ಕರ್ನಾಟಕ

karnataka

ETV Bharat / state

ಜಾತಿ ಸೂಚಕ ಇರುವ ಗ್ರಾಮಗಳನ್ನು ರದ್ದುಪಡಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ : ಸಚಿವ ಆರ್. ಅಶೋಕ್ - ತಾಲ್ಲೂಕು ಕಚೇರಿ ಮಾದರಿಯಲ್ಲೇ ನಾಡಕಚೇರಿ ನಿರ್ಮಾಣ

ಕೆಲವು ಕಡೆ ವಡ್ಡರಹಟ್ಟಿ, ಕುರುಬರ ಹಟ್ಟಿ ಹೀಗೆ ನಾನಾ ರೀತಿ ಜಾತಿ ಸೂಚಕ ಹೆಸರಿನಲ್ಲಿ ಗ್ರಾಮಗಳನ್ನು ನಾಮಕರಣ ಮಾಡಿಕೊಂಡಿದ್ದಾರೆ. ತಕ್ಷಣವೇ ಜಾತಿ ಹೆಸರಿರುವ ಗ್ರಾಮಗಳನ್ನು ತೆಗೆದು ಹಾಕಲು ಸೂಚನೆ ನೀಡುವುದಾಗಿ ಸಚಿವ ಆರ್. ಅಶೋಕ್ ತಿಳಿಸಿದರು..

ಸಚಿವ ಆರ್. ಅಶೋಕ್
ಸಚಿವ ಆರ್. ಅಶೋಕ್

By

Published : Mar 14, 2022, 3:47 PM IST

Updated : Mar 14, 2022, 4:40 PM IST

ಬೆಂಗಳೂರು :ರಾಜ್ಯದಲ್ಲಿ ಜಾತಿ ಸೂಚಕ ಇರುವ ಗ್ರಾಮಗಳನ್ನು ರದ್ದುಪಡಿಸಲು ತಕ್ಷಣ ಜಿಲ್ಲಾಕಾರಿಗಳಿಗೆ ಸೂಚನೆ ನೀಡುವುದಾಗಿ ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

ಇಂದು ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆ ಕಾಂಗ್ರೆಸ್ ಶಾಸಕ ಬಸನಗೌಡ ತುರವಿಹಾಳ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕೆಲವು ಕಡೆ ವಡ್ಡರಹಟ್ಟಿ, ಕುರುಬರಹಟ್ಟಿ ಹೀಗೆ ನಾನಾ ರೀತಿ ಜಾತಿ ಸೂಚಕ ಹೆಸರಿನಲ್ಲಿ ಗ್ರಾಮಗಳನ್ನು ನಾಮಕರಣ ಮಾಡಿಕೊಂಡಿದ್ದಾರೆ. ತಕ್ಷಣವೇ ಜಾತಿ ಹೆಸರಿರುವ ಗ್ರಾಮಗಳನ್ನು ತೆಗೆದು ಹಾಕಲು ಸೂಚನೆ ನೀಡುವುದಾಗಿ ತಿಳಿಸಿದರು.

ಜಾತಿ ಸೂಚಕ ಇರುವ ಗ್ರಾಮಗಳನ್ನು ರದ್ದುಪಡಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ

ಈ ವೇಳೆ ಶಾಸಕ ರಮೇಶ್‍ ಕುಮಾರ್ ಅವರು ಮಧ್ಯಪ್ರವೇಶಿಸಿ, ಕೆಲವು ಕಡೆ ವಡ್ಡರಪಾಳ್ಯ, ಮಾದಿಗರಹಳ್ಳಿ ಸೇರಿದಂತೆ ಜಾತಿಸೂಚಕ ಹೆಸರನ್ನು ಗ್ರಾಮಗಳಿಗೆ ಇಟ್ಟುಕೊಂಡಿದ್ದಾರೆ. ದಯವಿಟ್ಟು ಇದನ್ನು ತೆಗೆದು ಹಾಕಲು ನಿಮ್ಮ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ಕೊಡಿ, ಇದಕ್ಕೆ ಹೆಚ್ಚಿನ ಸಮಯ ಬೇಕಾಗುವುದಿಲ್ಲ. ಇದೆಲ್ಲ ಕೇವಲ ಕೆಲವೇ ದಿನಗಳು ನಡೆಯುವ ಪ್ರಕ್ರಿಯೆ ಎಂದು ಸಲಹೆ ನೀಡಿದರು.

ದಾಖಲೆ ರಹಿತ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ಕ್ರಮ :

ನಂತರ ಮಾತನಾಡಿದ ಸಚಿವ ಅಶೋಕ್, ಲಂಬಾಣಿ ತಾಂಡಾ, ಗೊಲ್ಲರಹಟ್ಟಿ, ವಡ್ಡರಹಟ್ಟಿ, ಕುರುಬರಹಟ್ಟಿ, ನಾಯಕರ ಹಟ್ಟಿ, ಮಜರೇಗ್ರಾಮ, ಹಾಡಿ, ದೊಡ್ಡಿ, ಪಾಳ್ಯ, ಕ್ಯಾಂಪ್ ಕಾಲೋನಿ ಇತರೆ ದಾಖಲೆ ರಹಿತ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಬೇಕು. ಇದು ಒಂದೆರಡು ತಿಂಗಳಲ್ಲಿ ನಡೆಯುವ ಪ್ರಕ್ರಿಯೆ ಅಲ್ಲ. ಎಷ್ಟೇ ವೇಗವಾಗಿ ಪ್ರಕ್ರಿಯೆಗಳು ನಡೆದರೂ ಕನಿಷ್ಟ 8 ರಿಂದ 9 ತಿಂಗಳು ಬೇಕಾಗುತ್ತದೆ ಎಂದರು.

ಆಗ ಶಾಸಕ ಅಶೋಕ್ ನಾಯಕ್ ಮಧ್ಯಪ್ರವೇಶಿಸಿ, ಉಪಗ್ರಹಗಳ ಮೂಲಕ ನಕ್ಷೆ ತಯಾರಿಸಿ ಕಂದಾಯ ಗ್ರಾಮಗಳನ್ನು ಗುರುತಿಸಬಹುದು. ಇದಕ್ಕೆ ಹೆಚ್ಚಿನ ಸಮಯ ಬೇಕಾಗುವುದಿಲ್ಲ ಎಂದು ಸಲಹೆ ನೀಡಿದರು.

ಇದಕ್ಕೆ ದನಿಗೂಡಿಸಿದ ಶಾಸಕ ಪಿ.ರಾಜೀವ್, ಕೇಂದ್ರ ಸರ್ಕಾರ ಸ್ವಾಮಿತ್ವ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯನ್ನು ಬಳಸಿಕೊಂಡು ಕಂದಾಯ ಗ್ರಾಮಗಳನ್ನು ಗುರುತಿಸಬಹುದು. ಈಗಾಗಲೇ ರಾಯಚೂರು ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಇದು ಯಶಸ್ವಿಯಾಗಿದೆ. ಇದನ್ನು ರಾಜ್ಯಾದ್ಯಂತ ಬಳಸಿಕೊಳ್ಳಬೇಕು ಎಂದರು.

ಶಾಸಕರು ನೀಡಿರುವ ಸಲಹೆಗಳನ್ನು ಖಂಡಿತವಾಗಿಯೂ ಪರಿಗಣಿಸುವುದಾಗಿ ಅಶೋಕ್ ಹೇಳಿದರು. ರಾಜ್ಯದಲ್ಲಿರುವ ಲಂಬಾಣಿ, ಗೊಲ್ಲ, ಭೋವಿ, ನಾಯಕ, ಸೋಲಿಗ, ಕಾಡುಕುರುಬ ಸೇರಿದಂತೆ ದುರ್ಬಲ ಸಮುದಾಯಗಳ ಜನರ ವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಪ್ರಸ್ತಾವನೆ ಸರ್ಕಾರದ ಮಟ್ಟದಲ್ಲಿದೆ.

ರಾಜ್ಯದಲ್ಲಿ 3,499 ದಾಖಲೆ ರಹಿತ ಜನವಸತಿ ಪ್ರದೇಶಗಳ ಪೈಕಿ 632 ಗ್ರಾಮಗಳಿಗೆ ಪ್ರಾಥಮಿಕ ಅಸೂಚನೆ ಹೊರಡಿಸಲಾಗಿದೆ. 1,441 ಗ್ರಾಮಗಳಿಗೆ ಅಂತಿಮ ಅಧಿಸೂಚನೆ ಹೊರಡಿಸಿ ಕಂದಾಯ ಗ್ರಾಮಗಳನ್ನಾಗಿ ಘೋಷಿಸಲಾಗಿದೆ. ಇನ್ನಳಿದವುಗಳಿಗೆ ಕಾಲಾವಕಾಶ ಬೇಕಾಗುತ್ತದೆ ಎಂದರು.

ನಾನು ಕಂದಾಯ ಸಚಿವನಾದ ಮೇಲೆ ರಾಜ್ಯದ ಯಾವುದೇ ಭಾಗದಲ್ಲೂ ಸ್ಮಶಾನಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಸಾಮಾನ್ಯರು ಹೀಗೆ ತಾರತಮ್ಯ ಮಾಡದೆ ಎಲ್ಲರಿಗೂ ಏಕರೀತಿಯ ಸ್ಮಶಾಸನವನ್ನು ನೀಡಿದ್ದೇವೆ ಎಂದು ಸ್ಪಷ್ಟಪಡಿಸಿದರು.

ತಾಲೂಕು ಕಚೇರಿ ಮಾದರಿಯಲ್ಲೇ ನಾಡಕಚೇರಿ ನಿರ್ಮಾಣ :ರಾಜ್ಯದ ಎಲ್ಲ ಕಡೆ ತಾಲೂಕು ಕಚೇರಿ ಮಾದರಿಯಲ್ಲೇ ನಾಡಕಚೇರಿಯನ್ನು ಸುಸಜ್ಜಿತವಾಗಿ ನಿರ್ಮಾಣ ಮಾಡುವುದಾಗಿ ಕಂದಾಯ ಸಚಿವ ಆರ್.ಅಶೋಕ್ ಅವರು, ಪ್ರಶ್ನೋತ್ತರ ವೇಳೆ ಶಾಸಕ ಹೊಲಗೇರಿ.ಡಿ.ಎಸ್ ಪರವಾಗಿ ಅಮರೇಗೌಡ ಬಯ್ಯಾಪುರ ಅವರ ಪ್ರಶ್ನೆಗೆ ಉತ್ತರಿಸಿದರು. ಕಂದಾಯ ಇಲಾಖೆಯಿಂದ ಈಗ ನಾವು ತಾಲೂಕು ಕಚೇರಿಗಳನ್ನು ನಿರ್ಮಿಸುತ್ತಿದ್ದೇವೆ. ಇದು ಸುಸಜ್ಜಿತವಾಗಿದ್ದು, ಎಲ್ಲ ಸೌಲಭ್ಯಗಳು ಇರಲಿವೆ. ಇದೇ ಮಾದರಿಯಲ್ಲಿ ನಾಡಕಚೇರಿಯನ್ನು ನಿರ್ಮಾಣ ಮಾಡುವುದಾಗಿ ತಿಳಿಸಿದರು.

ಮಧ್ಯಪ್ರವೇಶಿಸಿದ ಶಾಸಕರಾದ ಕುಮಾರ ಬಂಗಾರಪ್ಪ, ಅಮರೇಗೌಡ ಬಯ್ಯಾಪುರ, ಯು.ಟಿ.ಖಾದ್, ಪಿ.ರಾಜೀವ್, ವೆಂಕಟರಾವ್ ನಾಡಗೌಡ ಸೇರಿದಂತೆ ಹಲವು ಶಾಸಕರು, ನಾಡಕಚೇರಿಗಳಲ್ಲಿ ಒಂದು ಕುರ್ಚಿಯನ್ನು ಹಾಕಿ ಕುಳಿತುಕೊಳ್ಳಲು ಜಾಗವಿರುವುದಿಲ್ಲ. ಇನ್ನು ಶಾಸಕರು ಸಭೆ ನಡೆಸುವುದಾದರೂ ಹೇಗೆ ಎಂದು ಪ್ರಶ್ನಿಸಿದರು. ನಾಡಕಚೇರಿ ನಿರ್ಮಾಣ ಮಾಡಲು 18 ಲಕ್ಷ ಅನುದಾನ ನೀಡುತ್ತಾರೆ. ನಾವು ಇದರಲ್ಲೇ ನಿರ್ವಹಣೆ ಮಾಡಬೇಕಾದ ಅಗತ್ಯವಿದೆ ಎಂದು ಅಶೋಕ್ ಹೇಳಿದರು.

ಉಪ ನೋಂದಣಿ ಕಚೇರಿ ಮಂಜೂರು :ಜೆಡಿಎಸ್ ಶಾಸಕ ಎ.ಮಂಜುನಾಥ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಅಶೋಕ್, ಕುದೂರು ಮತ್ತು ಬಿಡದಿಯಲ್ಲಿ ತಕ್ಷಣವೇ ಉಪ ನೋಂದಣಾಕಾರಿ ಕಚೇರಿ ತೆರೆಯಲು ಸೂಚನೆ ನೀಡುವುದಾಗಿ ತಿಳಿಸಿದರು. ಉಪ ನೋಂದಣಾ ಕಚೇರಿಗಳು ಸರ್ಕಾರಕ್ಕೆ ಆದಾಯ ತರುವ ಕಚೇರಿಗಳು, ನಾನು ಸಿಎಂ ಜೊತೆ ಚರ್ಚಿಸಿದ್ದೇನೆ. ಎಲ್ಲೆಲ್ಲಿ ಅಗತ್ಯವಿದೆಯೋ ಅಂತಹ ಕಡೆ ತೆರೆಯಬೇಕೆಂದು ಅವರು ಸೂಚನೆ ಕೊಟ್ಟಿರುವುದಾಗಿ ಹೇಳಿದರು.

ಅಕ್ರಮ-ಸಕ್ರಮ :ತುಮಕೂರು ಜಿಲ್ಲೆ ಶಿರಾ ತಾಲೂಕಿನ ಮುದಿಗೆರೆಯಲ್ಲಿ ಅಕ್ರಮ ಸಕ್ರಮ ಯೋಜನೆಯಡಿ ಸಾಗುವಳಿದಾರರಿಗೆ ಶೀಘ್ರದಲ್ಲೇ ಭೂ ಮಂಜೂರಾತಿ ಪತ್ರವನ್ನು ನೀಡಲಾಗುವುದು ಎಂದು ಕಂದಾಯ ಸಚಿವ ಅಶೋಕ್ ಅವರು ಪ್ರಶ್ನೋತ್ತರ ವೇಳೆ ಶಾಸಕ ರಾಜೇಶ್‍ಗೌಡ ಅವರ ಪ್ರಶ್ನೆಗೆ ಉತ್ತರಿಸಿದರು.

ಶಿರಾ ತಾಲೂಕಿನ ಮುದಿಗೆರೆ ಗ್ರಾಮದ ಸರ್ವೆ ನಂ.12ರಲ್ಲಿ ಕಂದಾಯ ಮತ್ತು ಅರಣ್ಯ ಇಲಾಖೆಯಿಂದ ಶೀಘರದಲ್ಲೇ ಸರ್ವೇ ನಡೆಸಿ ಗಡಿ ಗುರುತಿಸುವಿಕೆ ಕೆಲಸ ಮಾಡಲಾಗುವುದು. ನಂತರ ಸಾಗುವಳಿದಾರರಿಗೆ ಭೂ ಮಂಜೂರಾತಿ ಮಾಡಲು ಜಿಲ್ಲಾಕಾರಿಗಳಿಗೆ ಸೂಚನೆ ನೀಡುವುದಾಗಿ ತಿಳಿಸಿದರು. ಭೂ ಮಂಜೂರಾತಿ ಮಾಡುವ ಕುರಿತು ಸಮಿತಿಯನ್ನು ರಚಿಸಲಾಗಿದೆ.

ಕಂದಾಯ ಮತ್ತು ಅರಣ್ಯ ಇಲಾಖೆಯಿಂದ ಜಂಟಿ ಸಮೀಕ್ಷೆ ನಡೆಸಲು ಜಿಲ್ಲಾಕಾರಿಗಳಿಗೆ ಸೂಚನೆ ಕೊಡಲಾಗಿದೆ. ಈ ಮೊದಲು ನಮಗೆ ಸಮೀಕ್ಷೆ ನಡೆಸಲು ಸರ್ವೇಯರ್​​​ಗಳ ಕೊರತೆ ಇತ್ತು. ಈಗ ನೋಂದಾಯಿತ 3 ಸಾವಿರ ಸರ್ವೇಯರ್​​ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಆದಷ್ಟು ಬೇಗ ಗಡಿ ಗುರುತಿಸುವಿಕೆ ಕಾರ್ಯ ಮುಗಿದ ನಂತರ ಉಳುಮೆ ಚೀಟಿಯನ್ನು ರೈತರಿಗೆ ನೀಡಲಾಗುವುದು ಎಂದರು.

ಇದಕ್ಕೂ ಮುನ್ನ ರಾಜೇಶ್ ಗೌಡ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಶಿರಾದ ಅನೇಕ ಕಡೆ ಅಕ್ರಮ ಸಕ್ರಮ ಯೋಜನೆಯಡಿ ಬಡವರು ಜಮೀನನ್ನು ಸಾಗುವಳಿ ಮಾಡಿಕೊಂಡಿದ್ದಾರೆ. ಆದರೆ ಅರಣ್ಯ ಮತ್ತು ಕಂದಾಯ ಇಲಾಖೆ ಅಕಾರಿಗಳ ಕಿರುಕುಳದಿಂದ ಸಾಗುವಳಿ ಚೀಟಿ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ಸಮಸ್ಯೆಯನ್ನು ತಕ್ಷಣವೇ ಪರಿಹರಿಸಬೇಕೆಂದು ಮನವಿ ಮಾಡಿದರು.

Last Updated : Mar 14, 2022, 4:40 PM IST

For All Latest Updates

TAGGED:

ABOUT THE AUTHOR

...view details