲ್ಲೆಲ್ಲಿಯ ಯೋಜನೆಗೆ ಎಷ್ಟು ಖರ್ಚು: ಈ ವರ್ಷ ಸದರಿ ಯೋಜನೆಗಳಿಗೆ 500 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದು, ತ್ವರಿತಗತಿಯಲ್ಲಿ ಕಾಮಗಾರಿ ನಡೆಯುತ್ತಿದೆ. ಮುನಿರಾಬಾದ್ - ಮೆಹಬೂಬ್ ನಗರ ಯೋಜನೆಗೆ 1,350 ಕೋಟಿ ವೆಚ್ಚವಾಗಲಿದ್ದು,ತುಮಕೂರು - ರಾಯದುರ್ಗ ನಡುವಣ ರೈಲ್ವೇ ಯೋಜನೆಗೆ 479 ಕೋಟಿ ರೂ., ಬಾಗಲಕೋಟೆ-ಕುಡುಚಿ ಮಾರ್ಗಕ್ಕೆ 816 ಕೋಟಿ ರೂ., ಗದಗ - ವಾಡಿ ಮಾರ್ಗಕ್ಕೆ 1922 ಕೋಟಿ ರೂ ವೆಚ್ಚವಾಗಲಿದೆ. ತುಮಕೂರು -ದಾವಣಗೆರೆ ಮಾರ್ಗಕ್ಕೆ 1801 ಕೋಟಿ, ಶಿವಮೊಗ್ಗ- ಶಿಕಾರಿಪುರ - ರಾಣೇಬೆನ್ನೂರು ಮಾರ್ಗಕ್ಕೆ 1200 ಕೋಟಿ, ಬೇಲೂರು-ಹಾಸನ ಮಾರ್ಗಕ್ಕೆ 462 ಕೋಟಿ, ಧಾರವಾಡ - ಬೆಳಗಾವಿ ಮಾರ್ಗಕ್ಕೆ 927 ಕೋಟಿ ರೂ. ವೆಚ್ಚವಾಗಲಿದ್ದು, ಯೋಜನೆಯ ಶೇ. 50 ರಷ್ಟು ಹಣವನ್ನು ಕೇಂದ್ರ ಸರ್ಕಾರ, ಶೇ. 50 ರಷ್ಟು ಹಣವನ್ನು ರಾಜ್ಯ ಸರ್ಕಾರ ಭರಿಸಲಿವೆ ಎಂದು ಮಾಹಿತಿ ನೀಡಿದರು.
ರೈಲ್ವೇ ಯೋಜನೆಗಳಿಗೆ ಸಂಬಂಧಿಸಿದಂತೆ ಸಂಚಾರ ಕಾರ್ಯ ಸುಗಮವಾಗಿ ನಡೆಯಲು ಮೇಲ್ಸೇತುವೆ - ಕೆಳಸೇತುವೆಗಳ ನಿರ್ಮಾಣ ಕಾರ್ಯಕ್ಕೆ ರಾಜ್ಯ ಸರ್ಕಾರ 191.98 ಕೋಟಿ ರೂ. ಗಳನ್ನು ಒದಗಿಸಿದೆ ಎಂದು ಹೇಳಿದರು.
ದ್ವಿಪಥೀಕರಣ ನಿರ್ಮಾಣ :ಬೆಂಗಳೂರು ನಗರದ ಯಶವಂತಪುರ-ಚನ್ನಸಂದ್ರ ಮತ್ತು ಬೈಯಪ್ಪನ ಹಳ್ಳಿ-ಹೊಸೂರು ನಡುವಿನ ಮಾರ್ಗಗಳು ಏಕಪಥವಾಗಿದ್ದು ಯಶವಂತಪುರ ಹಾಗೂ ಬೆಂಗಳೂರು ನಗರದಿಂದ ಹೆಚ್ಚುವರಿ ರೈಲು ಸೇವೆಗಳನ್ನು ಆರಂಭಿಸಲು ಅಡ್ಡಿಯಾಗಿದೆ. ಈ ಸಮಸ್ಯೆಯನ್ನು ಪರಿಹರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಲಾ ಐವತ್ತರಷ್ಟು ವೆಚ್ಚವನ್ನು ಭರಿಸಿ ದ್ವಿಪಥೀಕರಣ ನಿರ್ಮಾಣ ಕಾರ್ಯವನ್ನು ಅನುಷ್ಠಾನಗೊಳಿಸುತ್ತಿರುವುದಾಗಿ ತಿಳಿಸಿದರು.
ಯಶವಂತಪುರ - ಚನ್ನಸಂದ್ರ ನಡುವೆ 22 ಕಿಮಿ ಅಂತರವಿದ್ದು, ಈ ಮಾರ್ಗವನ್ನು ದ್ವಿಪಥೀಕರಣಗೊಳಿಸಲು 315 ಕೋಟಿ ರೂಪಾಯಿ ವೆಚ್ಚವಾಗಲಿದೆ.ಈ ವೆಚ್ಚದ ಪೈಕಿ 165 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ,165 ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರ ಭರಿಸಲಿದೆ. ಇದೇ ಭೈಯಪ್ಪನಹಳ್ಳಿ - ಹೊಸೂರು ನಡುವೆ 42 ಕಿಮೀ ಅಂತರವಿದ್ದು ಈ ಮಾರ್ಗವನ್ನು ದ್ವಿಪಥೀಕರಣಗೊಳಿಸಲು 499 ಕೋಟಿ ರೂಪಾಯಿ ವೆಚ್ಚವಾಗಲಿದೆ.ಈ ಯೋಜನೆಗೆ ರಾಜ್ಯ ಒದಗಿಸಬೇಕಿರುವ 250 ಕೋಟಿ ರೂ.ಗಳ ಪೈಕಿ 65 ಕೋಟಿ ರೂ. ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ವಿಮಾನ ನಿಲ್ದಾಣದ ಬಳಿ ಇರುವ 48 ಕಟ್ಟಡ ಕೆಡವಲು ಡಿಸಿಗೆ ಸೂಚಿಸಿದ ಹೈಕೋರ್ಟ್